ಸಾರಾಂಶ
ಶ್ರೀ ವಿದ್ಯಾಭಾರತೀ ಸಭಾಭವನದಲ್ಲಿ ನಡೆದ ತಾಲೂಕು ವಿಪ್ರ ಮಹಿಳಾ ಸಮಾವೇಶದ ಸಮಾರೋಪ
ಕನ್ನಡಪ್ರಭ ವಾರ್ತೆ, ಶೃಂಗೇರಿನಾರಿಯನ್ನು ಶಕ್ತಿ ಸ್ವರೂಪಿಣಿ ಎಂದು ಆರಾಧಿಸಿದ ದೇಶ ನಮ್ಮದು. ಪ್ರಾಚೀನ ಹರಪ್ಪ , ವೈದಿಕ ಸಂಸ್ಕೃತಿಯಿಂದ ಹಿಡಿದು ಇಂದಿನವರೆಗೂ ಮಹಿಳೆಗೆ ಪೂಜನೀಯ ಸ್ಥಾನ ನೀಡುತ್ತಾ ಬರಲಾಗಿದೆ. ಮಹಿಳೆ ಇಂದು ಪುರುಷನಿಗೆ ಸರಿಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿ ಉತ್ತಮ ಬದುಕು ತನ್ನದಾಗಿಸಿಕೊಂಡು ತೋರಿಸಿದ್ದಾಳೆ. ಮಹಿಳೆಯರಿಗೆ ಸಮಸ್ಯೆಗಳನ್ನು ಎದುರಿಸಿ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವಿದೆ ಎಂದು ಸಾಹಿತಿ, ಲೇಖಕಿ ಭಾಗ್ಯ ನಂಜುಂಡಸ್ವಾಮಿ ಹೇಳಿದರು.
ಪಟ್ಟಣದ ರಾಜಾನಗರ ಶ್ರೀ ವಿದ್ಯಾಭಾರತೀ ಸಭಾಭವನದಲ್ಲಿ ನಡೆದ ತಾಲೂಕು ವಿಪ್ರ ಮಹಿಳಾ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಷಣ ಮಾಡಿ, ಮಹಿಳೆಯನ್ನು ಆಕೆ ಬಾಹ್ಯ ಸೌಂದರ್ಯಕ್ಕಾಗಿ ಆಕರ್ಷಣೆ ಬೊಂಬೆಯಂತೆ ಕಂಡ ದೇಶ ನಮ್ಮದಲ್ಲ. ಹೆಣ್ಣನ್ನು ತಾಯಿ, ಶಕ್ತಿಯಾಗಿ, ಆಕೆಯನ್ನು ತ್ರೈಲೋಕ್ಯ ಜನನಿ ಎಂದು ಕರೆಯುತ್ತಾರೆ. ಪ್ರಾಚೀನ ವೈದಿಕ ಕಾಲದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಗಾರ್ಗಿ, ಮೈತ್ರೇಯಿಯಂತಹ ಮಹಿಳಾ ವಿದ್ವಾಂಸರು, ಶಿಕ್ಷಣ ಕ್ಷೇತ್ರದಲ್ಲಿ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ, ಸ್ವಾತಂತ್ರ್ಯ ಹೋರಾಟದಲ್ಲಿ ವೀರಾಗ್ರಣಿಯಂತೆ ಹೋರಾಡಿದ ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ ದೇವಿ, ಆಧುನಿಕ ಭಾರತದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಕಲ್ಪನಾ ಚಾವ್ಲಾ, ಇನ್ನೂ ವಿಜ್ಞಾನ, ಕಲೆ, ಸಾಹಿತ್ಯ, ಕ್ರೀಡೆ, ರಾಜಕೀಯ, ಸಮಾಜ ಸೇವೆ ಹೀಗೆ ಸಮಾಜದ ಮುಖ್ಯವಾಹಿನಿಯಲ್ಲಿ ತನ್ನದೇ ಆದ ಕೊಡುಗೆ ನೀಡಿ ಇತಿಹಾಸದ ಪುಟಗಳಲ್ಲಿ ರಾರಾಜಿಸಿದ್ದಾಳೆ ಎಂದರು.ಮಹಿಳೆಯರ ಬಗ್ಗೆ ತಾತ್ಸರ ಮನೋಭಾವನೆ ಸಲ್ಲದು. ಮಹಿಳೆ ಸಬಲೆ ಹೊರತು ಅಬಲೆಯಲ್ಲ. ಇಂದು ಮಹಿಳೆಯರಿಗೆ ಎಲ್ಲಾ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವಿದೆ. ತಮಗೆ ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಸಾಧನೆ, ಸಫಲತೆಗೆ ಬೇಕಾಗುವ ದಾರಿಯನ್ನು ತಾವೇ ಸೃಷ್ಠಿಸಿಕೊಳ್ಳಬೇಕಾದ ಅನಿವಾರ್ಯತೆ ಹೆಣ್ಣಿಗಿದೆ. ಮಹಿಳೆಯರು ಮನೆಯನ್ನು ವಿದ್ಯಾಲಯ ಹಾಗೂ ಆರಾಧನಾಲಯವನ್ನಾಗಿ ಮಾಡಬೇಕು. ಮಹಿಳೆಯ ಅಂತರಂಗ ದಲ್ಲಿ ಅಡಗಿರುವ ಆಶಯಗಳಿಗೆ ಮೊತ್ತೊಬ್ಬ ಮಹಿಳೆ ಪ್ರೋತ್ಸಾಹ ನೀಡಿದರೆ ಅಭ್ಯುದಯ ಸಾದ್ಯ.
ವಿಪ್ರ ಮಹಿಳೆಯರು ಸಂಘ ಸಂಸ್ಥೆಗಳಲ್ಲಿ ಸೇರಿ ಕಾರ್ಯನಿರ್ವಹಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಿದೆ. ಯಾವುದೇ ಸಂದರ್ಭದಲ್ಲಿಯೂ ದೃತಿಗೆಡದೆ ಕಾರ್ಯನಿರ್ವಹಿಸಬೇಕು. ಮಹಿಳೆಯರು ಉತ್ತಮ ಹವ್ಯಾಸ ರೂಡಿಸಿಕೊಳ್ಳುವ ಜೊತೆಗೆ ವ್ಯರ್ಥವಾಗಿ ಸಮಯ ಕಳೆಯಬಾರದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತಾಲೂಕು ಸಂಚಾಲಕಿ ನಾಗಮಣಿ ಮುರುಳಿ ಕೃಷ್ಣ ಮಾತನಾಡಿ, ವಿಪ್ರ ಮಹಿಳೆಯರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸಂಘಟನೆ ಬಲವರ್ಧನೆಗೆ ಶ್ರಮಿಸಬೇಕು. ಈ ಸಮಾವೇಶ ಸ್ಫೂರ್ತಿಯಾಗಬೇಕು. ವಿಚಾರ ಗೋಷ್ಠಿ, ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದಿವೆ. ಸಮುದಾಯದ ಜೊತೆಗೆ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಟಿ.ವಿ.ಶ್ರೀಮತಿ ನಾಗರಾಜ್, ಕಿರುತೆರೆ ನಟಿ ನಾಗಶ್ರೀ ಬೇಗಾರ್, ಕವನ ಶಾಮಸುಂದರ್, ಸತೀಶ್ ಜಿ.ಎಂ, ಬಿ.ಎಲ್. ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.23 ಶ್ರೀ ಚಿತ್ರ 1-
ಶೃಂಗೇರಿ ಪಟ್ಟಣದ ರಾಜಾನಗರ ಶ್ರೀ ವಿದ್ಯಾಭಾರತೀ ಸಭಾಭವನದಲ್ಲಿ ನಡೆದ ತಾಲೂಕು ವಿಪ್ರ ಮಹಿಳಾ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಸಾಹಿತಿ, ಲೇಖಕಿ ಭಾಗ್ಯ ನಂಜುಂಡಸ್ವಾಮಿ ಭಾಷಣ ಮಾಡಿದರು.