ಮಹಿಳೆಯರು ಕೀಳರಿಮೆ ಬಿಟ್ಟು ಉತ್ತಮ ಹವ್ಯಾಸ ಬೆಳೆಸಿಕೊಳ್ಳಿ: ಮಂಗಳಾ ಪ್ರವೀಣ್‌ ಸಲಹೆ

| Published : Mar 25 2024, 12:49 AM IST

ಮಹಿಳೆಯರು ಕೀಳರಿಮೆ ಬಿಟ್ಟು ಉತ್ತಮ ಹವ್ಯಾಸ ಬೆಳೆಸಿಕೊಳ್ಳಿ: ಮಂಗಳಾ ಪ್ರವೀಣ್‌ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರಲ್ಲಿ ಅದ್ಭುತ ಪ್ರತಿಭೆ ಇದ್ದು ಕೀಳರಿಮೆ ಬಿಟ್ಟು ಆತ್ಮ ವಿಶ್ವಾಸದಿಂದ ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕೊಪ್ಪ ಗಾಯಿತ್ರಿ ವಿವಿದೋದ್ದೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷೆ ಮಂಗಳ ಪ್ರವೀಣ್ ಸಲಹೆ ನೀಡಿದರು.

ಕುದುರೆಗುಂಡಿಯಲ್ಲಿ ಗಾಯಿತ್ರಿ ವಿಪ್ರ ಮಹಿಳಾ ಬಳಗದ ಅಂತಾರಾಷ್ಟೀಯ ಮಹಿಳಾ ದಿನಾಚರಣೆ । ಸನ್ಮಾನ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮಹಿಳೆಯರಲ್ಲಿ ಅದ್ಭುತ ಪ್ರತಿಭೆ ಇದ್ದು ಕೀಳರಿಮೆ ಬಿಟ್ಟು ಆತ್ಮ ವಿಶ್ವಾಸದಿಂದ ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕೊಪ್ಪ ಗಾಯಿತ್ರಿ ವಿವಿದೋದ್ದೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷೆ ಮಂಗಳ ಪ್ರವೀಣ್ ಸಲಹೆ ನೀಡಿದರು.

ಭಾನುವಾರ ಕುದುರೆಗುಂಡಿ ಅಶ್ವ ಗುಂಡೇಶ್ವರ ಸಭಾ ಭವನದಲ್ಲಿ ಗಾಯಿತ್ರಿ ವಿಪ್ರ ಮಹಿಳಾ ಬಳಗದಿಂದ ಏರ್ಪಡಿಸಿದ್ದ ಅಂತಾರಾಷ್ಟೀಯ ಮಹಿಳಾ ದಿನಾಚರಣೆ, ಸಾಧಕ ಮಹಿಳೆಯರಿಗೆ ಸನ್ಮಾನ ಹಾಗೂ ಆಟೋಟ ಸ್ಪರ್ಧೆಯಲ್ಲಿ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಇಂದಿನ ಮಹಿಳೆಯರು ಎಲ್ಲಾ ರಂಗದಲ್ಲೂ ಸಾಧನೆ ಮಾಡಿ ಗೆದ್ದಿದ್ದಾರೆ. ಮಹಿಳೆಯರಲ್ಲಿ ಹಲವು ಕಲೆಗಳಲ್ಲಿ ನೈಪುಣ್ಯತೆ ಇರುತ್ತದೆ.19 ನೇ ಶತಮಾನದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಜಾಸ್ತಿ ಯಾಗಿ ಮಹಿಳೆಯರು ಮನೆಯಲ್ಲೇ ಕೂರುವ ವಾತಾವರಣ ಸೃಷ್ಠಿಯಾಗಿತ್ತು. ಈಗ ಮಹಿಳೆಗೆ ಶಿಕ್ಷಣ ಸಿಗುತ್ತಿದೆ. ಸಾಧನೆಯೂ ಮಾಡುತ್ತಿದ್ದಾರೆ. ನಿಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ನೀವೇ ಗುರುತಿಸಿ ಸಮಯ ಹೊಂದಿಸಿಕೊಂಡು ಕೆಲಸ ಮಾಡಿದರೆ ಪ್ರತಿಯೊಬ್ಬ ಮಹಿಳೆಯರು ಸಾಧಕರಾಗಬಹುದು ಎಂದರು. ಮುಖ್ಯ ಅತಿಥಿಯಾಗಿದ್ದ ಹರಿಹರಪುರದ ಸಂಸ್ಕಾರ ಭಾರತಿ ರಂಗೋಲಿ ಕಲಾವಿದೆ ಸುವರ್ಣ ಕೇಶವ್‌ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ರಂಗೋಲಿ ಕಲಿಯುವ ಆಸಕ್ತಿ ಇದ್ದವರಿಗೆ ಶಿಬಿರದ ಮೂಲಕ ಕಲಿಸುತ್ತೇನೆ. ಕೈಯಲ್ಲೇ ಬರೆಯುವ ರಂಗೋಲಿ ಕಲೆ ಮರೆಯಾಗಬಾರದು. ಪ್ರತಿಯೊಬ್ಬ ಮಹಿಳೆ ರಂಗೋಲಿ ಕಲೆಯನ್ನು ಮುಂದುವರಿಸಿಕೊಂಡು ಹೋಗಬೇಕು. ಅವಕಾಶ ಸಿಕ್ಕಾಗ ಉಪಯೋಗಿಸಿಕೊಂಡು ತಮ್ಮ ಪ್ರತಿಭೆ ಹೊರ ಹಾಕಬೇಕು. ವಿಪ್ರ ಸಮಾಜದವರು ಇತರ ಸಮಾಜದವರಿಗೆ ಮಾರ್ಗದರ್ಶಕರಾಗಬೇಕು. ಮಹಿಳೆಯರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಧಾರೆ ಎರೆಯಬೇಕು ಎಂದು ಕರೆ ನೀಡಿದರು. ಸಭೆ ಅಧ್ಯಕ್ಷತೆ ವಹಿಸಿದ್ದ ಮಮತ ಪ್ರಭಾಕರ್‌ ಮಾತನಾಡಿ, ನಮ್ಮ ಗಾಯಿತ್ರಿ ವಿಪ್ರ ಮಹಿಳಾ ಬಳಗದಿಂದ ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಉಪಯೋಗವಾಗುವ ಆರೋಗ್ಯ, ರಂಗೋಲಿ, ಕಲೆ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳ ಬಗ್ಗೆ ಮಾಹಿತಿ ಶಿಬಿರಗಳನ್ನು ಯೋಜಿಸಲಿದ್ದೇವೆ ಎಂದರು. ಸಭೆಯಲ್ಲಿ ಗಾಯಿತ್ರಿ ವಿಪ್ರ ಮಹಿಳಾ ಬಳಗದ ಪ್ರಧಾನ ಕಾರ್ಯದರ್ಶಿ ಸುಮ ನಾರಾಯಣಮೂರ್ತಿ, ಕಾರ್ಯಕಾರಿ ಸಮಿತಿ ಸದಸ್ಯೆ ಲತ ಸುಬ್ರಮಣ್ಯ ಇದ್ದರು. ಇದೇ ಸಂದರ್ಭದಲ್ಲಿ ಸಾಧಕ ಮಹಿಳೆಯರಾದ ಹರಿಹರಪುರದ ಸುವರ್ಣ ಕೇಶವ್, ಕೊಪ್ಪದ ಮಂಗಳ ಪ್ರವೀಣ್ ಅ‍ವರನ್ನು ಸನ್ಮಾನಿಸಲಾಯಿತು.

ಇದಕ್ಕೂ ಮೊದಲು ಮಹಿಳೆಯರಿಗಾಗಿ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿದ್ಯಾವರದರಾಜ್‌, ಜ್ಯೋತಿ ನರಸಿಂಹ, ವಿಜಯ , ಮಾನಸ , ಪಲ್ಲವಿ, ಸುಧಾ ಇತರರಿದ್ದರು.