ಮಹಿಳೆಯರಿಗೆ ಸಕಾಲಿಕ ಪ್ರೋತ್ಸಾಹ, ಪ್ರೇರಣೆ ಅಗತ್ಯ: ಡಾ. ವೀರೇಂದ್ರ ಹೆಗ್ಗಡೆ

| Published : May 31 2024, 02:17 AM IST

ಮಹಿಳೆಯರಿಗೆ ಸಕಾಲಿಕ ಪ್ರೋತ್ಸಾಹ, ಪ್ರೇರಣೆ ಅಗತ್ಯ: ಡಾ. ವೀರೇಂದ್ರ ಹೆಗ್ಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಜತ ಮಹೋತ್ಸವ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಪುರುಷರಿಗೆ ಅವಲಂಬಿತರಾಗಿದ್ದ ಮಹಿಳಾ ಸಮಾಜ ಇಂದು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾರೆ. ಇದಕ್ಕೆ ಸಂಘಟನೆಗಳೇ ಮುಖ್ಯ ಕಾರಣ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಗುರುವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕುಟುಂಬ ಮತ್ತು ಸಮಾಜದ ಸುಗಮ ನಿರ್ವಹಣೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಬಾಲ್ಯದಿಂದಲೆ ಮಕ್ಕಳನ್ನು ತಿದ್ದಿ, ತೀಡಿ ಉತ್ತಮ ಸಂಸ್ಕಾರ ನೀಡಿ ಆದರ್ಶ ವ್ಯಕ್ತಿತ್ವ ರೂಪಿಸುವುದು ಮಾತೆಯರ ಕರ್ತವ್ಯವೂ, ಹೊಣೆಗಾರಿಕೆಯೂ ಆಗಿದೆ. ಆದುದರಿಂದಲೆ ಧರ್ಮಸ್ಥಳದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡುವಾಗ ಪೋಷಕರಿಗೂ ತಜ್ಞರಿಂದ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತದೆ ಎಂದು ಹೆಗ್ಗಡೆಯವರು ಹೇಳಿದರು.ಎಲ್ಲ ಶಾಖೆಗಳ ಕಾರ್ಯನಿರ್ವಹಣೆಯನ್ನು ಏಕಸೂತ್ರದಲ್ಲಿ ಪೋಣಿಸಿ ಸಂದರ್ಭೋಚಿತವಾಗಿ ಮಾಹಿತಿ, ಮಾರ್ಗದರ್ಶನ ನೀಡುವುದು ಒಕ್ಕೂಟದ ಜವಾಬ್ದಾರಿಯಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸ್ವ-ಸಹಾಯ ಸಂಘಗಳಿಗೆ ಒಕ್ಕೂಟದ ನೇತೃತ್ವದಲ್ಲಿ ಸದಾ ಪ್ರೋತ್ಸಾಹ, ಮಾರ್ಗದರ್ಶನ ನೀಡಲಾಗುತ್ತದೆ ಎಂದರು.

ಕಾಲಕ್ಕೆ ತಕ್ಕಂತೆ ಅವರವರ ಪ್ರಾಯಕ್ಕೆ ಅನುಗುಣವಾಗಿ ಮಾತೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಸಮಾಜದ ಮುಂದಿನ ಸಭ್ಯ, ಸುಸಂಸ್ಕೃತ ನಾಗರಿಕರಾಗಿ ರೂಪಿಸಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಸಾಧನೆಯನ್ನು ಹೆಗ್ಗಡೆಯವರು ಶ್ಲಾಘಿಸಿ ಎಲ್ಲ ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು ಅಭಿನಂದಿಸಿದರು.ಹೇಮಾವತಿ ಹೆಗ್ಗಡೆಯವರು ಬರೆದ ‘ಗೆಳತಿ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಚಲನಚಿತ್ರ ನಟಿ ಪದ್ಮಜಾ ರಾವ್ ಮಾತನಾಡಿ ಧರ್ಮಸ್ಥಳದಲ್ಲಿ ತಮಗೆಲ್ಲ ದೊರೆತ ರಾಜಮರ್ಯಾದೆಯೊಂದಿಗೆ ಗೌರವಪೂರ್ವಕ ಆತಿಥ್ಯಕ್ಕೆ ಸಂತಸ ವ್ಯಕ್ತಪಡಿಸಿದರು. ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ಸ್ವಾವಲಂಬಿಗಳಾದರೆ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿ ಬರುತ್ತದೆ. ಮಹಿಳಾ ಸಬಲೀಕರಣವೂ ಆಗುತ್ತದೆ ಎಂದರು.

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಜತ ಸಂಚಿಕೆ ಬಿಡುಗಡೆಗೊಳಿಸಿದ ಮಕ್ಕಳ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಮಾತನಾಡಿ, ದಾನ ಚಿಂತಾಮಣಿ ಅತ್ತಿಮಬ್ಬೆ, ಉಳ್ಳಾಲದ ರಾಣಿ ಅಬ್ಬಕ್ಕ ಮೊದಲಾದವರು ಮಹಿಳೆಯರಿಗೆ ಪ್ರೇರಕಶಕ್ತಿಯಾಗಿದ್ದಾರೆ. ಮಹಿಳೆಯರು ಸದಾ ಮಾತನಾಡುವ ಮಾತೆಯರಾಗದೆ, ಚಿಂತೆಯನ್ನು ಬಿಟ್ಟು ಸದಾ ಚಿಂತನೆಯನ್ನು ಮಾಡುವ ಚಿಂತಾಮಣಿಗಳಾಗಬೇಕು ಹೇಳಿದರು.ಸಾಧಕರ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ ಬೆಳಗಾವಿಯ ಸುಮನ್ ಪತ್ರಾವಳಿ, ಮೂಡುಬಿದಿರೆಯ ವೀಣಾ ಶೆಟ್ಟಿ, ಬೆಂಗಳೂರಿನ ಸುಶೀಮಾ ಯಶವಂತ್, ಛಾಯಾಚಿತ್ರಗ್ರಾಹಕಿ ಹುಣಸೂರಿನ ಛಾಯಾ ಸುನಿಲ್ ಮತ್ತು ಮೈಸೂರಿನ ಕುಮಾರಿ ಅನನ್ಯ ಜೈನ್ ಅವರನ್ನು ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಗೌರವಾಧ್ಯಕ್ಷೆ ಹೇಮಾವತಿ ಹೆಗ್ಗಡೆ ಮಾತನಾಡಿ, ಜೈನಧರ್ಮದಲ್ಲಿ ತ್ಯಾಗ, ಅಹಿಂಸೆ ಮತ್ತು ವಿರಕ್ತಿಗೆ ಪ್ರಾಶಸ್ತ್ಯವಿದೆ. ಮಹಿಳೆಯರು ಕುಟುಂಬದ ಮತ್ತು ಸಮಾಜದ ಅವಿಭಾಜ್ಯ ಅಂಗವಾಗಿದ್ದು ಬಿಂದುವಾಗಿ ಮಾತ್ರವಲ್ಲದೆ ಸಿಂಧುವಾಗಿಯೂ ಎಲ್ಲರೊಂದಿಗೂ ಮುಕ್ತವಾಗಿ ಬೆರೆತು ನಿರಂತರ ಪ್ರಗತಿಗೆ ಸಹಕರಿಸಬೇಕು ಎಂದು ಹೇಮಾವತಿ ಹೆಗ್ಗಡೆ ಅಭಿಪ್ರಾಯಪಟ್ಟರು.

ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ್ತು ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು.

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಪದ್ಮಿನಿಪದ್ಮರಾಜ್ ಸ್ವಾಗತಿಸಿದರು. ಜಯಶ್ರೀ ವಂದಿಸಿದರು. ಕುಮುದಾ ನಾಗಭೂಷಣ್ ಕಾರ್ಯಕ್ರಮ ನಿರ್ವಹಿಸಿದರು.