ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಕೋಟೆ
ಸಂವಿಧಾನಾತ್ಮಕವಾಗಿ ಮಹಿಳೆಗೆ ದೊರೆತಿರುವ ಮೀಸಲಾತಿ ಅಧಿಕಾರವನ್ನು ಸ್ವತಃ ತಾವೇ ಅನುಭವಿಸುವಂತಾಗಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ವಿ.ಗೀತಾ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಸಬಲೀಕರಣ ಕೋಶ ಯುವ ರೆಡ್ ಕ್ರಾಸ್ ಸಮಿತಿ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಇಂದು ಸಮಾಜದಲ್ಲಿ ಮಹಿಳೆ ಏನೇ ಸಾಧನೆ ಮಾಡಿದರೂ ಆಕೆಯ ಹೆಸರಿನ ಹಿಂದೆ ಗಂಡ ಅಥವಾ ತಂದೆಯ ಹೆಸರಿರುವುದು ಸಹಜ. ಮಹಿಳೆಯಾಗಿ ನಮ್ಮನ್ನು ನಾವು ಗುರುತಿಸಿಕೊಳ್ಳುವುದು ಯಾವಾಗ? ರಾಜಕೀಯವಾಗಿ ಮಹಿಳಾ ಅಧಿಕಾರವನ್ನು ಗಂಡಂದಿರು, ಮಕ್ಕಳು ಅನುಭವಿಸುವಂತಾಗಿದೆ. ಆದ್ದರಿಂದ ನಮ್ಮ ಸಬಲೀಕರಣಕ್ಕಾಗಿ ಸಂವಿಧಾನ ನೀಡಿರುವ ಅಧಿಕಾರವನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಮಾತನಾಡಿ, ಮಹಿಳೆಯರ ಆರ್ಥಿಕ ಸಬಲೀಕರಣದ ಹೊರತು ನಾವು ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗುವುದು ಕಷ್ಟದ ಕೆಲಸವ. ಅಲ್ಲದೆ ಸಮಾಜದಲ್ಲಿ ದೈಹಿಕ ಸಾಮರ್ಥ್ಯ ಮೀರಿ ಗಂಡು ಮತ್ತು ಹೆಣ್ಣಿಗೆ ಮೀಸಲಾದ ಕೆಲಸಗಳನ್ನು ಹೇರಿದ್ದಾರೆ. ಆ ನಿಟ್ಟಿನಲ್ಲಿ ಸಮಾಜ ಲಿಂಗಾಧಾರಿತವಾಗಿ ಜನರನ್ನು ವಿಂಗಡಿಸಿ ನೋಡುತ್ತಿರುವುದು ಅಸಮಾನತೆಯ ಪರಮಾವಧಿ ಎಂದರು.
ಪ್ರಾಂಶುಪಾಲ ಪ್ರೊ.ರಾಮಲಿಂಗಪ್ಪ ಮಾತನಾಡಿ, ಸಮಾಜದಲ್ಲಿ ಅಥವಾ ಕುಟುಂಬದಲ್ಲಿ ಒಂದು ಹೆಣ್ಣಿಗೆ ಗೌರವ ಸಿಗಬೇಕೆಂದರೆ ಆರ್ಥಿಕವಾಗಿ ಸಬಲಳಾಗುವುದೊಂದೇ ಮಾರ್ಗ. ಆ ನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಲ್ಲಿ ಸಮಯ ಪೋಲು ಮಾಡದೆ ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು. ಜೊತೆಗೆ ಮೌಢ್ಯ, ಕಂದಾಚಾರಗಳಿಂದ ದೂರವಿರಬೇಕು ಎಂದು ಹೇಳಿದರು.ಶಾಸಕ ಶರತ್ ಪತ್ನಿ ಪ್ರತಿಭಾ ಶರತ್ ಬಚ್ಚೇಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸುರೇಶ್, ಗೌತಮ್, ಕಾಲೇಜಿನ ಪ್ರಾಧ್ಯಾಪಕರಾದ ದೊಡ್ಡಹನುಮಯ್ಯ, ಅಮೃತಮ್ಮ, ಉಮೇಶ್‌ರೆಡ್ಡಿ, ಮಾಲಿನಿ, ರವಿಚಂದ್ರ, ರವಿಕುಮಾರ್, ಸವಿತಾ, ಈರಣ್ಣ, ಅಶ್ವತ್ಥನಾರಾಯಣ, ವಿಶ್ವೇಶ್ವರಯ್ಯ, ವೀರಭದ್ರ, ಶ್ರೀನಿವಾಸ್ ಆಚಾರ್, ದೇವಪ್ಪ ಮತ್ತಿತರರಿದ್ದರು.