ಮಹಿಳಾ ರಾಜಕೀಯ ಚಿಂತನೆಗಳನ್ನು ಗುರುತಿಸಿಲ್ಲ: ಪ್ರೊ.ವರದೇಶ್‌ ಹಿರೇಗಂಗೆ

| Published : Aug 22 2025, 02:00 AM IST

ಸಾರಾಂಶ

ಕುಂದಾಪುರ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ತೃತೀಯ ಸೆಮಿಸ್ಟರ್ ರಾಜ್ಯ ಶಾಸ್ತ್ರ ಪಠ್ಯಕ್ರಮದ ಕುರಿತ ಕಾರ್ಯಾಗಾರ ನೆರವೇರಿತು.

ಕುಂದಾಪುರ: ಸರ್ವೋದಯ ಮತ್ತು ಸ್ವರಾಜ್ಯದ ಪರಿಕಲ್ಪನೆಯ ಭಾರತವನ್ನು ನಾವು ಕಟ್ಟಬೇಕು ಎಂದು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲೋಸಾಫಿಕಲ್ ಆರ್ಟ್ಸ್ ಮತ್ತು ಸೈನ್ಸ್‌ನ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಹೇಳಿದ್ದಾರೆ. ಅವರು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ, ಆಂತರಿಕ ಗುಣಮಟ್ಟ ಭರವಸೆ ಕೋಶ, ಮತ್ತು ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಸಹಯೋಗದಲ್ಲಿ ನಡೆದ ತೃತೀಯ ಸೆಮಿಸ್ಟರ್ ರಾಜ್ಯ ಶಾಸ್ತ್ರ ಪಠ್ಯಕ್ರಮದ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ರಾಜಕೀಯ ಶಾಸ್ತ್ರ ಎನ್ನುವುದು ವಿಶಾಲ ವ್ಯಾಪ್ತಿಯ ಕ್ಷೇತ್ರ. ಜಗತ್ತಿನಾದ್ಯಂತ ಹರಡಿಕೊಂಡ ಪ್ರಾಚೀನ ಜ್ಞಾನ ಶಾಸ್ತ್ರ. ವಿಶ್ವದೆಲ್ಲೆಡೆ ಹಲವು ಮಜಲುಗಳನ್ನು ಕಾಯ್ದುಕೊಂಡಿದೆ. ಹಲವು ಸಿದ್ಧಾಂತಗಳನ್ನು ಒಳಗೊಂಡಿದೆ. ಪ್ರಪಂಚದ ಬೇರೆಬೇರೆ ದೇಶಗಳಲ್ಲಿ ರಾಜಕೀಯ ಚಿಂತನೆ ಮತ್ತು ಚಿಂತಕರ ವಿಚಾರಗಳನ್ನು ತಿಳಿಯುತ್ತೇವೆ. ಆದರೆ ಮಹಿಳಾ ರಾಜಕೀಯ ಚಿಂತನೆಗಳನ್ನು ಗುರುತಿಸಿದಂತೆಯೇ ಇಲ್ಲ. ಭಾರತದಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯರಂತಹ ರಾಜಕೀಯ ಚಿಂತಕರಿದ್ದಾರೆ. ಮಹಿಳೆಯರು ಕೇವಲ ಸಾಹಿತ್ಯ, ಸ್ತ್ರೀ ವಾದ, ಸಾಮಾಜಿಕವಾಗಿ ಸೀಮಿತವಾಗಿಲ್ಲ. ಅವರು ಇಂದು ಎಲ್ಲ ಕ್ಷೇತ್ರಗಳಲ್ಲೂ ಇದ್ದಾರೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಭಂಡಾರ್ಕಾರ್ಸ್ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಪ್ರೊ.ಸತ್ಯನಾರಾಯಣ, ಮಂಗಳೂರು ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಐವಿನ್ ಫ್ರಾನ್ಸಿಸ್ ಲೋಬೋ, ಕಾರ್ಕಳದ ಎಸ್.ವಿ.ಟಿ.ಕಾಲೇಜಿನ ಪ್ರಾಂಶುಪಾಲೆ ಪ್ರೊ.ಗೀತಾ ಜಿ ಉಪಸ್ಥಿತರಿದ್ದರು.ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಡಾಗಣೇಶ್ ಶೆಟ್ಟಿ ವಂದಿಸಿದರು. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಹರ್ಷಿತಾ ಸ್ವಾಗತಿಸಿದರು. ಉಪನ್ಯಾಸಕಿ ಅಕ್ಷತಾ ನಿರೂಪಿಸಿದರು. ಕಾವ್ಯಶ್ರೀ ಪರಿಚಯಿಸಿದರು.