ಮಹಿಳೆಯರು ತಮ್ಮ ಮಕ್ಕಳಿಗೆ ಜೀವನದಲ್ಲಿ ಉತ್ತಮ ನಾಗರಿಕರಾಗಲು, ಸಂಸ್ಕೃತಿ, ಸಂಸ್ಕಾರ ಕಲಿಸುವ ಅಗತ್ಯವಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ಮಾತಾ ಬಿ. ಮಂಜಮ್ಮ ಜೋಗತಿ ಹೇಳಿದರು.

ಹೂವಿನಹಡಗಲಿ: ಮಹಿಳೆಯರು ಯಾವ ನಿಂಧನೆಗೂ ಜಗ್ಗದೇ ಬಗ್ಗದೇ ತಮ್ಮ, ಜೀವನದ ಗುರಿ ಸಾಧನೆಯತ್ತ ಸಾಗಬೇಕು ಎಂದು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ಮಾತಾ ಬಿ. ಮಂಜಮ್ಮ ಜೋಗತಿ ಹೇಳಿದರು.

ಇಲ್ಲಿನ ಶಾದಿ ಮಹಲ್‌ನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು.

ಮಹಿಳೆಯರು ತಮ್ಮ ಮಕ್ಕಳಿಗೆ ಜೀವನದಲ್ಲಿ ಉತ್ತಮ ನಾಗರಿಕರಾಗಲು, ಸಂಸ್ಕೃತಿ, ಸಂಸ್ಕಾರ ಕಲಿಸುವ ಅಗತ್ಯವಿದೆ. ಇಂದು ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿವೆ, ತಂದೆ-ತಾಯಿಯನ್ನು ಸಾಕುವ ವಯಸ್ಸಿನಲ್ಲಿ ಅಪರಾಧಗಳನ್ನು ಮಾಡಿ ಜೈಲು ಪಾಲಾಗುತ್ತಿರುವ ಬೆಳವಣಿಗೆ ತೀರಾ ಅಪಾಯಕಾರಿ. ಆದ್ದಧರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.

ನಮ್ಮ ಕಾಯಕಕ್ಕೆ ಹೆಚ್ಚು ಮಹತ್ವ ನೀಡಬೇಕು, ದೇವರಲ್ಲಿ ಭಕ್ತಿ, ನಂಬಿಕೆ ಇಡಬೇಕಿದೆ, ತಂದೆ ತಾಯಿಗಳು ಕಷ್ಟಪಟ್ಟು ಶಿಕ್ಷಣ ಕೊಡಿಸುತ್ತಾರೆ. ಮಕ್ಕಳು ಅದನ್ನು ಯಾವುದೇ ಕಾರಣಕ್ಕೂ ದುರುಪಯೋಗವಾಗದಂತೆ ನಡೆದುಕೊಳ್ಳಬೇಕಿದೆ ಎಂದರು.

ನನ್ನಂತ ಮಗು ಹುಟ್ಟಿದರೇ ಅವರನ್ನು ಯಾವುದೇ ಕಾರಣಕ್ಕೂ ದೂರ ತಳ್ಳದೇ, ಅವರಿಗೆ ಶಿಕ್ಷಣ ಕೊಡಿಸಿ ಅವರ ಭವಿಷ್ಯ ಉತ್ತಮವಾಗುತ್ತದೆ. ತೃತೀಯ ಲಿಂಗಿಗಳು ಇಂದು ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಶೇ. 1ರಷ್ಟು ಮೀಸಲಾತಿಯಿಂದ ಸರ್ಕಾರಿ ಹುದ್ದೆಗಳಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

ಯೋಜನೆ ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರಶೇಖರ ಮಾತನಾಡಿ, ಮಹಿಳೆಯರ ದೌರ್ಬಲ್ಯಗಳೇ ಅವರ ಮೇಲೆ ದೌರ್ಜನ್ಯ ಹೆಚ್ಚಳಕ್ಕೆ ಕಾರಣವಾಗಿದ್ದು, ಅವುಗಳನ್ನು ಮೆಟ್ಟಿ ನಿಂತಾಗ ಸಮಾಜ ಸುಧಾರಣೆ ಸಾಧ್ಯವಾಗುತ್ತದೆ. ಜೀವನದಲ್ಲಿ ಶಿಕ್ಷಣ, ಶಿಸ್ತು, ಸ್ವಚ್ಛತೆ, ಕಾನೂನು ತಿಳಿವಳಿಕೆ, ಆರ್ಥಿಕ ಶಿಸ್ತು ಸೇರಿದಂತೆ ಇನ್ನಿತರ ಎಲ್ಲ ಮಾಹಿತಿಯನ್ನು ಸಂಸ್ಥೆಯ, ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಹಿಳೆಯರಿಗೆ ತರಬೇತಿ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.

ಯುವ ಜನತೆಯಲ್ಲಿ ಸಂಸ್ಕೃತಿ ಸಂಸ್ಕಾರ ರೂಢಿಸುವಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯ ಕುರಿತು, ಉಪನ್ಯಾಸಕಿ ಶೈಲಜಾ ಪವಾಡಶೆಟ್ರು ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಗಂಟಿ ಜಮಾಲ್‌ ಬೀ, ಜಿಲ್ಲಾ ನಿರ್ದೇಶಕ ಸತೀಶ ಶೆಟ್ಟಿ, ಎಸ್‌.ಎ. ಅನುಪಮ, ಕೋಡಿಹಳ್ಳಿ ಕೊಟ್ರೇಶ, ಸಂತೋಷ ಜೈನ್‌, ಸುಭಾಷ ವರಕನಹಳ್ಳಿ, ಜೆ.ಶಿವರಾಜ, ಭರತೇಶ ಬಸ್ತಿ, ಶಂಭುನಾಥ ಕಣವಿ, ತಳಕಲ್ಲು ಚಂದ್ರಪ್ಪ ಸೇರಿದಂತೆ ಇತರರಿದ್ದರು.