ಸಾರಾಂಶ
ಚಿನ್ಮೂಲಾದ್ರಿ ರೇವಣಸಿದ್ದ ಮಹಾವೇದಿಕೆಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ
ಕನ್ನಡಪ್ರಭ ವಾರ್ತೆ ಸಿರಿಗೆರೆ
ರಾಜ್ಯದ ಶಾಸನ ಸಭೆಯಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ದೊರೆಯುವ ಅಗತ್ಯ ಇದೆ. ಅದನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದು ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ ಹೇಳಿದರು.ಚಿನ್ಮೂಲಾದ್ರಿ ರೇವಣಸಿದ್ದ ಮಹಾವೇದಿಕೆಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಉಪನ್ಯಾಸಕಿಯಾಗಿ ಭಾಗವಹಿಸಿದ್ದರು.
೨೨೪ ಶಾಸಕರು ಇರುವ ರಾಜ್ಯದ ವಿಧಾನಸಭೆಯಲ್ಲಿ ಬೆರಳೆಣಿಕೆ ಸಂಖ್ಯೆಯ ಮಹಿಳಾ ಶಾಸಕಿಯರು ಇದ್ದೇವೆ. ನಮ್ಮ ಸಂಖ್ಯೆ ಅಲ್ಲಿ ಹೆಚ್ಚಬೇಕು. ಅದಕ್ಕೆ ತರಳಬಾಳು ಶ್ರೀಗಳು ಆಯೋಜಿಸಿರುವ ಈ ಮಹಿಳಾ ಗೋಷ್ಠಿಯು ಪ್ರೇರಣೆಯಾಗಲಿ ಎಂದರು.ತರಳಬಾಳು ಹುಣ್ಣಿಮೆ ಯಾವ ಜಾತಿ, ಧರ್ಮಕ್ಕೂ ಸೀಮಿತವಾದುದಲ್ಲ. ಇದು ಸರ್ವಧರ್ಮದವರು ಸೇರಿ ಮಾಡುವ ಹಬ್ಬ ಎಂದು ಬಣ್ಣಿಸಿದರು.
ಸಮಾನತೆಯತ್ತ ಸಾಗುತ್ತಿರುವ ಈ ಕಾಲದಲ್ಲಿಯೂ ಹೆಣ್ಣುಮಕ್ಕಳನ್ನು ವೇದಿಕೆಯ ಮೇಲೆ ಪ್ರಾರ್ಥನೆ ಮಾಡಲು, ಹೂಗುಚ್ಛ ನೀಡಲು ಮಾತ್ರ ಬಳಸಿಕೊಳ್ಳಲಾಗುತ್ತಿರುವುದು ವಿಷಾದನೀಯ ಎಂದು ಕರ್ನಾಟಕ ರಅಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಹೇಳಿದರು.ಸದಾ ಹೋರಾಟ ಮಾಡುತ್ತ, ಹಕ್ಕುಗಳಿಗಾಗಿ ಸೆಣಸಾಡುತ್ತಿರುವ ಹೆಣ್ಣುಮಕ್ಕಳನ್ನು ತರಳಬಾಳು ಹುಣ್ಣಿಮೆಗೆ ಕರೆದು ವೇದಿಕೆಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಿರುವುದು ನಮಗೆ ಸಂತೋಷ ತಂದಿದೆ. ಇದೊಂದು ಅವಿಸ್ಮರಣೀಯ ದಿನ ಎಂದರು.
ದೇಶದಲ್ಲಿ ೮೦೦ ಲಕ್ಷ ಹೆಣ್ಣು ಬ್ರೂಣಗಳ ಹತ್ಯೆಯಾಗುತ್ತಿದೆ. ಅಂದರೆ ಅಷ್ಟು ಸಂಖ್ಯೆಯ ಹೆಣ್ಣು ಮಕ್ಕಳು ತಾಯಿಯ ಹೊಟ್ಟೆಯಲ್ಲಿಯೇ ಸಾವನ್ನಪ್ಪುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹೆಣ್ಣುಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಜಾಗರೂಕವಾಗಿರಬೇಕು. ಸಾವಿರಾರು ಅಪರಾಧಗಳು ಸಾಮಾಜಿಕ ಜಾಲತಾಣಗಳಿಂದಲೇ ವರದಿಯಾಗುತ್ತಿವೆ. ಇಂತಹ ವೇಳೆ ಹೆಣ್ಣು ಮಕ್ಕಳು ಭಯಗ್ರಸ್ತರಾಗದೇ ಪೊಲೀಸರ ರಕ್ಷಣೆ ಕೋರಬೇಕು ಎಂದರು.
ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಬೆಂಗಳುರಿನ ಜಯೇಂದ್ರ ಪುರಿ ಮಹಾಸ್ವಾಮೀಜಿ, ಚಿತ್ರನಟಿ ಉಮಾಶ್ರೀ, ಧಾರವಾಡ ಜಿಲ್ಲಾಧಿಕಾರಿ ಜಿ.ಆರ್.ಜೆ. ದಿವ್ಯಪ್ರಭು, ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ. ಕವಿತಾ, ಲೋಕಸೇವಾ ಆಯೋಗದ ಸದಸ್ಯೆ ಬಿ.ವಿ. ಗೀತಾ, ಉಡುಪಿಯ ಸಂಧ್ಯಾ ಶೆಣೈ ಮುಂತಾದವರು ವೇದಿಕೆಯಲ್ಲಿದ್ದರು.ಸಿರಿಗೆರೆ ಅಕ್ಕನ ಬಳಗ ವಿದ್ಯಾರ್ಥಿನಿಯರಿಂದ ವಚನ ಗೀತೆ ನಡೆದವು. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೂ ಜನರಿಗೆ ಮುದನೀಡಿದವು.
ಚಿಕ್ಕಬೆನ್ನೂರು ಗ್ರಾಮದ ಶಾಂತಾ ಅಶೋಕ ಸ್ವಾಗತಿಸಿದರು.