ಹೂವಿನಹಡಗಲಿ: ಮುಂಗಾರು ಮಳೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ರೈತ ಮಹಿಳೆಯರು ಮಳೆರಾಯನಿಗಾಗಿ ಗುರ್ಜಿ ಪೂಜೆಯ ಮೊರೆ ಹೋಗಿದ್ದಾರೆ.

ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಶನಿವಾರ ಮಹಿಳೆಯರು ಗುರ್ಜಿ ಪೂಜೆ ನಡೆಸಿದರು. ಆರಂಭದಲ್ಲಿ ಮುಂಗಾರು ಮಳೆ ಆಶಾದಾಯಕವಾಗಿತ್ತು. ಅದೇ ಹುಮ್ಮಸ್ಸಿನಲ್ಲಿ ಮೆಕ್ಕೆಜೋಳ, ಹೈಬ್ರೀಡ್‌ ಜೋಳ, ಸಜ್ಜೆ, ನವಣಿ, ತೊಗರಿ, ಸೂರ್ಯಕಾಂತಿ ಸೇರಿದಂತೆ ಇತರೆ ಬೆಳೆಗಳ ಬಿತ್ತನೆ ಮಾಡಿದ್ದರು. ಈಗ ಮಳೆ ಮಾಯವಾಗಿದ್ದು, ಬೇಸಿಗೆ ಕಾಲದಂತೆ ಬಿರುಬಿಸಿಲು ಸುರಿಯುತ್ತಿದೆ. ಇದರಿಂದ ರೈತ ಸಮುದಾಯ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ರೈತ ಮಹಿಳೆಯರು ಮತ್ತು ಮಕ್ಕಳಿಂದ ಮಳೆಗಾಗಿ ಗುರ್ಜಿ ಪೂಜೆ ನಡೆಯುತ್ತಿದೆ.

ರೊಟ್ಟಿಯ ಹೆಂಚನ್ನು ಬಾಲಕ ವಿ.ಅಂಬರೀಶ್ ತಲೆಯ ಮೇಲೆ ಹೊತ್ತು, ಸೆಗಣಿಯಿಂದ ಗುರ್ಜಿ ಮಾಡಿ ಹೆಂಚಿನ ಮೇಲೆ ಇಟ್ಟು ಓಣಿ ಓಣಿ ತಿರುಗಿದರು. ವಿಶಿಷ್ಟ ರೀತಿಯಲ್ಲಿ ಮಳೆರಾಯನ ಕುರಿತು ಹಾಡುಗಳನ್ನು ಹಾಡುತ್ತಾ ಪರಸ್ಪರ ನೀರು ಎರಚಿಕೊಳ್ಳುತ್ತಾ, ಪರಿಪರಿಯಾಗಿ ಮಳೆರಾಯನನ್ನು ಪ್ರಾರ್ಥಿಸಿದರು.

ಬಿತ್ತನೆ ಮಾಡಿರುವ ಬೆಳೆಗಳು ಮಳೆ ಇಲ್ಲದೇ ಒಣಗುತ್ತಿವೆ. ಇನ್ನು ಕೆಲವೆಡೆ ಬೀಜ ಮೊಳಕೆ ಒಡೆದು, ಬಾಡುತ್ತಿವೆ. ದುಬಾರಿ ಬೀಜ, ಗೊಬ್ಬರ ತಂದು ಭೂಮಿಗೆ ಹಾಕಿದ್ದು, ನಾಲ್ಕೈದು ದಿನದಲ್ಲಿ ಮಳೆ ಆಗದಿದ್ದರೆ ಮೊಳಕೆಯ ಬೀಜ ಕಮರಿ ಹೋಗುತ್ತವೆ.

ಗುರ್ಜಿ ಪೂಜೆಯಲ್ಲಿ ರೈತ ಮಹಿಳೆರಾದ ಸಿದ್ಲಿಂಗಮ್ಮ, ನೇವಾರ ಮಲ್ಲಮ್ಮ, ಮುದೇಗೌಡ್ರ ರತ್ನಮ್ಮ, ಸುಶೀಲಮ್ಮ, ಬಡಿಗೇರ ರೇಖಾ, ಎಚ್.ಎಂ. ಅಕ್ಕಮ್ಮ ಸೇರಿದಂತೆ ಇತರರಿದ್ದರು.