ಮಹಿಳಾ ಶೋಷಣೆ ಇನ್ನೂ ನಿಂತಿಲ್ಲ: ಲೇಖಕಿ ಇಂದಿರಮ್ಮ

| Published : Mar 25 2024, 12:45 AM IST

ಸಾರಾಂಶ

ಮಹಿಳೆಯಿಲ್ಲದೆ ಕುಟುಂಬ ಸಮರ್ಪಕವಾಗಿ ನಡೆಯುವುದಿಲ್ಲ, ಕುಟುಂಬದ ಎಲ್ಲರಿಗೂ ಪ್ರೇರಣೆಯಾಗಿ ಮಹಿಳೆ ಜವಾಬ್ದಾರಿ ನಿರ್ವಹಿಸುತ್ತಾಳೆ. ಆದರೆ ಪುರುಷ ಹಾಗೂ ಮಹಿಳೆ ಎಂಬ ತಾರತಮ್ಯ ಕುಟುಂಬಗಳಲ್ಲಿ ಇದೆ. ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮನೆ ಮಹಿಳೆಯ ಅಭಿಪ್ರಾಯ ಕೇಳದಿರುವ ವ್ಯವಸ್ಥೆ ನಮ್ಮಲ್ಲಿ ಈಗಲೂ ಇದೆ.

ಕನ್ನಡಪ್ರಭ ವಾರ್ತೆ ತುಮಕೂರು

ಮಹಿಳೆಯರಿಗೆ ಶಿಕ್ಷಣ, ಉದ್ಯೋಗ, ಆಸ್ತಿ ಹಕ್ಕು, ಮತ್ತಿತರ ಹಕ್ಕುಗಳ ಅವಕಾಶಗಳಿದ್ದರೂ, ಮಹಿಳಾ ಜಾಗೃತಿಯಾಗುತ್ತಿದ್ದರೂ ಮಹಿಳೆಯ ಮೇಲಿನ ಶೋಷಣೆ, ಅತ್ಯಾಚಾರ ಇನ್ನೂ ನಿಂತಿಲ್ಲ, ಇಂದಿಗೂ ಮಹಿಳೆಯನ್ನು ಎರಡನೇ ದರ್ಜೆ ಪ್ರಜೆಯಾಗಿ ಕಾಣಲಾಗುತ್ತಿದೆ. ಈ ಮನಸ್ಥಿತಿ ಬದಲಾಗಬೇಕು ಎಂದು ಲೇಖಕಿ, ಹೋರಾಟಗಾರ್ತಿ ಎನ್. ಇಂದಿರಮ್ಮ ಹೇಳಿದರು.

ತುಮಕೂರು ಜಿಲ್ಲಾ ಮಹಿಳಾ ಸಂಘಟನೆ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಜಿಲ್ಲಾ ಮಹಿಳಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಸಂಘಟನೆಗಳು ಶಾಲಾ - ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸಿ, ಶೋಷಣೆ ವಿರುದ್ಧ ಜಾಗೃತಗೊಳಿಸಬೇಕು ಎಂದು ಕರೆ ನೀಡಿದರು.

ಮಹಿಳೆಯಿಲ್ಲದೆ ಕುಟುಂಬ ಸಮರ್ಪಕವಾಗಿ ನಡೆಯುವುದಿಲ್ಲ, ಕುಟುಂಬದ ಎಲ್ಲರಿಗೂ ಪ್ರೇರಣೆಯಾಗಿ ಮಹಿಳೆ ಜವಾಬ್ದಾರಿ ನಿರ್ವಹಿಸುತ್ತಾಳೆ. ಆದರೆ ಪುರುಷ ಹಾಗೂ ಮಹಿಳೆ ಎಂಬ ತಾರತಮ್ಯ ಕುಟುಂಬಗಳಲ್ಲಿ ಇದೆ. ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮನೆ ಮಹಿಳೆಯ ಅಭಿಪ್ರಾಯ ಕೇಳದಿರುವ ವ್ಯವಸ್ಥೆ ನಮ್ಮಲ್ಲಿ ಈಗಲೂ ಇದೆ ಎಂದರು.

ಎಲ್ಲಾ ಕ್ಷೇತ್ರಗಳಲ್ಲೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಮಹಿಳೆ, ತನ್ನ ಕ್ಷೇತ್ರಗಳಲ್ಲಿ ಹಲವು ರೀತಿಯ ತಾರತಮ್ಯದ ಸವಾಲುಗಳನ್ನು ಎದುರಿಸಬೇಕಾಗಿದೆ. ಪ್ರಕೃತಿಯಲ್ಲಿ ಪುರುಷನಷ್ಟೇ ಮಹಿಳೆಯೂ ಶಕ್ತಿಸಾಮರ್ಥ್ಯ ಪಡೆದಿರುತ್ತಾಳೆ. ಆದರೂ ಮಹಿಳೆ ಶಕ್ತಿಹೀನಳು ಎಂಬ ಭಾವನೆ ಸಮಾಜದಿಂದ ಹೋಗಿಲ್ಲ, ಇದೇ ಕಾರಣಕ್ಕೆ ಮಹಿಳೆಯನ್ನು ಅವಕಾಶ ವಂಚಿತಳನ್ನಾಗಿ ಮಾಡುವ ಅನೇಕ ಸಂದರ್ಭಗಳಿವೆ. ರಾಜಕಾರಣ ನಿಭಾಯಿಸುವ ಚಾಕಚಕ್ಯತೆ ಮಹಿಳೆಗಿದ್ದರೂ ಪುರುಷರಿಗೆ ಸಿಗುವಷ್ಟು ಅವಕಾಶ ಸಿಗುತ್ತಿಲ್ಲ. ಇವೆಲ್ಲವೂ ಮಹಿಳೆ ಬಗ್ಗೆ ಸಮಾಜ ಹೊಂದಿರುವ ಧೋರಣೆ ತೋರಿಸುತ್ತದೆ. ಮಹಿಳಾ ಸಂಘಟನೆಗಳು ಮಹಿಳೆಯರಿಗೆ ಧ್ವನಿಯಾಗಿ ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಾ ಅವರು ಸಮಾಜದ ಮುಖ್ಯವಾಹಿನಿಗೆ ಬರಲು ನೆರವಾಗಬೇಕು ಎಂದು ಇಂದಿರಮ್ಮ ಸಲಹೆ ಮಾಡಿದರು.

ತುಮಕೂರು ಜಿಲ್ಲಾ ಮಹಿಳಾ ಸಂಘಟನೆಯ ಅಧ್ಯಕ್ಷೆ, ಲೇಖಕಿ ಡಾ. ಶೈಲಾ ನಾಗರಾಜು ಮಾತನಾಡಿ, ಮಹಿಳೆಗೆ ಕುಟುಂಬ ಸದಸ್ಯರು ಮೊದಲಿಗೆ ಗೌರವ ಕೊಟ್ಟು ಆಕೆಗೆ ಘನತೆಯಿಂದ ಬಾಳುವ ಅವಕಾಶ ನೀಡಬೇಕು. ಆಕೆ ಸಾಮಾಜಿಕವಾಗಿ ಬೆಳೆಯಲು ಕುಟುಂಬದವರು ಒತ್ತಾಸೆಯಾಗಿ ನಿಲ್ಲಬೇಕು ಎಂದರು.

ಈ ವೇಳೆ ಸಮಾಜ ಸೇವಕರು, ನಿವೃತ್ತ ಮುಖ್ಯೋಪಾಧ್ಯಾಯನಿ ಸರ್ವಮಂಗಳ ಶಂಕರ್ ಅವರಿಗೆ ಜಿಲ್ಲಾ ಮಹಿಳಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ವರದಕ್ಷಿಣೆ ವಿರೋಧಿ ವೇದಿಕೆ ಮಾಜಿ ಅಧ್ಯಕ್ಷೆ ಜೀವರತ್ನ, ಕೃಷಿ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎಂ.ವಿಜಯಕುಮಾರ್, ಲೇಖಕಿ ಶಾಲಿನಿ ದೇವಪ್ರಕಾಶ್, ಲೇಖಕ ದೊಂಬರನಹಳ್ಳಿ ನಾಗರಾಜ್, ಲೇಖಕಿ ಎಂ.ಪ್ರವೀಣಾ ಮೊದಲಾದವರು ಭಾಗವಹಿಸಿದ್ದರು.

ಈ ವೇಳೆ ಮಹಿಳಾ ಗೀತಗಳ ಗಾಯನ, ನೃತ್ಯ ರೂಪಕ, ವಚನ ಗಾಯನ, ಜಾಗೃತಿ ಗೀತೆಗಳ ಗಾಯನ ಹಮ್ಮಿಕೊಳ್ಳಲಾಗಿತ್ತು.