ಕಾರಟಗಿ: ಮಹಾಶಿವರಾತ್ರಿ ಪ್ರಯುಕ್ತ ಇಲ್ಲಿನ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದಿಂದ ಸದ್ಭಾವನಾ ಶಾಂತಿ ಯಾತ್ರೆಯೊಂದಿಗೆ ಮಹಿಳೆಯರ ಕುಂಭೋತ್ಸವ ಅಮರನಾಥ ಶಿವಲಿಂಗದ ಭವ್ಯ ಮೆರವಣಿಗೆ ನಡೆಯಿತು.
ಪಟ್ಟಣದ ಈಶ್ವರಿ ವಿದ್ಯಾಲಯದ ಬ್ರಹ್ಮ ಕುಮಾರಿ ಸೇವಾ ಕೇಂದ್ರದಿಂದ ಆರಂಭವಾದ ಶಾಂತಿ ಸದ್ಭಾವನಾ ಶಾಂತಿಯಾತ್ರೆಗೆ ಈಶ್ವರಿಯ ವಿದ್ಯಾಲಯದ ಆವರಣದಲ್ಲಿ ಉದ್ಯಮಿ ಕೆ.ನಾಗಪ್ಪ ವಿದ್ಯಾಲಯದ ಧ್ವಜ ಬಿಸುವ ಮೂಲಕ ಚಾಲನೆ ನೀಡಿ, ಶಿವರಾತ್ರಿಯಂದು ಉಪವಾಸ, ಜಾಗರಣೆ ಬದಲು ಅರಿಷಡ್ವರ್ಗಗಳಿಂದ ದೂರವಾಗುವ ಸಂಕಲ್ಪ ಮಾಡಬೇಕು. ಮನಸ್ಸು ಮತ್ತು ಬುದ್ಧಿಯಿಂದ ಭಗವಂತನ ಸಾಮಿಪ್ಯ ಸಾಧಿಸುವುದೇ ಉಪವಾಸವಾಗಿದೆ ಎಂದರು.ಬ್ರಹ್ಮಕುಮಾರಿ ಸೇವಾ ಕೇಂದ್ರದ ಡಾ.ರೇಖಾ ಅಕ್ಕಾ ಮಾತನಾಡಿ, ಜಗತ್ತನಲ್ಲಿಂದು ಅಜ್ಞಾನವೆಂಬ ಕತ್ತಲು ಆವರಿಸಿಕೊಂಡಿದೆ. ಭಯ, ಅಶಾಂತಿ ಆ ಪರಮಾತ್ಮನು ನಿವಾರಿಸಿ ಲೋಕ ಕಲ್ಯಾಣವನ್ನುಂಟು ಮಾಡಲೆಂದು ಈಶ್ವರಿ ವಿದ್ಯಾಲಯದ ಪರಿವಾರದಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಈ ಸದ್ಭಾವನಾ ಶಾಂತಿ ಯಾತ್ರೆಯೊಂದಿಗೆ ಅಮರನಾಥ ಶಿವಲಿಂಗದ ಭವ್ಯ ಮೆರವಣಿಗೆ ನಡೆಸಲಾಗಿದೆ ಎಂದರು.
ಶಾಂತಿ ಯಾತ್ರೆ ಬ್ರಹ್ಮಕುಮಾರಿ ಸೇವಾ ಕೇಂದ್ರದಿಂದ ಪ್ರಾರಂಭವಾಗಿ ಆರ್.ಜಿ.ರಸ್ತೆ, ಸಾಲೋಣಿ, ಸಂಗಮೇಶ್ವರ ಗುಡಿ, ಶರಣ ಬಸವೇಶ್ವರ ದೇವಸ್ಥಾನದ ಮೂಲಕ ಈಶ್ವರ ಗುಡಿ,ಹಳೆಬಜಾರ್, ರಂಗಮಂದಿರದ ಮೂಲಕ ಸಾಗಿ ಆರ್.ಜಿ.ರಸ್ತೆ, ದಲಾಲ್ ಬಜಾರ್ ರೋಡ್, ನವಲಿ ರೋಡ್, ಶ್ರೀದೇವಿ ದೇವಸ್ಥಾನದ ರಸ್ತೆಯಲ್ಲಿ ಸಾಗಿ ಬ್ರಹ್ಮಕುಮಾರಿ ಸೇವಾ ಕೇಂದ್ರಕ್ಕೆ ಬಂದು ತಲುಪಿತು.ಇದಕ್ಕೂ ಮುಂಚೆ ಬೆಳಗ್ಗೆ ೮ ಗಂಟೆಗೆ ಸೇವಾ ಕೇಂದ್ರದಲ್ಲಿ ಶಿವಧ್ವಜಾರೋಹಣದೊಂದಿಗೆ ೧೦೮ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ ನಡೆಯಿತು.