ಸಾರಾಂಶ
ಕುಷ್ಟಗಿ: ಮಹಿಳಾ ಆರ್ಥಿಕ ಸಬಲೀಕರಣದ ಯೋಜನೆ ಸಂಖ್ಯೆಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಸಿವಿಸಿ ಫೌಂಡೇಶನ್ ನಿರ್ದೇಶಕಿ ಲಕ್ಷ್ಮೀದೇವಿ ಚಂದ್ರಶೇಖರ್ ಹೇಳಿದರು.
ಪಟ್ಟಣದ ಎಸ್‌ವಿಸಿ ಕಾಲೇಜಿನಲ್ಲಿ ಸಿವಿಸಿ ಫೌಂಡೇಶನ್, ಕೊಪ್ಪಳ, ಎಸ್ ವಿ ಸಿ ಶಿಕ್ಷಣ ಸಂಸ್ಥೆ, ಕುಷ್ಟಗಿ, ರಿಚ್ ಮಚ್ ಹೈಯರ್ ಫೌಂಡೇಶನ್ ಬೆಂಗಳೂರು ಹಾಗೂ ಇಂಟೆಲ್ ಸಂಸ್ಥೆ, ಬೆಂಗಳೂರು ಜಂಟಿಯಾಗಿ ಆಯೋಜಿಸಿದ್ದ ಮೂರು ತಿಂಗಳ ಉಚಿತ ಬ್ಯೂಟಿಷಿಯನ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹಿಳಾ ಸಬಲೀಕರಣದ ಕಾರ್ಯಕ್ರಮಗಳು ಹಾಗೂ ಉಚಿತ ಯೋಜನೆ ಮಹಿಳೆಯರ ಬದುಕನ್ನು ಬದಲಿಸಿವೆ. ಒಬ್ಬ ಮಹಿಳೆ ಆರ್ಥಿಕವಾಗಿ ಸದೃಢಗೊಂಡರೆ ಎರಡು ಕುಟುಂಬಗಳು ಸದೃಢಗೊಂಡಂತೆ. ಆರ್ಥಿಕ ಸಬಲೀಕರಣದ ಯೋಜನೆಗಳ ಸಂಖ್ಯೆ ಹೆಚ್ಚಾದಂತೆ ಕುಟುಂಬ ಹಾಗೂ ಸಮಾಜದ ಆರ್ಥಿಕ ಶಕ್ತಿ ಹೆಚ್ಚಾಗಿ ಅದು ಪ್ರಗತಿಗೆ ನಾಂದಿ ಹಾಡುತ್ತದೆ. ಆದ್ದರಿಂದ ಸಿವಿಸಿ ಫೌಂಡೇಶನ್ ಮಹಿಳಾ ಸಬಲೀಕರಣದ ಕಾರ್ಯಕ್ರಮ ಹೆಚ್ಚಿನ ಸಂಖ್ಯೆಯಲ್ಲಿ ಹಮ್ಮಿಕೊಳ್ಳುತ್ತಿದೆ ಎಂದರು.
ಎಸ್ ವಿ ಸಿ ಸಂಸ್ಥೆಯ ಸಿಇಓ ಡಾ.ಜಗದೀಶ ಅಂಗಡಿ ಮಾತನಾಡಿ, ಆರ್ಥಿಕ ಶಕ್ತಿ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಸ್ವತಂತ್ರವಾಗಿ ಬದುಕುವ ಹಾಗೂ ನಿರ್ಧಾರ ಕೈಗೊಳ್ಳುವ ಶಕ್ತಿ ತುಂಬುತ್ತದೆ. ಮೂಲಭೂತವಾಗಿ ಮಹಿಳೆಯರು ಪುರುಷರಿಗಿಂತ ಆರ್ಥಿಕ ಶಿಸ್ತಿಗೆ ಹಾಗೂ ಹಣದ ಉಳಿತಾಯಕ್ಕೆ ಮಹತ್ವ ನೀಡುತ್ತಾರೆ. ಆದ್ದರಿಂದ ಮಹಿಳೆಯರಿಗೆ ಸ್ವಉದ್ಯೋಗದ ಅವಕಾಶ ಸೃಷ್ಟಿಸುವ ಅಗತ್ಯವಿದೆ ಎಂದು ಹೇಳಿದರು.ಎಸ್ ವಿ ಸಿ ಶಾಲೆಗಳ ಶೈಕ್ಷಣಿಕ ನಿರ್ದೇಶಕ ಭೀಮರಾವ್ ಕುಲಕರ್ಣಿ ಮಾತನಾಡಿ, ಮೂರು ತಿಂಗಳ ಬ್ಯೂಟಿಷಿಯನ್ ಕೋರ್ಸ್ ಕಲಿಯಬೇಕೆಂದರೆ ಸುಮಾರು ₹50 ಸಾವಿರ ತಗಲುತ್ತದೆ. ಬೆಂಗಳೂರಿನ ಇಂಟೆಲ್ ಸಂಸ್ಥೆ, ರಿಚ್ ಮಚ್ ಹೈಯರ್ ಸಂಸ್ಥೆ, ಎಸ್ ವಿ ಸಿ ಸಂಸ್ಥೆ ಹಾಗೂ ಸಿವಿಸಿ ಫೌಂಡೇಶನ್ ಜೊತೆಯಾಗಿ 25 ಮಹಿಳೆಯರಿಗೆ ಉಚಿತ ಶಿಬಿರ ನಡೆಸಿದ್ದಾರೆ. ಇದನ್ನು ಸದುಪಯೋಗಪಡಿಸಿಕೊಂಡರೆ ಪ್ರತಿ ಶಿಬಿರಾರ್ಥಿ ಸುಮಾರು ಹತ್ತರಿಂದ ಹದಿನೈದು ಸಾವಿರ ಮಾಸಿಕ ಆದಾಯ ಗಳಿಸಲು ಸಾಧ್ಯವಿದೆ ಎಂದು ಹೇಳಿದರು.
ತರಬೇತುಗಾರ್ತಿ ಶಿಲ್ಪಾ ಮಾತನಾಡಿ, ಶಿಬಿರದಲ್ಲಿ ಕಲಿತ ವಿಷಯ ಬಳಸಿಕೊಂಡು ಸ್ವಉದ್ಯೋಗ ಮಾಡಿದಾಗ ಜೀವನದಲ್ಲಿ ಬದಲಾವಣೆ ಸಾಧ್ಯ ಶಿಬಿರಾರ್ಥಿಗಳು ತಮ್ಮದೇ ಬ್ಯೂಟಿ ಪಾರ್ಲರ್ ಆರಂಭಿಸಿ ಆರ್ಥಿಕ ಮುನ್ನಡೆ ಸಾಧಿಸಬೇಕು ಎಂದು ಹೇಳಿದರು.ಶಿಬಿರಾರ್ಥಿ ಝೇಬಾ ಮಾತನಾಡಿ, ಬದುಕು ಬದಲಿಸುವ ಇಂತಹ ಯೋಜನೆ ನಮ್ಮಂತ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ ವಿ ಸಿ ಪಿ ಯು ಕಾಲೇಜಿನ ಪ್ರಾಂಶುಪಾಲ ಭೀಮಸೇನ್ ಆಚಾರ್ ಹಾಜರಿದ್ದರು. ಪ್ರತಿ ಶಿಬಿರಾರ್ಥಿಗೆ ಸ್ವಉದ್ಯೋಗ ಕೈಗೊಳ್ಳಲು ಉಚಿತ ಕಿಟ್ ವಿತರಿಸಲಾಯಿತು.;Resize=(128,128))
;Resize=(128,128))
;Resize=(128,128))
;Resize=(128,128))