ಸಾರಾಂಶ
ಕೋಲ್ಕತಾ : ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಉಚಿತ ಬಸ್ ಪ್ರಯಾಣ ಯೋಜನೆಯಿಂದ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ. ಸಾರಿಗೆ ವೆಚ್ಚದಿಂದ ಶೇ. 30-50ರಷ್ಟು ಹಣ ಉಳಿಸುತ್ತಿದ್ದಾರೆ. ಈ ಉಳಿತಾಯದ ಹಣವನ್ನು ಮಕ್ಕಳ ಶಿಕ್ಷಣ, ಆರೋಗ್ಯ, ಆಹಾರ, ವಿಮೆ ಯೋಜನೆಗಳಿಗೆ ಬಳಸಿದ್ದಾರೆ. ಬೆಂಗಳೂರು, ಹುಬ್ಬಳ್ಳಿ- ಧಾರವಾಡದಲ್ಲಿ ಈ ಪ್ರಮಾಣ ಹೆಚ್ಚಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಈ ಬಗ್ಗೆ ನಿಕೋರ್ ಅಸೋಸಿಯೇಟ್ ಎನ್ನುವ ಸಂಸ್ಥೆ , ‘ಭಾರತದಲ್ಲಿ ಮಹಿಳಾ ಬಸ್ ದರ ಸಬ್ಸಿಡಿ ಯೋಜನೆಗಳ ಬಹು- ರಾಜ್ಯ ಮೌಲ್ಯಮಾಪನ’ ಎಂಬ ವರದಿ ಸಿದ್ಧಪಡಿಸಿದೆ. ಅದರಲ್ಲಿ ದೆಹಲಿ, ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದ 10 ನಗರಗಳಲ್ಲಿ ಆಯ್ದುಕೊಂಡ ಸಮೀಕ್ಷೆ ನಡೆಸಿದೆ.
ಈ ಸಮೀಕ್ಷೆಯು ಕರ್ನಾಟಕದ ಬೆಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ ನಡೆದಿದೆ. ಅದರಲ್ಲಿ ‘ಮಹಿಳೆಯರಿಗಾಗಿ ಇರುವ ಉಚಿತ ಬಸ್ ಯಾನದ ಶಕ್ತಿ ಯೋಜನೆಯಿಂದ ಮಹಿಳೆಯರಲ್ಲಿ ಆರ್ಥಿಕ ಪ್ರಗತಿ ಕಂಡು ಬಂದಿದ್ದು, ಮಹಿಳೆಯರಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಿದೆ’ ಎಂದು ತಿಳಿಸಲಾಗಿದೆ.
ಉಚಿತ ಬಸ್ ಯಾನದ ಪರಿಣಾಮ ಬೆಂಗಳೂರಿನಲ್ಲಿ ಇತರ ನಗರಗಳಿಗೆ ಹೋಲಿಸಿದರೆ ಐದು ಪಟ್ಟು ಹೆಚ್ಚಿನ ದರದಲ್ಲಿ ಉದ್ಯೋಗ ಸುಧಾರಣೆಯಾಗಿದೆ. ಇನ್ನು ಹುಬ್ಬಳ್ಳಿಯಲ್ಲಿಯೂ ಶೇ.21ರಷ್ಟು ಮಹಿಳೆಯರು ಉದ್ಯೋಗದಲ್ಲಿ ಸುಧಾರಣೆ ಕಂಡಿದ್ದಾರೆ ಎಂದು ವರದಿ ಹೇಳಿದೆ.
ಮಕ್ಕಳ ಶಿಕ್ಷಣಕ್ಕೆ ಬಳಕೆ : ಪ್ರತಿ ತಿಂಗಳು ಶೇ.30 ರಿಂದ 50 ರಷ್ಟು ಸಾರಿಗೆ ವೆಚ್ಚವನ್ನು ಮಹಿಳೆಯರು ಉಳಿಸುತ್ತಿದ್ದಾರೆ. ಬೆಂಗಳೂರು ಮತ್ತು ಹುಬ್ಬಳ್ಳಿ- ಧಾರವಾಡದಲ್ಲಿ ಪ್ರತಿ 4ರಲ್ಲಿ ಓರ್ವ ಮಹಿಳೆ ಯೋಜನೆ ಲಾಭ ಪಡೆಯುತ್ತಿದ್ದಾರೆ. ತಿಂಗಳ ಅರ್ಧದಷ್ಟು ಸಾರಿಗೆ ವೆಚ್ಚ ಉಳಿತಾಯ ಮಾಡಿ ಅದರಲ್ಲಿ ಆಹಾರ, ಆರೋಗ್ಯ ರಕ್ಷಣೆ , ಮತ್ತು ಮಕ್ಕಳ ಶಿಕ್ಷಣದಂತಹ ಮನೆಯ ಅಗತ್ಯ ಜವಾಬ್ದಾರಿಗಳ ನಿರ್ವಹಣೆಗೆ ಬಳಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.