ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಗ್ರಾಮ ಹಾಗೂ ಸುತ್ತ ಮುತ್ತಲಿನಲ್ಲಿ ನಡೆಯುವ ಅನೈತಿಕ ಮತ್ತು ಅಕ್ರಮ ಚಟುವಟಿಕೆಗಳು ನಡೆಸುವ ಮಂದಿಯ ವಿರುದ್ಧ ಮಾಹಿತಿ ನೀಡುವಂತೆ ಸರ್ಕಾರವು ಮಹಿಳೆಯರ ರಕ್ಷಣೆಗಾಗಿ ಮತ್ತು ಸುರಕ್ಷತೆಯ ದಿಸೆಯಲ್ಲಿ ಹಲವು ಕಠಿಣ ರೀತಿಯ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಮಹಿಳೆಯರು ಕಾನೂನಿನ ಮಾಹಿತಿಯನ್ನು ಪಡೆದುಕೊಂಡು ಇತರರಿಗೆ ತಿಳಿಸುವುದು ಎಂದು ಠಾಣಾಧಿಕಾರಿ ಚಂದ್ರಶೇಖರ್ ಕರೆ ನೀಡಿದರು.ಭಾನುವಾರ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್‌ಬೈಲ್ ಸರ್ಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‌ಬೈಲ್ ಕಾರ್ಯಕ್ಷೇತ್ರದ ಸ್ವಸಹಾಯ ಸಂಘದ ಮಹಿಳೆಯರಿಗೆ ಜ್ಞಾನವಿಕಾಸ ಕೇಂದ್ರದ ವತಿಯಿಂದ ಜ್ವಲಂತ ಸಮಸ್ಯೆಗಳ ಬಗ್ಗೆ ಸದಸ್ಯರಿಗೆ ಮಾಹಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರಿಗೆ ಕಾನೂನು ಅರಿವು ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ವಾಹನಗಳನ್ನು ಚಲಾಯಿಸುವಾಗ ವಾಹನದ ಪರವಾನಗಿ ದಾಖಲಾತಿಗಳನ್ನು ವಾಹನದಲ್ಲಿರಿಸಿಕೊಂಡಿರಬೇಕು, ಸಂಚಾರಿ ನಿಯಮವನ್ನು ಪಾಲಿಸಬೇಕು. ಅಪಾಪ್ತ ವಯಸ್ಸಿನ ಮಕ್ಕಳಿಗೆ ವಾಹನಗಳನ್ನು ಚಲಾಯಿಸಲು ನೀಡಿ ಸಿಕ್ಕಿಬಿದ್ದಲ್ಲಿ ಪೊಲೀಸ್ ಹಾಗೂ ಸಾರಿಗೆ ಅಧಿಕಾರಿಗಳು ತಪಾಸಣೆ ಸಂದರ್ಭ ಸಿಕ್ಕಿ ಹಾಕಿಕೊಂಡಲ್ಲಿ ಪೋಷಕರಿಗೆ ದಂಡ ಹಾಗೂ ಜೈಲು ಶಿಕ್ಷೆಯಾಗಲಿದೆ. ಪೋಷಕರು ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ನೀಡಬಾರದು ಎಂದು ಸೂಚಿಸಿದರು.ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ಕಂಡು ಕೇಳಿಬರುತ್ತಿದೆ. ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ, ಇನ್ನಿತರ ಕಿರುಕುಳ ನೀಡುವುದು ಸಹ ಅಪರಾಧವಾಗಿರುತ್ತದೆ. ನಿಮ್ಮ ಸುತ್ತ ಮುತ್ತಲಿನಲ್ಲಿ ಅಂತಹ ಪ್ರಕರಣಗಳು ಕಂಡು ಬಂದ ಕೂಡಲೇ ತಿಳಿಸುವುದರಿಂದ ಮುಂದಾಗುವ ಭಾರಿ ಅಪರಾಧಗಳನ್ನು ತಡೆಯುವ ದಿಸೆಯಲ್ಲಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಹೇಳಿದರು.
ಸಮನ್ವಯಧಿಕಾರಿ ಮಾಲಿನಿ ಮಾತನಾಡಿ, ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆಯ ವತಿಯಿಂದ ಹತ್ತು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅದರ ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ತರಬೇತಿ ಹಾಗೂ ಮಾಹಿತಿಯನ್ನು ನೀಡಿದರು.ಕೃಷಿಯಾಧಿಕಾರಿ ರಾಕೇಶ್ ಮಾತನಾಡಿ, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ನಾವು ವೈಯಕ್ತಿಕ ಬೆಳವಣಿಗೆಯನ್ನು ಕಂಡುಕೊಳ್ಳಬಹುದಾಗಿದೆ. ಭೂಮಿಯ ಫಲವತ್ತೆ ಬಗ್ಗೆ ನಮಗೆ ಅರಿವು ಮುಖ್ಯ. ಅರಿತು ಕೃಷಿಚಟುವಟಿಕೆ ನಡೆಸುವುದರಿಂದ ಲಾಭ ಗಳಿಸಿಕೊಳ್ಳಬಹುದು ಎಂಬುದರ ಕುರಿತು ಮಾಹಿತಿ ನೀಡಿದರು.
ಸಭೆಯ ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‌ಬೈಲ್ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಭವ್ಯ, ಉಪಾಧ್ಯಕ್ಷೆ ಗೀತಾ, ಕಾರ್ಯದರ್ಶಿ ಪುಷ್ಟಲತಾ ಹಾಗೂ ಸೇವಾ ಪ್ರತಿನಿಧಿ ಯಶೋಧ ಇದ್ದರು.