- ಜಿಲ್ಲಾಡಳಿತ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನ ಕಾರ್ಯಕ್ರಮ ।

- ಸ್ಥಾನಮಾನ ಗೌರವದಿಂದ ಕಾಪಾಡಿಕೊಳ್ಳಿ: ನ್ಯಾ.ರೇಷ್ಮಾ ಸಲಹೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಅವರಲ್ಲಿ ಸ್ವಾವಲಂಬನೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ತುಂಬಬೇಕು. ಆಗ ಮಾತ್ರ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾದ ಡಿ.ಕೆ.ವೇಲಾ ಅಭಿಪ್ರಾಯಪಟ್ಟರು.


ನಗರದ ಅಕ್ಕಮಹಾದೇವಿ ರಸ್ತೆಯ ಗುರು ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರಿಗೆ ಕುಟುಂಬದ ಜವಾಬ್ದಾರಿಗಳ ನಡುವೆ ತಮ್ಮನ್ನು ತಾವು ಗುರುತಿಸಿಕೊಳ್ಳಲು ಈ ದಿನ ಉತ್ತಮ ವೇದಿಕೆಯಾಗಿದೆ. ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣದ ಹಕ್ಕು ಇರಲಿಲ್ಲ. ಆದರೆ, ಇಂದಿನ ಬದಲಾದ ಸಮಾಜದಲ್ಲಿ ಶಿಕ್ಷಣವೇ ಮಹಿಳೆಯರ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ದೇಶದ ಮಹಾನ್ ನಾಯಕರು ಮಹಿಳಾಪರ ಚಿಂತನೆಗಳನ್ನು ಯಾವ ರೀತಿ ಬಣ್ಣಿಸಿದ್ದಾರೆಂದರೆ, ಸ್ವಾಮಿ ವಿವೇಕಾನಂದರ ವಿಚಾರದಂತೆ, ಮಹಿಳೆಯರು ತಮ್ಮ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಡಾ. ಬಿ.ಆರ್. ಅಂಬೇಡ್ಕರ್ ರೂಪಿಸಿದ ಹಿಂದೂ ಕೋಡ್ ಬಿಲ್ ಮಹಿಳೆಯರಿಗೆ ಆಸ್ತಿ ಮತ್ತು ಹಕ್ಕುಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂದಿರಾ ಗಾಂಧಿಯವರ ನಾಯಕತ್ವವು ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು.

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮಹಿಳೆಯರು ಕೇವಲ ಗೃಹಿಣಿಯರಾಗಿ ಉಳಿಯದೇ, ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಷಯ. ಇತ್ತೀಚಿನ ಕಾನೂನು ತಿದ್ದುಪಡಿಗಳ ಅನ್ವಯ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕು ದೊರೆಯುತ್ತಿರುವುದು ಸ್ವಾಗತಾರ್ಹ. ಆದರೆ, ಈ ಹಕ್ಕಿನ ಚಲಾವಣೆಯು ಕುಟುಂಬದ ಒಗ್ಗಟ್ಟು ಮತ್ತು ಅಣ್ಣ- ತಮ್ಮಂದಿರೊಂದಿಗಿನ ಬಾಂಧವ್ಯಕ್ಕೆ ಧಕ್ಕೆ ತರಬಾರದು. ಜೀವನದಲ್ಲಿ ಎಲ್ಲವನ್ನೂ ಗಳಿಸಿದರೂ ಕೊನೆಗೆ ಯಾವುದೂ ಶಾಶ್ವತವಲ್ಲ ಎಂಬ ತಿಳಿವಳಿಕೆ ಬೆಳೆಸಿಕೊಂಡು, ಕುಟುಂಬದ ಹಿತದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಎಚ್.ಕೆ.ರೇಷ್ಮಾ ಮಾತನಾಡಿ, ಅಂತರ ರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯರಿಗೆ ಹಕ್ಕು ಮತ್ತು ಜವಾಬ್ದಾರಿಗಳ ಸಮತೋಲನ ಅಗತ್ಯವಾಗಿದೆ. ಮಹಿಳೆಯರು ಕೇವಲ ಹಕ್ಕುಗಳಿಗಾಗಿ ಹೋರಾಡುವುದಲ್ಲದೇ, ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳ ಅರಿತು ಮುನ್ನಡೆಯಬೇಕು. ಸಮಾಜದಲ್ಲಿ ಸಿಕ್ಕಿರುವ ಸ್ಥಾನಮಾನ ಗೌರವಯುತವಾಗಿ ಬಳಸಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನಿಸಲಾಯಿತು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ದಾವಣಗೆರೆ ಉತ್ತರದ ಕ್ಷೇತ್ರ ಶಿಕ್ಷಣಾಧಿಕಾರಿ ವಿಶಾಲಾಕ್ಷಿ, ಜಿಲ್ಲಾ ಮಕ್ಕಳ ಘಟಕ ರಕ್ಷಣಾಧಿಕಾರಿ ಕವಿತಾ ಮತ್ತು ಶಾಲಾ ಶಿಕ್ಷಣ ಇಲಾಖೆಯ ಪೂರ್ಣಿಮಾ ಗುರುಪ್ರಸಾದ್ ಉಪಸ್ಥಿತರಿದ್ದರು.

- - -

(ಬಾಕ್ಸ್‌) * ಪುರುಷರ ಪ್ರೋತ್ಸಾಹ-ಬೆಂಬಲ ಅಗತ್ಯ: ನ್ಯಾ.ಮಹಾವೀರ

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣನವರ ಮಾತನಾಡಿ, ಸ್ತ್ರೀ ಶಕ್ತಿಯೇ ಸೃಷ್ಟಿಯ ಮೂಲ, ಮಹಿಳಾ ಸಬಲೀಕರಣಕ್ಕೆ ಪುರುಷರ ಪ್ರೋತ್ಸಾಹ ಮತ್ತು ಬೆಂಬಲ ಅಗತ್ಯವಿದೆ. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಎಂಬ ಸಂಸ್ಕೃತದ ನಾಣ್ಣುಡಿಯಂತೆ, ಎಲ್ಲಿ ಮಹಿಳೆಯರನ್ನು ಗೌರವಿಸಲಾಗುತ್ತದೆಯೋ ಅಲ್ಲಿ ದೈವತ್ವ ನೆಲೆಸಿರುತ್ತದೆ. ಇಂದಿನ ಆಧುನಿಕ ಸಮಾಜದಲ್ಲಿ ಕೇವಲ ಪೂಜಿಸುವುದಷ್ಟೇ ಅಲ್ಲ, ಮಹಿಳೆಯರಿಗೆ ಸಮಾನ ಗೌರವ ಮತ್ತು ಸಮಾನ ಅವಕಾಶಗಳನ್ನು ನೀಡುವುದು ಅತ್ಯಗತ್ಯ ಎಂದರು. ಪುರಾಣ ಕಾಲದಿಂದಲೂ ಮಹಿಳೆ ತಾಳ್ಮೆ ಮತ್ತು ಸಹನ ಶಕ್ತಿಯ ಸಾಕಾರವಾಗಿದ್ದಾಳೆ. ಸೀತೆ ಮತ್ತು ದ್ರೌಪದಿಯಂತಹ ಮಹಾನ್ ನಾರಿಯರು ಎದುರಿಸಿದ ಕಷ್ಟಗಳು ಇತಿಹಾಸದಲ್ಲಿ ದಾಖಲಾಗಿವೆ. ಮಹಿಳೆಯನ್ನು ಕೇವಲ ''''''''ಅಬಲೆ'''''''' ಎಂದು ಕಾಣುವ ಕಾಲ ಬದಲಾಗಬೇಕು. ಇಂದಿನ ಮಹಿಳೆ ಸೈನ್ಯ, ಬಾಹ್ಯಾಕಾಶ ಸಂಶೋಧನೆ ಮತ್ತು ನ್ಯಾಯಾಂಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸುತ್ತಿದ್ದಾಳೆ. ಸಂವಿಧಾನವು ಮಹಿಳೆ ಮತ್ತು ಪುರುಷರಿಗೆ ಸಮಾನ ಹಕ್ಕುಗಳನ್ನು ನೀಡಿದೆ. ಸಮಾಜವೆಂಬ ರಥ ಸುಗಮವಾಗಿ ಸಾಗಬೇಕಾದರೆ ಸ್ತ್ರೀ ಮತ್ತು ಪುರುಷರು ರಥದ ಎರಡು ಚಕ್ರಗಳಂತೆ ಜೊತೆಯಾಗಿ ಸಾಗಬೇಕು. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆಯಿರುತ್ತಾಳೆ ಎಂಬ ಗಾದೆಯನ್ನು ಇಂದಿನ ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬೇಕಿದೆ ಎಂದರು.

- - -

(ಟಾಪ್‌ ಕೋಟ್‌) ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದಿದೆ. ಬಾಲ್ಯ ವಿವಾಹ ತಡೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಹಕಾರದ ಅಗತ್ಯವಿದೆ. ವರದಕ್ಷಿಣೆ ಕಿರುಕುಳ ಮತ್ತು ಗೃಹ ಹಿಂಸೆಯ ವಿರುದ್ಧ ಮಹಿಳೆಯರು ಧ್ವನಿ ಎತ್ತಬೇಕಿದೆ. ದೇಶದ ಉನ್ನತ ಹುದ್ದೆಗಳಾದ ರಾಷ್ಟ್ರಪತಿ ಮತ್ತು ಹಣಕಾಸು ಸಚಿವ ಸ್ಥಾನಗಳಲ್ಲಿ ಮಹಿಳೆಯರು ಇರುವುದು ನಮಗೆಲ್ಲರಿಗೂ ಪ್ರೇರಣೆ.

- ಮಹಾವೀರ ಮ. ಕರೆಣ್ಣನವರ, ನ್ಯಾಯಾಧೀಶ.

- - -

-8ಕೆಡಿವಿಜಿ37, 38.ಜೆಪಿಜಿ:

ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮವನ್ನ ನ್ಯಾಯಾಧೀಶರಾದ ಡಿ.ಕೆ.ವೇಲಾ ಉದ್ಘಾಟಿಸಿದರು.