ಮಹಿಳೆಯರು ಕಾರ್ಮಿಕರಾಗಿಯೇ ಉಳಿಯುತ್ತಿದ್ದಾರೆ: ಪ್ರೊ.ತುಳಸಿಮಾಲಾ

| Published : Mar 09 2024, 01:34 AM IST

ಮಹಿಳೆಯರು ಕಾರ್ಮಿಕರಾಗಿಯೇ ಉಳಿಯುತ್ತಿದ್ದಾರೆ: ಪ್ರೊ.ತುಳಸಿಮಾಲಾ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅಹಲ್ಯಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕುಲಪತಿ ಪ್ರೊ.ಬಿ.ಕೆ.ತುಳಸೀಮಾಲಾ ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ದೇಶದ ಜಿಡಿಪಿಯಲ್ಲಿ ಮಹಿಳೆಯರ ಪಾಲು ಕೇವಲ ಶೇ.೧೮ ರಷ್ಟಿದೆ. ಈ ಪಾಲು ಶೇಕಡ ೫೦ ಆಗಬೇಕಾದರೆ ಎಲ್ಲ ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶ ಒದಗಿಸಿಕೊಡಬೇಕು ಎಂದು ಕುಲಪತಿ ಪ್ರೊ.ಬಿ.ಕೆ.ತುಳಸೀಮಾಲಾ ಪ್ರತಿಪಾದಿಸಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅಹಲ್ಯಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ದೇಶದ ಜನಸಂಖ್ಯೆಯಲ್ಲಿ ಶೇ.೪೮ರಷ್ಟಿರುವ ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಸರ್ಕಾರದ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.

ಉದೋಗ್ಯಾವಕಾಶವನ್ನು ಕಲ್ಪಿಸಿಕೊಡುವುದರ ಜೊತೆಗೆ ಉದಾರೀಕರಣದಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದ ಅವರು, ಮಹಿಳೆಯರು ಮುಖ್ಯವಾಹಿನಿಗೆ ಬರದ ಹೊರತು ಅಭಿವೃದ್ಧಿ ಕಾರ್ಯಗಳು ಫಲಪ್ರದವಾಗುವುದಿಲ್ಲ. ಆದ್ದರಿಂದ ಮಹಿಳೆಯರು ಎಲ್ಲಾ ಇತಿಮಿತಿಗಳನ್ನು ಮೀರಿ ಲಭ್ಯವಿರುವ ಉದ್ಯೋಗವಕಾಶಗಳನ್ನು ಉಪಯೋಗಿಸಿಕೊಂಡು ಹೆಚ್ಚು ಹೆಚ್ಚಾಗಿ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.

ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಕೃಷಿ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ಮಹಿಳೆಯರ ಹೆಸರಿನಲ್ಲಿ ಕೃಷಿ ಭೂಮಿಯಿಲ್ಲ. ಹೀಗಾಗಿ ಬಹುತೇಕ ಮಹಿಳೆಯರು ಭೂರಹಿತ ಕೃಷಿ ಕೂಲಿಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಕೂಡ ವಾಣಿಜ್ಯೀಕರಣ ಕಾಲಿಟ್ಟಿದ್ದು ಇಲ್ಲಿ ಪುರುಷರೇ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಆದರೆ, ಮಹಿಳೆಯರು ಕಾರ್ಮಿಕರಾಗಿಯೇ ಉಳಿಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಉದಾರೀಕರಣ, ಜಾಗತೀಕರಣದ ಪ್ರಭಾವಗಳಿಂದಾಗಿ ಮಾರುಕಟ್ಟೆ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿದೆ. ಕ್ಷಿಪ್ರವಾಗಿ ಬೆಳೆಯುತ್ತಿರುವ ತಂತ್ರಜ್ಞಾನದಿಂದಾಗಿ ಉದ್ಯೋಗಾವಕಾಶಗಳು ಕೂಡ ಹೆಚ್ಚುತ್ತಿವೆ. ಆದರೆ ಈ ಹೆಚ್ಚುತ್ತಿರುವ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ನಮ್ಮ ಮಹಿಳೆಯರು ಸಿದ್ಧರಾಗಿದ್ದಾರೆಯೇ ಎಂಬ ಪ್ರಶ್ನೆ ಕೂಡ ಮುಖ್ಯವಾಗುತ್ತದೆ. ಈ ಹಂತದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಮಹಿಳೆಯರನ್ನು ಸಿದ್ಧಪಡಿಸಬೇಕಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕಿ ಸುನಂದಾ ಪಾಟೀಲ ಮಾತನಾಡಿ, ಮಹಿಳೆಯರು ಸ್ವಂತ ಶಕ್ತಿಯಿಂದ ಮುಂದೆ ಬರಬೇಕು. ತಮ್ಮ ಸಾಮರ್ಥ್ಯಗಳನ್ನು ಸಾಬೀತುಪಡಿಸುವ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಒಬ್ಬ ಮಹಿಳೆ ದೃಢ ನಿರ್ಧಾರದ ಮೂಲಕ ಮನಸು ಮಾಡಿದರೆ ಅವಳ ಜೀವನವನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತದೆ ಎಂದರು.

ಸಂಸಾರದಲ್ಲಿ ಸುಖ-ದುಃಖ ಎರಡೂ ಇರುತ್ತವೆ. ಅವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಆ ಜೀವನಾನುಭವವೇ ನಮ್ಮ ಬದುಕಿಗೆ ದಾರಿ ದೀಪವಾಗಬೇಕು. ಮಹಿಳೆಯರು ಯಾವಾಗಲೂ ಮುಂದೆ ಇಟ್ಟ ಕಾಲು ಹಿಂದಕ್ಕೆ ತೆಗೆಯಬಾರದು. ಅಂಥ ಛಲ ಮಹಿಳೆರಲ್ಲಿರುತ್ತದೆ. ಎಷ್ಟೇ ಕಷ್ಟ ಬಂದರೂ ಸಾಧನೆ ಮಾಡಿಯೇ ತೀರಬೇಕು ಅಂದಾಗ ಮಾತ್ರ ಸಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ಪ್ರೊ.ಶಾಂತಾದೇವಿ ಟಿ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ.ಸರೋಜಾ ಸಂತಿ ವರದಿ ಮಂಡಿಸಿದರು. ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಲಕ್ಷ್ಮೀದೇವಿ ವೈ ವಂದಿಸಿದರು. ಡಾ. ಭಾರತಿ ಗಾಣಿಗೇರ ನಿರೂಪಿಸಿದರು.