ಮೀಟರ್ ಬಡ್ಡಿ, ವಸೂಲಿ ವಿರೋಧಿಸಿ ಮಹಿಳೆಯರ ಪ್ರತಿಭಟನೆ

| Published : Nov 09 2024, 01:18 AM IST / Updated: Nov 09 2024, 01:19 AM IST

ಸಾರಾಂಶ

ಎಪಿಎಂಸಿ ಯಾರ್ಡ್‍ನಿಂದ ತಾಲೂಕು ಕಚೇರಿವರೆಗೆ 5 ಕಿಮೀ ಪಾದಯಾತ್ರೆ । ತಹಸೀಲ್ದಾರ ಮೂಲಕ ಸಿಎಂಗೆ ಮನವಿ

ಕನ್ನಡಪ್ರಭ ವಾರ್ತೆ ಆಳಂದ

ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ವಿವಿಧ ಮಹಿಳಾ ಸಂಘಗಳ ಹೆಸರಿನಲ್ಲಿ ಮೀಟರ್ ಬಡ್ಡಿ ವಸೂಲಿ ಮಾಡುತ್ತಿರುವ ಸಂಸ್ಥೆಗಳ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿ ನೊಂದ ಮಹಿಳೆಯರು 5 ಕಿಮೀ ದೂರದ ತಾಲೂಕು ಆಡಳಿತ ಸೌಧವರೆಗೆ ಪಾದಯಾತ್ರೆಯ ಮೂಲಕ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಅಖಿಲ ಭಾರತ ಕಿಸಾನ್ ಸಭಾ, ಆಲ್ ಇಂಡಿಯಾ ತಂಜಿಮ ಇನ್ಸಾಫ್ ಹಾಗೂ ಅಖಿಲ ಭಾರತ ಮಹಿಳಾ ಒಕ್ಕೂಟಗಳ ಆಶ್ರಯದಲ್ಲಿ ನಡೆದ ಈ ಪ್ರತಿಭಟನೆ ಪಟ್ಟಣದ ಬಸ್ ನಿಲ್ದಾಣ ಬಳಿಯ ಎಪಿಎಂಸಿ ಯಾರ್ಡ್‍ನಿಂದ ತಾಲೂಕು ಆಡಳಿತ ಕಚೇರಿವರೆಗೆ 5 ಕಿಮೀ ಪಾದಯಾತ್ರೆ ನಡೆಸಿದ ಮಹಿಳೆಯರು ಮೀಟರ್ ಬಡ್ಡಿ ಹಾಗೂ ಕಾನೂನು ಬಾಹಿರ ಸಾಲ ವಸೂಲಿ ಮಾಡುತ್ತಿರುವ ಸಂಸ್ಥೆಗಳ ವಿರುದ್ಧ ಘೋಷಣೆ ಕೂಗಿದರು.

ಕಾರ್ಮಿಕರನ್ನು ಸಾಲದ ಜಾಲದಲ್ಲಿ ಸಿಲುಕಿಸಿ ವಸೂಲಿಗೆ ಮುಂದಾಗಿ ಅವಾಚ್ಯ ಶಬ್ದಗಳಿಂದ ಅವಮಾನಿಸುವಂತಹ ಅವ್ಯವಸ್ಥೆಗಳ ಮೇಲೆ ಕಡ್ಡಾಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಭಾಗವಹಿಸಿದ ಮಹಿಳೆಯರು, ಪಟ್ಟಣದಲ್ಲಿರುವ ನಗರ ಕೂಲಿ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು, ಅನಾರೋಗ್ಯ ಅಥವಾ ಹೆರಿಗೆ ಸಮಯದಲ್ಲಿ ಅನಿವಾರ್ಯವಾಗಿ ಬೇಕಾಗುವ ಹಣಕಾಸು ವ್ಯವಸ್ಥೆ ಮಾಡಲು ಹಾಗೂ ಬ್ಯಾಂಕಿನ ಮೂಲಕ ಅಥವಾ ಕೋ-ಆಪರೇಟಿವ್ ಸೊಸೈಟಿಯ ಮೂಲಕ ತಕ್ಕ ರೀತಿಯ ಪರಿಹಾರವನ್ನು ರೂಪಿಸುವ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಾಲ ನೀಡುವ ನೆಪದಲ್ಲಿ ಜಾಲ ಬಿಚ್ಚಿರುವ ಸಂಸ್ಥೆಗಳನ್ನು ಅಕ್ರಮವಾಗಿರುವ ಕೋಟಿಗಟ್ಟಲೆ ಹಣವನ್ನು ಮುಟ್ಟುಗೋಲು ಹಾಕಿ ಅವರ ವ್ಯವಹಾರಗಳನ್ನು ತಡೆಯಲು ಹಾಗೂ ಬಡ್ಡಿ ವ್ಯವಸ್ಥೆಯ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಖಿಲ ಭಾರತ ಕಿಸಾನಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ, ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ, ಆಲ್ ಇಂಡಿಯಾ ತಂಜಿಮೆ ಎ-ಇನ್ಸಾಫ್ ಅಧ್ಯಕ್ಷ ಭಾಖರ ಅಲಿ ಜಮಾದಾರ, ಅಖಿಲ ಭಾರತ ಮಹಿಳಾ ಒಕ್ಕೂಟ ಪದ್ಮಾವತಿ ಎನ್ ಮಾಲಿ ಪಾಟೀಲ, ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಮಾನವ ಅಧಿಕಾರ ಒಕ್ಕೂಟದ ಶಬಾನಾ ಖಾನ್, ಫಾತಿಮಾ ಶೇಖ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಿಸಾನಸಭಾ ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ, ಬಿಎಸ್‍ಪಿ ಮಹಾದೇವ ಕಾಂಬಳೆ ಸೇರಿದಂತೆ ಪಟ್ಟಣದ ವಿವಿಧ ಬಡಾವಣೆಯ ನೂರಾರು ಮಹಿಳೆಯರು ಭಾಗಿಯಾಗಿದ್ದರು.

ಮನವಿ ಸ್ವೀಕರಿಸಿದ ತಹಸೀಲ್ದಾರರು ಈ ಕುರಿತು ಬೇಡಿಕೆಯನ್ನು ಸರ್ಕಾರಕ್ಕೆ ತಲುಪಿಸಿ ಬೇಡಿಕೆ ಈಡೇರಿಕೆಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.