ನರಗುಂದ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚುನಾವಣೆಯಲ್ಲಿ ಹೇಳಿದ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದು ಜನರನ್ನು ಆರ್ಥಿಕವಾಗಿ ಸದೃಢ ಮಾಡಿದೆ. ಮಹಿಳೆಯರ ಆದಾಯ ದ್ವಿಗುಣಗೊಂಡಿದೆ ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿವೇಕ ಯಾವಗಲ್ ತಿಳಿಸಿದರು.ತಾಲೂಕಿನ ಹುಣಶೀಕಟ್ಟಿ ಗ್ರಾಮದ ಗ್ರಾಪಂ ಸಭಾಭವನದಲ್ಲಿ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಇಲಾಖೆಯ ಅಧಿಕಾರಿಗಳ ಮತ್ತು ಈ ಭಾಗದ ಜನರ ಸಹಕಾರದೊಂದಿಗೆ ಎಲ್ಲ ಗ್ಯಾರಂಟಿ ಯೋಜನೆಗಳಲ್ಲಿ ಶೇ. 99ರಷ್ಟು ಪ್ರಗತಿ ಸಾಧಿಸಿದ್ದೇವೆ. ಇದಕ್ಕೆ ನಮ್ಮ ಇಲಾಖಾ ಅಧಿಕಾರಿಗಳ ಕ್ರಿಯಾತ್ಮಕ ಕಾರ್ಯಶೈಲಿ ಮತ್ತು ಸಮಿತಿ ಪದಾಧಿಕಾರಿಗಳ ಆಸಕ್ತಿ ಕಾರಣ ಎಂದರು.ಸಮಿತಿ ಸದಸ್ಯ ಟಿ.ಬಿ. ಶಿರಿಯಪ್ಪಗೌಡ್ರ ಮಾತನಾಡಿ, ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದು ಜನರಪರ ಆಡಳಿತವನ್ನು ನೀಡುತ್ತಿದೆ ಎಂದರು.

ಸದಸ್ಯ ಉಮಾ ದ್ಯಾವನೂರ ಮಾತನಾಡಿ, ನಾಡಿನ ಮಹಿಳೆಯರ ಸಬಲೀಕರಣಕ್ಕೆ ಗೌರವಯುತ ಬದುಕಿಗಾಗಿ ಸರ್ಕಾರದ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮೀ ಯೋಜನೆಗಳನ್ನು ಮತ್ತು ಯವನಿಧಿ ಯೋಜನೆಯ ಮೂಲಕ ಯುವ ಸಮುದಾಯದವರ ಆರ್ಥಿಕ ಶಕ್ತಿ ಹಾಗೂ ಜ್ಞಾನವನ್ನು ಸಂಪಾದಿಸಲು ಸಹಕಾರಿಯಾಗಿದೆ ಎಂದರು.ಸಮಿತಿ ಸದಸ್ಯ ದ್ಯಾಮಣ್ಣ ಕಾಶಪ್ಪನವರ ಮಾತನಾಡಿ, ರಾಜ್ಯ ಸರ್ಕಾರದ ವಿಶ್ವಮಾನ್ಯ ಗ್ಯಾರಂಟಿ ಯೋಜನೆಗಳು ದೇಶದ ವಿವಿಧ ರಾಜ್ಯಗಳಲ್ಲಿ ಸಹ ನಮ್ಮ ಗ್ಯಾರಂಟಿ ಯೋಜನೆಗಳನ್ನು ಅನುಸರಿಸಿಕೊಂಡು ಬೇರೆ ಬೇರೆ ರೂಪದಲ್ಲಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ನಮ್ಮ ಯೋಜನೆಗಳು ಜನರ ಕಷ್ಟಕ್ಕೆ ನೆರವಾಗುವ ಮೂಲಕ ಅವರಿಗೆ ಆಸರೆಯಾಗಿವೆ ಎಂದರು.ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾತನಾಡಿ, ಗೃಹಲಕ್ಷ್ಮೀ ಯೋಜನೆ ತಾಲೂಕಿನ ಶೇ. 99ರಷ್ಟು ಜಾರಿಗೊಂಡು 23430 ಯಜಮಾನಿಯರಿಗೆ ಪ್ರತಿ ತಿಂಗಳು ₹2000ರಂತೆ 2025ರ ಡಿಸೆಂಬರ್ ಅಂತ್ಯದವರೆಗೆ ‌ಡಿಬಿಟಿ ಮೂಲಕ ಪಾವತಿಸಿದೆ ಎಂದರು.

ಹೆಸ್ಕಾಂ ಇಲಾಖೆಯ ಅಧಿಕಾರಿ ಮಾತನಾಡಿ, ತಾಲೂಕಿನ ನೋಂದಾಯಿತ 25370 ವಿದ್ಯುತ್ ಸ್ಥಾವರಗಳ ಪೈಕಿ 25118 ಸ್ಥಾವರಗಳಿಗೆ ಗೃಹಜ್ಯೋತಿ ಯೋಜನೆಯಡಿ ಪ್ರತಿ ತಿಂಗಳು 200 ಯುನಿಟ್‌ನಂತೆ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗಿದೆ ಎಂದರು.ಆಹಾರ ನಿರೀಕ್ಷಕ ಅಧಿಕಾರಿ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ 23114 ಪಡಿತರ ಚೀಟಿ ಹೊಂದಿದ ತಲಾ ಒಬ್ಬರಿಗೆ 10 ಕೆಜಿ ಅಕ್ಕಿಯಂತೆ ಒಟ್ಟು78750 ಫಲಾನುಭವಿಗಳಿಗೆ ಆಹಾರಧಾನ್ಯಗಳನ್ನು ಫೆಬ್ರವರಿ ಅಂತ್ಯದವರೆಗೆ ವಿತರಿಸಿದೆ ಎಂದರು.ಇದೇ ಸಂದರ್ಭದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಭಾವಚಿತ್ರಕ್ಕೆ ಪುಷ್ಪವೃಷ್ಟಿ ಸಮರ್ಪಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಸಮಿತಿಯ ಸದಸ್ಯರಾದ ಬಸನಗೌಡ ಮಲ್ಲನಗಿಡ್ರ, ರಮಜಾನಸಾಬ ನದಾಫ್, ವೀರೇಶ ಚಳುಕಿ, ವಿನಾಯಕ ಹಡಗಲಿ, ವೀರಯ್ಯ ಹುಚ್ಚಪ್ಪಯ್ಯನಮಠ, ಬಸವರಾಜ ಹೊಂಗಲ, ಹನುಮಂತ ರಾಮಣ್ಣವರ, ಶೇಖರಗೌಡ ಮದ್ನೂರ, ದೇವರಾಜ ನಾಗನೂರ, ಚಂದ್ರಶೇಖರಗೌಡ ಪಾಟೀಲ ಮೌಲಾಸಾಬ ಅರಬಜಮಾದಾರ, ಬಸವರಡ್ಡಿ ಕಾಮರೆಡ್ಡಿ, ಪಿಡಿಒ ವಿ.ಆರ್. ರಾಯನಗೌಡ್ರ, ಪ್ರದೀಪ ಕದಂ, ಸಿಂಬ್ಬದಿ ಇತರರು ಇದ್ದರು.