ಜಾಲ ತಾಣಗಳಿಂದ ಮಹಿಳೆ ಅಸುರಕ್ಷಿತವೆಂಬ ಭಾವನೆ

| Published : Oct 03 2025, 01:07 AM IST

ಸಾರಾಂಶ

ಸಾಮಾಜಿಕ ಜಾಲತಾಣಗಳ ಕಾರ್ಯ ವೈಖರಿಯಿಂದಾಗಿ ಪ್ರಸ್ತುತ ಮಹಿಳೆ ಅಸುರಕ್ಷಿತವೆಂಬ ಭಾವನೆ ಮೂಡುತ್ತಿದೆ ಎಂದು ಮನೋವೈದ್ಯೆ ಡಾ.ಸೌಜನ್ಯ ವಶಿಷ್ಠ ಆತಂಕ ವ್ಯಕ್ತಪಡಿಸಿದರು.

ಚಿತ್ರದುರ್ಗ: ಸಾಮಾಜಿಕ ಜಾಲತಾಣಗಳ ಕಾರ್ಯ ವೈಖರಿಯಿಂದಾಗಿ ಪ್ರಸ್ತುತ ಮಹಿಳೆ ಅಸುರಕ್ಷಿತವೆಂಬ ಭಾವನೆ ಮೂಡುತ್ತಿದೆ ಎಂದು ಮನೋವೈದ್ಯೆ ಡಾ.ಸೌಜನ್ಯ ವಶಿಷ್ಠ ಆತಂಕ ವ್ಯಕ್ತಪಡಿಸಿದರು. ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆಯರು ಸ್ವತಂತ್ರವಾಗಿ ಅಲೋಚನೆ ಮಾಡಿ ಧೈರ್ಯ ಮತ್ತು ಸ್ವತಂತ್ರವಾಗಿ ಅಭಿವ್ಯಕ್ತ ವ್ಯಕ್ತಪಡಿಸುವುದನ್ನು ಕಲಿಯಬೇಕು. ಅಭದ್ರತೆ ಯೋಚನೆಯಿಂದ ಹೊರಬರಬೇಕೆಂದರು. ಚಿತ್ರದುರ್ಗ ಧೈರ್ಯದ ಸಂಕೇತವಾಗಿ ಓನಕೆ ಒಬವ್ವ ಕಣ್ಣ ಮುಂದೆ ಇದ್ದಾರೆ. ಅಧುನಿಕ ಸಂದರ್ಭದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ ಮುನ್ನಡಿ ಬರೆದಿದ್ದಾರೆ. ಪ್ರಪಂಚ ಬಹಳ ವಿಶಾಲವಾಗಿದೆ. ಪ್ರತಿಯೊಬ್ಬರಿಂದ ಕಲಿಯುವ ಅನೇಕ ವಿಷಯಗಳು ಇರುತ್ತವೆ. ಮಹಿಳೆಯರು ಮಾನಸಿಕ ಸದೃಢತೆ ಬೆಳೆಸಿಕೊಳ್ಳಬೇಕು. ಮೊದಲು ನಿಮ್ಮನ್ನು ನೀವು ಪ್ರೀತಿಸುವುದನ್ನು ಕಲಿಯಬೇಕು ಎಂದರು.ಕನಕಗುರು ಪೀಠದ ಸಿದ್ಧರಮಾನಂದಪುರಿ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರ ಹೋರಾಟಕ್ಕೆ ಬೆನ್ನೆಲುಬಾಗಿ ಗಂಗಾಬಿಕೆ, ನೀಲಾಂಬಿಕೆ ಮತ್ತು ಅಕ್ಕ ನಾಗಮ್ಮ ತ್ಯಾಗ ಮಾಡಿದ್ದಾರೆ. ನಮ್ಮದು ಮಾತೃ ಪ್ರಧಾನ ಸಂಸ್ಕೃತಿಯಾಗಿದೆ. ಹಿಂದೆ ದಬ್ಬಾಳಿಕೆ, ಸ್ತ್ರೀ ಅಸಮಾನತೆ, ಜಾತಿ ಅಸಮಾನತೆಯನ್ನು ನಿವಾರಿಸಲು ಬಸವಣ್ಣನವರು ಮನುಷ್ಯರನ್ನು ಮನುಷ್ಯರನ್ನಾಗಿ ಕಾಣಿ ಎಂಬ ಸಂದೇಶವನ್ನು ನೀಡಿದರು. ಇತ್ತೀಚಿನ ದಿನಗಳಲ್ಲಿ ವೈವಾಹಿಕ ಜೀವನ ಸಂಬಂಧಗಳು ಹಾಳಾಗುತ್ತಿವೆ. ಪರಸ್ಪರ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದರು.ಅಖಿಲ ಭಾರತ ಶರಣ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ಮಹಿಳೆಯರ ಅಸ್ತಿತ್ವ ಚಿಂತನೆ ಮತ್ತು ಜಾಗೃತಿ ಮಾಡಿದರು. ಶರಣೆ ಅಕ್ಕಮಹಾದೇವಿ ಕನ್ನಡ ನಾಡಿನ ಸ್ತ್ರೀ ಕುಲದ ಅದರ್ಶ ಮಹಿಳೆ. ಅಯ್ದಕಿ ಲಕ್ಕಮ್ಮ ವಿಶಿಷ್ಟ ಕಾಯಕ ಸಿದ್ಧಾಂತವನ್ನು ಪ್ರತಿಪಾದನೆ ಮಾಡಿದ ಶರಣೆಯಾಗಿದ್ದಾರೆ. ಏಕಕಾಲದಲ್ಲಿ 33 ಶರಣೆಯರು ವೈಚಾರಿಕ ಚಿಂತನೆಗಳ ಮೂಲಕ ಸ್ತ್ರೀ ಸ್ವತಂತ್ರ ಭದ್ರವಾದ ಬುನಾದಿಯನ್ನು ಹಾಕಿದವರು. ಇಂತಹ ಶರಣೆಯರ ಜೀವನದ ಅದರ್ಶ ಮೌಲ್ಯಗಳನ್ನು ಇಂದಿನ ಮಹಿಳೆಯರು ಪಾಲಿಸಬೇಕಿದೆ ಎಂದರು. ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಬಸವ ತತ್ವದ ವೈಚಾರಿಕ ತಳಹದಿ ಮೇಲೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿಯಲ್ಲಿ ಶ್ರೀ ಮಠವು ಕಾರ್ಯಕ್ರಮಗಳನ್ನು ರೂಪಿಸಿ ನಿರ್ವಹಿಸುತ್ತಾ ಬಂದಿದೆ ಎಂದರು.

ಶಿವಮೊಗ್ಗ ಬಸವತತ್ವ ಪೀಠದ ಶ್ರೀ ಬಸವ ಮರಳುಸಿದ್ದ ಸ್ವಾಮೀಜಿ, ಹಾಲಸ್ವಾಮಿ ವಿರಕ್ತ ಮಠದ ಡಾ.ಬಸವ ಜಯಚಂದ್ರ ಸ್ವಾಮೀಜಿ, ಹಾವೇರಿ ಜಿಲ್ಲಾ ರಕ್ಷಣಾಧಿಕಾರಿ ಯಶೋಧ ವಂಟಗೋಡಿ, ಹಿಂದುಳಿದ ವರ್ಗಕಲ್ಯಾಣ ಇಲಾಖೆಯ ಪುಷ್ಪಾಲತ, ಕಲ್ಬುರ್ಗಿ ನೀಲಾಂಬಿಕೆ ಅಕ್ಕನ ಬಳಗದ ಅಧ್ಯಕ್ಷ ಶರಣೆ ಜಯಶ್ರೀ ಚಟ್ನಳ್ಳಿ, ರೆಡ್‌ಕ್ರಾಸ್ ಸಂಸ್ಥೆಯ ಗಾಯಿತ್ರಿ ಶಿವರಾಂ, ಚಿಂತಕ ಪಾಲನೇತ್ರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ಶರಣೆ ಜಯದೇವಿ ಸ್ವಾಗತಿಸಿ, ನೇತ್ರಾವತಿ ಎಸ್.ಅರ್ ನಿರೂಪಿಸಿ ಶರಣು ಸಮರ್ಪಣೆ ಮಾಡಿದರು. ಚಿತ್ರದುರ್ಗ ಲಿಂಗಾಯತ ಮಹಾಸಭಾ ಮಹಿಳಾ ವೇದಿಕೆಯವರು ನೃತ್ಯ ಪ್ರದರ್ಶನ ನೀಡಿದರು. ವಾಣಿಜ್ಯೋದ್ಯಮಿ ಕೆ.ವಿ.ಪ್ರಭಾಕರ್, ನಿಜಲಿಂಗಪ್ಪ ಟ್ರಸ್ಟ್ ಧರ್ಮದರ್ಶಿ ಕೆಇಬಿ ಷಣ್ಮುಖಪ್ಪ ಇದ್ದರು.