ಮಹಿಳೆಯರು ಸಹಕಾರ ಬ್ಯಾಂಕಲ್ಲೇ ಸಾಲ ಪಡೆಯಿರಿ

| Published : Jan 29 2025, 01:34 AM IST

ಸಾರಾಂಶ

ರಾಮನಗರ: ಮಹಿಳೆಯರು ದೇವರ ಹೆಸರಿನಲ್ಲಿರುವ ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಪಡೆದು ಕಿರುಕುಳಕ್ಕೊಳಗಾಗುತ್ತಿದ್ದು, ಇನ್ನಾದರು ಎಚ್ಚೆತ್ತುಕೊಂಡು ಸಹಕಾರ ಕ್ಷೇತ್ರದ ಬ್ಯಾಂಕುಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆದು ದೌರ್ಜನ್ಯದಿಂದ ಮುಕ್ತರಾಗುವಂತೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಮನವಿ ಮಾಡಿದರು.

ರಾಮನಗರ: ಮಹಿಳೆಯರು ದೇವರ ಹೆಸರಿನಲ್ಲಿರುವ ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಪಡೆದು ಕಿರುಕುಳಕ್ಕೊಳಗಾಗುತ್ತಿದ್ದು, ಇನ್ನಾದರು ಎಚ್ಚೆತ್ತುಕೊಂಡು ಸಹಕಾರ ಕ್ಷೇತ್ರದ ಬ್ಯಾಂಕುಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆದು ದೌರ್ಜನ್ಯದಿಂದ ಮುಕ್ತರಾಗುವಂತೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮನೆ ಬಾಗಿಲಿಗೆ ಬಂದು ಲಕ್ಷಾಂತರ ರುಪಾಯಿ ಸಾಲ ನೀಡಿ ಅವರ ದೌರ್ಬಲ್ಯ ಬಳಸಿಕೊಂಡು ದೌರ್ಜನ್ಯ ಎಸಗುತ್ತಿದ್ದಾರೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಿದ್ದು, ಜನರು ಕೂಡ ಎಚ್ಚೆತ್ತುಕೊಳ್ಳಬೇಕು. ಬಿಡಿಸಿಸಿ ಬ್ಯಾಂಕ್ ಗಳಲ್ಲಿ ಸಾಲ ಪಡೆದು ಸಹಕಾರಿ ಕ್ಷೇತ್ರವನ್ನು ಬಲ ಪಡಿಸಬೇಕು. ಇದರಿಂದ ಗ್ರಾಮೀಣ ಜನರಿಗೆ ಮತ್ತಷ್ಟು ಉಪಯೋಗ ಆಗಲಿದೆ ಎಂದು ಹೇಳಿದರು.

ಧರ್ಮಸ್ಥಳ ಹೆಸರಿನಲ್ಲಿ ಮೈಕ್ರೋ ಫೈನಾನ್ಸ್‌ಗಳು ಹಳ್ಳಿಗಾಡಿನ ಮುಗ್ದ ಮಹಿಳೆಯರಿಗೆ ಸಾಲ ನೀಡಿ ವಂಚನೆ ಮಾಡುತ್ತಿದ್ದಾರೆ. ಅಲ್ಲದೆ, ಸಾಲ ಮರುಪಾವತಿ ಮಾಡದಿದ್ದರೆ ದೌರ್ಜನ್ಯ ಎಸಗುತ್ತಿದೆ. ಶ್ರೀ ವೀರೇಂದ್ರ ಹೆಗಡೆ ಸಂಸ್ಥೆಗೂ ಈ ಧರ್ಮಸ್ಥಳ ಹೆಸರಿನ ಮೈಕ್ರೋ ಫೈನಾನ್ಸ್ ಗಳಿಗೂ ಯಾವುದೇ ಸಂಬಂಧ ಇಲ್ಲ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.

ಮೈಕ್ರೋ ಫೈನಾನ್ಸ್ ಮನೆ ಬಾಗಿಲಿಗೆ ಬಂದು ಸರಿಯಾದ ದಾಖಲಾತಿ ಪಡೆಯದೆ, ಮೊದಲೇ 10ರಿಂದ 12 ಜನರ ಗುಂಪು ಮಾಡಿ 10ರಿಂದ 15 ಲಕ್ಷ ಸಾಲ ಕೊಡುತ್ತಾರೆ. ಫ್ಲಾಟ್ ಇಂಟ್ರಸ್ಟ್ ನಲ್ಲಿ ಸಾಲ ಮತ್ತು ಬಡ್ಡಿ ವಸೂಲಿ ಮಾಡುತ್ತಾರೆ. ಅಂದರೆ ಸಾಲ ಪಡೆದ ದಿನಾಂಕದಿಂದ ಒಂದು ತಿಂಗಳ ಅವಧಿಯಲ್ಲಿ ಬಡ್ಡಿ ಕಟ್ಟಿಸಿಕೊಳ್ಳುತ್ತಾರೆ. ಸಾಲ ಪಡೆದ ದಿನಾಂಕದಿಂದ 10 ದಿನದೊಳಗೆ ಮರು ಪಾವತಿಸಿದರೆ ಒಂದು ತಿಂಗಳ ಪೂರ್ಣ ಬಡ್ಡಿ ವಿಧಿಸುತ್ತಾರೆ. ಅಲ್ಲದೆ, ಟ್ರಾವೆಲಿಂಗ್ ಅಲೆಯನ್ಸ್ ಸೇರಿದಂತೆ ಇತರೆ ಖರ್ಚುಗಳನ್ನು ಸೇರಿಸುತ್ತಾರೆ ಎಂದು ದೂರಿದರು.

ಅದೇ ಸಹಕಾರ ಕ್ಷೇತ್ರದ ಬ್ಯಾಂಕುಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡಲಾಗುತ್ತದೆ. ಸಾಲಕ್ಕೆ ಕಟ್ ಇಂಟ್ರಸ್ಟ್ ವಿಧಿಸಲಾಗುತ್ತದೆ. ಅಂದರೆ ಯಾರಾದರು ಸಾಲ ಪಡೆದ ದಿನಾಂಕದಿಂದ 5 ದಿನದೊಳಗೆ ಮರು ಪಾವತಿ ಮಾಡಿದಲ್ಲಿ ಆ ಐದು ದಿನದ ಬಡ್ಡಿಯನ್ನು ಮಾತ್ರ ಪಡೆಯುತ್ತೇವೆ. ಎಷ್ಟು ದಿನದೊಳಗೆ ಸಾಲ ಮರು ಪಾವತಿಸುತ್ತಾರೊ ಅಷ್ಟು ದಿನದ ಬಡ್ಡಿ ಮಾತ್ರ ವಸೂಲಿ ಮಾಡಲಾಗುತ್ತದೆ. ಅಲ್ಲದೆ, ಆ ಬಡ್ಡಿ ಹಣವನ್ನು ವಾಪಸ್ ಸಂಘಗಳಿಗೆ ಮರು ಪಾವತಿ ಮಾಡುವ ವ್ಯವಸ್ಥೆಯೂ ಇದೆ ಎಂದು ಹೇಳಿದರು.

ಸಂಘದ ಆಡಿಟ್ ರಿಪೋರ್ಟ್ ಆಧಾರದ ಮೇಲೆ ಎಷ್ಟು ಸಾಲ ನೀಡಬೇಕೆಂದು ನಿರ್ಧಾರ ಮಾಡುತ್ತೇವೆ. ಹೊಸ ಸಂಘಗಳಿಗೆ 5 ರಿಂದ 6 ಲಕ್ಷ ಸಾಲ ಕೊಡಲಾಗುತ್ತದೆ. ಅಲ್ಲದೆ, ಗೃಹ ಬಳಕೆಗೆ ಸಂಬಂಧಿಸಿದ ಸಾಲಗಳನ್ನು ಬಿಡಿಸಿಸಿ ಬ್ಯಾಂಕಿನಲ್ಲಿ ನೀಡಲಾಗುತ್ತದೆ. ಸಹಕಾರ ಬ್ಯಾಂಕ್ ಗಳು ಸಾಲಗಾರರ ಮನೆ ಬಾಗಿಲಿಗೆ ಹೋಗಿ ದೌರ್ಜನ್ಯ ಎಸಗುವುದಿಲ್ಲ. ಆದ್ದರಿಂದ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಮಾಡಿ ಯಾರು ಕೂಡ ಮೋಸ ಹೋಗ ಬೇಡಿ ಎಂದು ಮನವಿ ಮಾಡಿದರು.

ಈಗ ಬಿಡಿಸಿಸಿ ಬ್ಯಾಂಕಿನಲ್ಲಿ ಹಸು, ಕುರಿ, ಮೇಕೆ ಸಾಕಾಣಿಕೆಗೆ ಸಾಲ ಕೊಡುತ್ತೇವೆ. ಸಾಲ ಕೊಡುವಾಗಲೆ ರೈತರಿಂದ ಒಂದು ಎಕರೆಗೆ ಮಾರ್ಟಿಗೇಜ್ ಮಾಡಿರುತ್ತಾರೆ. ಬ್ಯಾಂಕಿನವರು ಮನೆಬಾಗಿಲಿಗೆ ಹೋಗಿ ಬಲವಂತವಾಗಿ ಸಾಲ ವಸೂಲಿ ಮಾಡಲ್ಲ. ಸಾಲ ಮರುಪಾವತಿಗೆ ಬಂಢತನ ತೋರುವವರ ವಿರುದ್ಧ ಮಾತ್ರ ಕಾನೂನು ರೀತಿ ಕ್ರಮ ವಹಿಸುತ್ತೇವೆ. ತೀರಾ ಸಾಲ ಮರು ಪಾವತಿ ಮಾಡಲು ಆಗದ ಸ್ಥಿತಿಯಲ್ಲಿದ್ದರೆ ಅಂಥವರಿಗೆ ಒನ್ ಟೈಮ್ ಸೆಟ್ಲುಮೆಂಟ್ ನಲ್ಲಿ ಮನೆಯ ಪರಿಸ್ಥಿತಿ ನೋಡಿ ತೀರ್ಮಾನ ಮಾಡಿದ ಅವಧಿಯೊಳಗೆ ಸಾಲ ಮರು ಪಾವತಿ ಮಾಡಬೇಕಾಗುತ್ತದೆ ಎಂದು ಹೇಳಿದರು.

ಯರೇಹಳ್ಳಿ ಸೊಸೈಟಿಯಲ್ಲಿಯೇ ಸ್ತ್ರೀ ಶಕ್ತಿ ಸಂಘಗಳಿಗೆ 2.50 ರಿಂದ 3 ಕೋಟಿ ರುಪಾಯಿ ಸಾಲ ಕೊಟ್ಟಿದ್ದೇವೆ. ಬಿಡಿಸಿಸಿ ಬ್ಯಾಂಕಿನಿಂದ ರಾಮನಗರ ತಾಲೂಕಿನಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಸುಮಾರು 35 ಕೋಟಿಗೂ ಹೆಚ್ಚಿನ ಸಾಲ ನೀಡಿದ್ದೇವೆ. ಇವರೆಲ್ಲರು ಮೊದಲಿನಿಂದ ಧರ್ಮಸ್ಥಳ ಸಂಸ್ಥೆ ಮೇಲೆ ಅವಲಂಬಿತರಾಗಿದ್ದರು.

ಸಹಕಾರ ಬ್ಯಾಂಕುಗಳಲ್ಲಿಯೇ ಮಹಿಳೆಯರು ಸಾಲ ಪಡೆಯಬೇಕು. ಏಕೆಂದರೆ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪೈಕಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದು ಮಹಿಳೆಯರು ಸಂಕಷ್ಟದಲ್ಲಿದ್ದಾರೆಂದು ಸಾಲ ಅಥವಾ ಬಡ್ಡಿ ಮನ್ನಾ ಮಾಡಿದರೆ ಅದಕ್ಕೆ ಮಹಿಳೆಯರು ಫಲಾನುಭವಿಗಳಾಗುತ್ತಾರೆ. ಅದೇ ಖಾಸಗಿ ಸಂಸ್ಥೆಗಳಲ್ಲಿ ಸಾಲ ಪಡೆದರೆ ಈ ಸೌಲಭ್ಯಗಳು ಸಿಗುವುದಿಲ್ಲ ಎಂದು ಯರೇಹಳ್ಳಿ ಮಂಜು ಎಚ್ಚರಿಸಿದರು.

ಈ ವೇಳೆ ಯರೇಹಳ್ಳಿ ಸೊಸೈಟಿ ನೂತನ ಅಧ್ಯಕ್ಷ ನಾಗಣ್ಣ, ಉಪಾಧ್ಯಕ್ಷೆ ಮಂಗಮ್ಮ, ನಿರ್ದೇಶಕರಾದ ಕೆ.ಪ್ರಶಾಂತ್, ಎಂ.ವಿ.ಕವಿತಾ, ಸಂತೋಷ್ ಕುಮಾರ್, ಜೆ.ಜೆ. ಜೈಪಾಲ್, ಮಾಯಣ್ಣ, ಯೋಗರಾಜು, ಕೃಷ್ಣಯ್ಯ, ರತ್ನಮ್ಮ ಇತರರಿದ್ದರು.

ಕೋಟ್ ..................

ಮೈಕ್ರೋ ಫೈನಾನ್ಸ್‌ನಿಂದ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಬಿಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು, ಅಧ್ಯಕ್ಷರು, ನಿರ್ದೇಶಕರು ಹಾಗೂ ಶಾಸಕರೊಂದಿಗೆ ಚರ್ಚಿಸಲಾಗುವುದು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಾಸಕರೊಂದಿಗೆ ಚರ್ಚಿಸಿ ದಿನಾಂಕ ನಿಗದಿ ಮಾಡಲಾಗುವುದು.

-ಯರೇಹಳ್ಳಿ ಮಂಜು, ನಿರ್ದೇಶಕರು, ಬಿಡಿಸಿಸಿ ಬ್ಯಾಂಕ್

28ಕೆಆರ್ ಎಂಎನ್ 1.ಜೆಪಿಜಿ

ರಾಮನಗರದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.