ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಮಹಿಳಾ ಪ್ರತಿಭಟನೆ

| Published : Feb 05 2025, 12:33 AM IST

ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಮಹಿಳಾ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಅನೇಕ ಕಿರು ಹಣಕಾಸು ಸಂಸ್ಥೆಗಳು ಆರ್‌ಬಿಐ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ಕೆಲಸ ನಿರ್ವಹಿಸುತ್ತಿವೆ. ಇವರ ಬಳಿ ಅನುಮತಿ ಪತ್ರ ಇದೆಯೇ ಅಥವಾ ಇಲ್ಲವೇ ಎಂದು ಸಂಭಂದ ಪಟ್ಟವರು ಪರಿಶೀಲನೆ ಮಾಡಬೇಕು. ಋುಣ ಮುಕ್ತ ಕಾಯಿದೆ ಅಡಿಯಲ್ಲಿ ಈ ಸಾಲಗಳನ್ನು ಮನ್ನಾ ಮಾಡಬೇಕು

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಕಿರು ಹಣಕಾಸು ಸಂಸ್ಥೆಗಳು ಸಾಲ ವಸೂಲಾತಿಗೆ ಅಕ್ರಮ ಹಾದಿ ಹಿಡಿಯುತ್ತಿವೆ, ಸಾಲಗಾರರ ಮೇಲೆ ದಬ್ಬಾಳಿಕೆ ಮಾಡುತ್ತಿವೆ ಎಂದು ಆರೋಪಿಸಿ ನಗರದಲ್ಲಿ ಮಂಗಳವಾರ ಮಹಿಳೆಯರು ಬೃಹತ್ ಪ್ರತಿಭಟನೆ ನಡೆಸಿದರು. ನಗರದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಮಂಗಳವಾರ ಕಿರುಹಣಕಾಸು ಸಂಸ್ಥೆಗಳು ಸಾಲಗಾರರಿಗೆ ನೀಡುತ್ತಿರುವ ದಬ್ಬಾಳಿಕೆ ಖಂಡಿಸಿ ಜನವಾದಿ ಮಹಿಳಾ ಸಂಘಟನೆ, ಸಿಐಟಿಯು ಮತ್ತು ಸಿಪಿಎಂ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಆರ್‌ಬಿಐ ನಿಯಮ ಉಲ್ಲಂಘನೆ

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಗಂಗಪ್ಪ ಮಾತನಾಡಿ, ನಗರದಲ್ಲಿ ಅನೇಕ ಕಿರು ಹಣಕಾಸು ಸಂಸ್ಥೆಗಳು ಆರ್‌ಬಿಐ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ಕೆಲಸ ನಿರ್ವಹಿಸುತ್ತಿವೆ. ಇವರ ಬಳಿ ಅನುಮತಿ ಪತ್ರ ಇದೆಯೇ ಅಥವಾ ಇಲ್ಲವೇ ಎಂದು ಸಂಭಂದ ಪಟ್ಟವರು ಪರಿಶೀಲನೆ ಮಾಡಬೇಕು. ಋುಣ ಮುಕ್ತ ಕಾಯಿದೆ ಅಡಿಯಲ್ಲಿ ಈ ಸಾಲಗಳನ್ನು ಮನ್ನಾ ಮಾಡಬೇಕು. ಬಲವಂತದ ಸಾಲ ವಸೂಲಾತಿ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಎಲ್ಲ ಮೈಕ್ರೋ ಫೈನಾನ್ಸ್‌ಗಳನ್ನು ಸೇರಿಸಿ ರಾಷ್ಟ್ರೀಕರಣ ಮಾಡಬೇಕು, ಬಲವಂತದ ಸಾಲ ವಸೂಲಿ ನಿಲ್ಲಿಸಬೇಕು, ಋುಣ ಮುಕ್ತ ಕಾಯಿದೆಯಡಿಯಲ್ಲಿಈ ಸಾಲಗಳಿಗೆ ರಿಯಾಯಿತಿ ನೀಡಬೇಕು, ರಾಷ್ಟ್ರೀಕೃತ ಬ್ಯಾಂಕ್‌ಗಳು ಬಡವರಿಗೆ ಸುಲಭ ರೀತಿಯಲ್ಲಿ ಸಾಲ ನೀಡಬೇಕು. ಸಾಲ ವಸೂಲಿ ಮಾಡುವವರು ಪ್ರತಿವಾರ ವಸೂಲಾತಿಗಾಗಿ ಮನೆ ಮುಂದೆ ಬಂದು ಬಲವಂತದ ವಸೂಲಾತಿ, ಸಾರ್ವಜನಿಕರ ಮುಂದೆ ಅವಮಾನ, ಮತ್ತು ಅಮಾನವೀಯವಾಗಿ ಸಾಲಗಾರರ ಹತ್ತಿರ ವರ್ತಿಸುತ್ತಿದ್ದಾರೆ, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು.

ಧಗ್ರಾ ವಿರುದ್ಧವೂ ಆರೋಪಧರ್ಮಸ್ಥಳ ಸಂಘದವರು ದೇವರ ಹೆಸರನ್ನು ಇಟ್ಟುಕೊಂಡು ಬಡವರಿಗೆ ಕಿರುಕುಳ ನೀಡಿ ದಂಧೆ ಮಾಡುತ್ತಿದ್ದಾರೆ, ಇಂತಹ ಅಧರ್ಮದ ವಿರುದ್ಧ ಮಹಿಳೆಯರು ದಂಗೆ ಏಳುತ್ತಾರೆ, ಕೂಡಲೇ ಕಿರುಕುಳವನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪಕ್ಕದ ಕೇರಳ ರಾಜ್ಯದಲ್ಲಿ ಋಣ ಮುಕ್ತ ಕಾಯಿದೆಯನ್ನು ಜಾರಿಗೆ ತರಲಾಗಿದೆ, ರಾಜ್ಯದಲ್ಲಿಯೂ ಸಹ ಕೇಂದ್ರ ಸರ್ಕಾರ ಮದ್ಯ ಪ್ರವೇಶ ಮಾಡಿ ಎಲ್ಲ ಸಂಘಗಳ ಸಾಲ ಮನ್ನಾ ಮಾಡಿ ಋಣ ಮುಕ್ತರನ್ನಾಗಿ ಮಾಡಬೇಕು, ಹಾಗೂ ರಾಷ್ಟೀಕೃತ ಬ್ಯಾಂಕ್ ಗಳಲ್ಲಿ ಯಾವುದೇ ಅಡಮಾನ ಮತ್ತು ಬಡ್ಡಿ ಇಲ್ಲದೇ ಮಹಿಳೆಯರಿಗೆ ಸಾಲ ನೀಡಬೇಕು ಎಂದರು.

ಕಠಿಣ ಕ್ರಮಕ್ಕೆ ಸಿದ್ಧತೆ

ಪ್ರತಿಭಟನಾಕಾರರು ಸಲ್ಲಿಸಿದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಮಹೇಶ್ ಎಸ್ ಪತ್ರಿ , ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆಗಳನ್ನು ನಡೆಸಿ ಕಠಿಣ ಕ್ರಮ ಕೈ ಗೊಳ್ಳಲು ಸರ್ಕಾರದ ಮಟ್ಟದಲ್ಲಿ ಎಲ್ಲ ಸಿದ್ಧತೆಗಳು ನಡೆದಿವೆ, ಎಲ್ಲರೂ ಸಹ ಧೈರ್ಯವಾಗಿ ಜೀವನ ನಡೆಸಬೇಕು ಯಾರು ಆತ್ಮಹತ್ಯೆಯಂತಹ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ, ಸಿಐಟಿಯು ಮುಖಂಡ ಅನೂಡಿ ನಾಗರಾಜ್, ವೆಂಕಟ ಲಕ್ಷ್ಮಮ್ಮ, ರಾಜಮ್ಮ, ನಾಗರತ್ನಮ್ಮ, ಲಕ್ಷ್ಮೀ, ಸೇರಿದಂತೆ ನೂರಾರು ಜನ ಮಹಿಳೆಯರು ಪಾಲ್ಗೊಂಡಿದ್ದರು.