- ಎಡವಿದ ಮೇಲೆ ಪಶ್ಚಾತ್ತಾಪಕ್ಕಿಂತ ಎಡವದಂತೆ ಜಾಗ್ರತೆ ವಹಿಸುವುದೇ ಸೂಕ್ತ

- ತರಬೇತಿ ಹೆಸರಿನಲ್ಲಿ ಹೆಣ್ಣುಮಕ್ಕಳ ಜೊತೆಗೆ ಸಲುಗೆ, ನಂತರ ಬ್ಲ್ಯಾಕ್ ಮೇಲ್‌

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಮ್‌ ಮತ್ತು ಫಿಟ್ನೆಸ್‌ ಸೆಂಟರ್‌ಗೆ ಹೋಗುತ್ತಿದ್ದೇನೆಂದು ಹೇಳುತ್ತಿದ್ದ ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು ಇನ್ನು ಜೀವನದಲ್ಲೇ ಅದರ ಹೆಸರು ಎತ್ತದಂತಹ ಘಟನೆಗಳು ದಾವಣಗೆರೆಯಲ್ಲಿ ಬೆಳಕಿಗೆ ಬರುತ್ತಿರುವುದು ಜಿಮ್ ಮತ್ತು ಫಿಟ್ನೆಸ್ ಮಾಲೀಕರಿಗೂ ಅಂತಿಮ ಎಚ್ಚರಿಕೆಯ ಗಂಟೆಯಾಗಿದೆ!


ಹೌದು, ಇಲ್ಲಿನ ಕೆಟಿಜೆ ನಗರದ ಪೊಲೀಸ್ ಠಾಣೆ ವ್ಯಾಪ್ತಿಯ ಜಿಮ್‌ವೊಂದರ ಮಾಲೀಕ ಕಂ ತರಬೇತುದಾರ ಮಾಡಿರುವ ಪೈಶಾಚಿಕ ಕೃತ್ಯದಿಂದಾಗಿ ಜಿಮ್ ಮತ್ತು ಫಿಟ್ನೆಸ್ ಅಂತೆಲ್ಲಾ ಹೋಗುತ್ತಿದ್ದ ಅದೆಷ್ಟೋ ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು ಹೀಗೆ ಫಿಟ್ನೆಸ್ ಅಂತೆಲ್ಲಾ ಯೋಚಿಸಲು ಹಿಂದೇಟು ಹಾಕುವಂತಾಗಿದೆ. ಕೇವಲ ಇದೊಂದೇ ಜಿಮ್‌, ಫಿಟ್ನೆಸ್ ಸೆಂಟರ್ ಕಥೆಯಲ್ಲ. ಬಗೆಯುತ್ತಾ ಹೋದಂತೆ ಭಿನ್ನವಾಗೇನೂ ಇಲ್ಲವೆಂಬುದನ್ನೂ ಜನ ಒಪ್ಪುತ್ತಾರೆ.

ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿವಾದಿತ ಜಿಮ್ ಮಾಲೀಕ ಅಲ್ಲಿಗೆ ಬರುತ್ತಿದ್ದ ಕೆಲ ಯುವತಿಯರು, ಗೃಹಿಣಿಯರ ಜೊತೆಗೆ ದುರ್ವ್ಯವಹಾರ ಮಾಡಿದ್ದಲ್ಲೇ ಆ ಹೆಣ್ಣುಮಕ್ಕಳಿಗೆ ಬ್ಲ್ಯಾಕ್ ಮೇಲ್ ಮಾಡಿ, ಲಕ್ಷಗಟ್ಟಲೇ ದುಡ್ಡು ವಸೂಲು ಮಾಡಿದ್ದಾನೆ. ಅಲ್ಲದೇ, ತಾನು ಕರೆದಾಗಲೆಲ್ಲಾ ಬರಬೇಕೆಂಬುದಾಗಿ ಬೆದರಿಕೆ ಸಹ ಹಾಕುತ್ತಿದ್ದ ಎಂಬುದಾಗಿ ಹಿಂದೂ ಪರ ಸಂಘಟನೆಗಳ ಮುಖಂಡರು ಆರೋಪಿಸಿರುವುದೇ ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗಳ ಕರಾಳ ಮುಖಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈಗ ಕೆಲವರು ರಾತ್ರೋರಾತ್ರಿ ಊರು ಬಿಟ್ಟಿದ್ದರೆ, ಮತ್ತೆ ಕೆಲ ಸಂಸಾರಗಳಿಗೂ ಬೀದಿಗೆ ಬೀಳುವಂತಾಗಿದೆ ಎಂದು ಹೇಳಲಾಗುತ್ತಿದೆ.

ಸೆಂಟರ್ ಸಿಸಿ ಕ್ಯಾಮೆರಾಗಳೇ ಸಾಕ್ಷಿ:

ವಿವಾದಿತ ಜಿಮ್‌ನ ಮಾಲೀಕ ಕಂ ಟ್ರೈನರ್ ಹಿಂದೆ ಕೆಲಸ ಮಾಡುತ್ತಿದ್ದ ಕಡೆಯೂ ಹೀಗೆಯೇ ಮಾಡಿ, ತಾನೇ ಸ್ವಂತವಾಗಿ ಸೆಂಟರ್ ಆರಂಭಿಸಿದ್ದ ಎನ್ನಲಾಗಿದೆ. ತರಬೇತಿ ಹೆಸರಿನಲ್ಲಿ ತಮ್ಮ ಸೆಂಟರ್‌ಗೆ ಬಂದ ಹೆಣ್ಣುಮಕ್ಕಳು, ಯುವತಿಯರೊಂದಿಗೆ ತನ್ನ ನೈಜ ಹೆಸರನ್ನು, ಧರ್ಮವನ್ನು, ತನಗೆ ಮದುವೆಯಾಗಿ, ಮೂವರು ಮಕ್ಕಳಿರುವುದು, ತನ್ನ ಪತ್ನಿ ಗರ್ಭಿಣಿ ಆಗಿರುವುದನ್ನೂ ಬಚ್ಚಿಟ್ಟು, ತನ್ನ ಫಿಟ್ನೆಸ್ ಸೆಂಟರ್‌ಗೆ ಬಂದ ಹೆಣ್ಣುಮಕ್ಕಳಿಗೆ ಗಾಳ ಹಾಕುತ್ತಿದ್ದ. ಹೀಗೆ ಗಾಳ ಹಾಕಿದ ಹೆಣ್ಣುಮಕ್ಕಳನ್ನು ಹರಿದು ಮುಕ್ಕುತ್ತಿದ್ದ ಎಂಬ ಆರೋಪ ಕೇಳಿಬರುತ್ತಿದೆ. ಅದನ್ನು ಆತನ ಸೆಂಟರ್ ಸಿಸಿ ಕ್ಯಾಮೆರಾಗಳೇ ಪುಷ್ಟೀಕರಿಸುತ್ತಿವೆ.

ಪರ್ಸನಲ್ ಟ್ರೈನರ್ ಆಗಿ, ವಿಶೇಷವಾಗಿ ಹೇಳಿಕೊಡುವುದಾಗಿ ವಿದ್ಯಾರ್ಥಿನಿಯರು, ಯುವತಿಯರನ್ನು, ಗೃಹಿಣಿಯರನ್ನು ಬಲೆಗೆ ಬೀಳಿಸಿಕೊಂಡು, ಅವರೊಂದಿಗೆ ಸಲುಗೆ ಬೆಳೆಸಿಕೊಂಡ ದುಷ್ಕರ್ಮಿರು ಆ ಹೆಣ್ಣು ಮಕ್ಕಳ ಜೀವನದೊಂದಿಗೆ ಆಟವಾಡಿರುವುದು ಆತನದೇ ಫಿಟ್ನೆಸ್ ಸೆಂಟರ್‌ನ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಆತನ ಮೊಬೈಲ್‌ಗಳಲ್ಲೂ ಅದನ್ನೆಲ್ಲಾ ಇಟ್ಟುಕೊಂಡು, ಹಣಕ್ಕಾಗಿ ಪೀಡಿಸುವುದು, ತಾನು ಕರೆದಾಗಲೆಲ್ಲಾ ಬರಬೇಕೆಂಬುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿರುವುದನ್ನು ನೋಡಿದರೆ ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗಳಿಗೆ ಹೆಣ್ಣುಮಕ್ಕಳನ್ನು ಕಳಿಸುವ ಮುನ್ನ ನೂರು ಸಲ ಹೆತ್ತವರು, ಕುಟುಂಬದವರು ಆಲೋಚಿಸುವಂತಾಗಿದೆ. ಇನ್ನು ಇನ್ಸ್ಟಾಗ್ರಾಂನಲ್ಲೂ ಕೆಲ ಹೆಣ್ಣುಮಕ್ಕಳ ಜೊತೆಗಿರುವ ವೀಡಿಯೋಗಳನ್ನು ಒಪ್ಪಿಗೆಯೇ ಇಲ್ಲದೇ ಆತ ಹಾಕಿದ್ದಾನೆಂಬ ಮಾತು ಕೇಳಿಬರುತ್ತಿವೆ.

ಜಿಮ್‌ ಮತ್ತು ಫಿಟ್ನೆಸ್ ಸೆಂಟರ್‌ಗಳಲ್ಲಿ ಏನೆಲ್ಲಾ ಆಗುತ್ತಿದೆಯೆಂಬುದು ಯಾವುದೂ ರಹಸ್ಯವಾಗಿಯೇನೂ ಇಲ್ಲ. ಆದರೆ, ಹೆಣ್ಣು ಮಕ್ಕಳ ಬದುಕು, ಗೌರವ, ಕುಟುಂಬದ ಮರ್ಯಾದೆಗೆ ಅಂಜಿ ಯಾರೂ ಕೇಸ್ ದಾಖಲಿಸಲು ಮುಂದಾಗುವುದಿಲ್ಲ. ಅಲ್ಲದೇ. ಇಂತಹ ಜಿಮ್-ಫಿಟ್ನೆಸ್ ಸೆಂಟರ್‌ಗಳ ಕೆಲ ಮಾಲೀಕರು, ತರಬೇತುದಾರರು, ಪರ್ಸನಲ್ ಟ್ರೈನರ್‌ (ಪಿಟಿ)ಗಳ ಕುಕೃತ್ಯದಿಂದ ಅದೆಷ್ಟೋ ಸಂಸಾರಗಳು ಬೀದಿಪಾಲಾಗುವಂತಾಗಿದೆ. ಇಂತಹವರಿಗೆ ಪ್ರತಿಷ್ಟಿತ ಕುಟುಂಬದ ಹೆಣ್ಣುಮಕ್ಕಳು, ಉದ್ಯಮಿಗಳು, ದೊಡ್ಡ ಹುದ್ದೆಯಲ್ಲಿದ್ದವರು, ಪ್ರಭಾವಿ ರಾಜಕಾರಣಿಗಳ ಕುಟುಂಬದ ಹೆಣ್ಣುಮಕ್ಕಳೇ ಟಾರ್ಗೆಟ್ ಅಂತೇನೂ ಬೇರೆಯಾಗಿ ಹೇಳಬೇಕಿಲ್ಲ.

ತಡರಾತ್ರಿ 12.03ರ ವೇಳೆ ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗೆ ಹೆಣ್ಣು ಮಕ್ಕಳಿಗೆ ಬ್ಲ್ಯಾಕ್ ಮೇಲ್ ಮಾಡಿ, ಕರೆಸಿಕೊಂಡು ಸಿಸಿ ಕ್ಯಾಮೆರಾ ಆಫ್ ಮಾಡಲಾಗಿದೆಯೆಂದು ನಂಬಿಸಿ, ಅಂತಹವರ ಜೊತೆಗೆ ಸೇರುವ ದೃಶ್ಯಗಳನ್ನು ಅದೇ ಸಿಸಿ ಕ್ಯಾಮೆರಾದಲ್ಲಿ ಸೆರೆಹಿಡಿದು ಬ್ಲ್ಯಾಕ್ ಮೇಲ್ ಮಾಡುತ್ತಿರುವ ಇಂತಹ ದುಷ್ಕರ್ಮಿಗಳಿಗೆ ಮನೆಯಲ್ಲಿ ತಾಯಿ, ಅಕ್ಕ, ತಂಗಿಯರು, ಹೆಣ್ಣುಮಕ್ಕಳು ಇಲ್ಲವೇ ಎಂಬ ಪ್ರಶ್ನೆ ಕಾಡುತ್ತದೆ. ಮತ್ತೊಬ್ಬರ ಮನೆಯ ಹೆಣ್ಣುಮಕ್ಕಳ ಜೊತೆಗೆ ಹೀಗೆ ವರ್ತಿಸುವ ದುಷ್ಕರ್ಮಿಗಳ ಮನೆಯಲ್ಲೂ ಹೆಣ್ಣುಮಕ್ಕಳಿರುತ್ತಾರೆ. ಅಂತಹವರ ಜೊತೆಗೆ ಬೇರೆ ಯಾರಾದರೂ ಹೀಗೆ ವರ್ತಿಸಿದರೆ, ಬ್ಲ್ಯಾಕ್ ಮೇಲ್ ಮಾಡಿದರೆ, ತಡರಾತ್ರಿ ಬರುವಂತೆ ಹೇಳಿದರೆ ತನಗೆ ಏನನಿಸುತ್ತದೆಂಬ ಅರಿವು ಇಲ್ಲವೇ ಎಂಬುದು ಹೆಸರು ಹೇಳಲಿಚ್ಛಿಸದ ಮಹಿಳೆಯರ ಪ್ರಶ್ನೆಯಾಗಿದೆ.

- - -

(ಬಾಕ್ಸ್‌)

* ಪೊಲೀಸ್‌ ಕೈಯಲ್ಲೇ ದೃಶ್ಯ, ಸುಮೋಟೋ ಕೇಸ್ ಯಾಕಿಲ್ಲ?! ಮೊಬೈಲ್‌ನಲ್ಲಿ ಫೋಟೋ, ಸಿಸಿ ಕ್ಯಾಮೆರಾ ದೃಶ್ಯ, ಹಿಡನ್ ಕ್ಯಾಮೆರಾ ದೃಶ್ಯಗಳು ಪೊಲೀಸರ ಕೈಯಲ್ಲೇ ಇವೆ. ಆದರೆ, ಸಂತ್ರಸ್ಥರು, ಕುಟುಂಬದವರು ದೂರು ನೀಡುವವರೆಗೂ ಕಾಯುತ್ತ ನೊಂದವರಿಗೆ ನ್ಯಾಯ ಕೊಡಿಸಬೇಕಾದ ಪೊಲೀಸ್ ಇಲಾಖೆಯೇ ಕೈಚೆಲ್ಲುತ್ತಿರುವುದು ಜನರ ಬೇಸರಕ್ಕೂ ಕಾರಣವಾಗುತ್ತಿದೆ.

ಜಿಲ್ಲಾ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ದೂರು ದಾಖಲಿಸುವ ಅವಶ್ಯಕತೆ ಇದೆ. ಹಿಂದೂ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡುವ ಲವ್ ಜಿಹಾದ್ ಪ್ರಕರಣ ಇದೆಂಬ ಆರೋಪ ಕೇಳಿಬರುತ್ತಿವೆ. ವಾಸ್ತವದಲ್ಲೂ ಹೀಗೆ ಜಿಮ್‌ ಮತ್ತು ಫಿಟ್ನೆಸ್ ಸೆಂಟರ್‌ಗಳಿಗೆಂದು ಹೋಗುವವರು ಒಂದು ಸಮುದಾಯದವರೆಂಬುದೂ ಅಷ್ಟೇ ಸತ್ಯ. ಅನ್ಯ ಕೋಮಿನವರು ಹೀಗೆಲ್ಲಾ ದಾವಣಗೆರೆಯಲ್ಲಿ ಬರುವುದೇ ವಿರಳ ಎನ್ನಲಾಗುತ್ತಿದೆ.

ಆಕಸ್ಮಾತ್ ಹೋದರೂ 3-4 ದಿನಕ್ಕೆ ಆ ಸಮುದಾಯದವರೇ ಹೋಗದಂತೆ ಮುಲಾಜಿಲ್ಲದೇ ಹೇಳಿ ತಡೆಯುತ್ತಾರೆಂದರೆ ಜಿಮ್ ಮತ್ತು ಫಿಟ್ನೆಸ್ ಸೆಂಟರ್ ಹೆಸರಿನಲ್ಲಿ ಏನೆಲ್ಲಾ ಆಗುತ್ತದೆಂಬುದು ನಿರ್ದಿಷ್ಟ ಸಮುದಾಯದವರಿಗೆ ಗೊತ್ತಿದೆಯೆಂದೇ ಅರ್ಥವಲ್ಲವೇ? ಇನ್ನಾದರೂ ಜಿಮ್‌ ಮತ್ತು ಫಿಟ್ನೆಸ್ ಅಂತೆಲ್ಲಾ ಹೋಗುವ ನಿಮ್ಮ ನಿಮ್ಮ ಮನೆಯ ಹೆಣ್ಣುಮಕ್ಕಳ ಗೌರವ, ಜೀವ, ಜೀವನಕ್ಕೆ ಅಪಾಯವಾಗದಂತೆ ಆಯಾ ಮನೆಯವರು, ಹೆತ್ತವರು, ಕುಟುಂಬ ಸದಸ್ಯರು ಗಮನಹರಿಸುವಂತೆ ಕೆಲ ಸಂಘಟನೆ ಮುಖಂಡರು ಸಲಹೆ ನೀಡುತ್ತಾರೆ.

- - -

(ಸಾಂದರ್ಭಿಕ ಚಿತ್ರಗಳು)