ಸಾರಾಂಶ
ಹಾವೇರಿ: ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಹಿಳೆಯರು ತಮಗೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸಾಧನೆಯತ್ತ ಸಾಗಬೇಕಿದೆ ಲೇಖಕಿ ಲತಾ ವಾಲಿ ತಿಳಿಸಿದರು.ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸವಣೂರು ಘಟಕದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದಾರೆ. ಆದರೆ ಸಾಂಪ್ರದಾಯಿಕ ಹೆಸರಿನಲ್ಲಿ ಶೋಷಣೆಗೂ ಒಳಗಾಗುತ್ತಿದ್ದಾಳೆ. ಶತಮಾನಗಳಿಂದಲೂ ಮಹಿಳೆ ಸಬಲೆ ಆಗಿರುವುದಕ್ಕೆ ಪುರಾವೆಗಳಿವೆ. ಆಕೆಯನ್ನು ಅಬಲೆ ಎಂದು ಗುರುತಿಸುವುದು ಒಪ್ಪಿತವಲ್ಲ. 12ನೇ ಶತಮಾನದ ವಚನ ಚಳವಳಿಗೆ ಮಹಿಳೆಯನ್ನು ಮುಂಚೂಣಿಗೆ ತಂದು ನಿಲ್ಲಿಸಿತು. ಅಲ್ಲಿಂದ ಸಮಾಜವನ್ನು ಪ್ರಶ್ನೆ ಮಾಡುವ ಸ್ವಭಾವ ಬೆಳೆಸಿಕೊಳ್ಳಲು ಕಾರಣವಾಯಿತು. ಪುರುಷ ಪ್ರಧಾನ ವ್ಯವಸ್ಥೆಯನ್ನು ಸವಾಲಾಗಿ ಸ್ವೀಕರಿಸಿ ಮುಂದಕ್ಕೆ ಸಾಗುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಎಟಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಬಾಗಲಕೋಟೆ ಮಾತನಾಡಿ, ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದಾಳೆ ಎಂಬುದನ್ನು ಪುರುಷ ಪ್ರಧಾನ ವ್ಯವಸ್ಥೆ ಒಪ್ಪುವುದಿಲ್ಲ. ಪ್ರತಿ ರಂಗದಲ್ಲೂ ಸವಾಲುಗಳನ್ನು ಮೀರಿ ಸಾಧನೆಯತ್ತ ಸಾಗುತ್ತಿರುವ ಮಹಿಳೆಯರು ಸಾಧಕರಿಗೆ ಸ್ಫೂರ್ತಿ ಆಗಿದ್ದಾರೆ. ಅದಕ್ಕೆ ಕಲ್ಪನಾ ಚಾವ್ಲಾ ಅಷ್ಟೇ ಅಲ್ಲದೇ ಸುನೀತಾ ವಿಲಿಯಮ್ಸ್ ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಸಾಗಿ ಬಂದಿದ್ದಾರೆ ಎಂದರು. ಸಾಕ್ಷ್ಯಚಿತ್ರ ನಿರ್ದೇಶಕ ಅರಳಿಕಟ್ಟಿ ಗೂಳಪ್ಪ ಮಾತನಾಡಿ, ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಹೋರಾಟಗಾರರನ್ನು ಬೆಂಬಲಿಸಿ ಕೌಟುಂಬಿಕ ಹೊಣೆಗಾರಿಕೆ ನಿಭಾಯಿಸಿದವರು ಆ ಮನೆಯ ಮಹಿಳೆಯರು. ಈ ಹಿನ್ನೆಲೆಯಲ್ಲಿ ನಮ್ಮ ಹಾವೇರಿ ಜಿಲ್ಲೆಯ ಸಿದ್ದಮ್ಮ ಮೈಲಾರ, ವೀರಮ್ಮ ಜೋಗಳೇಕರ್, ನಾಗಮ್ಮ ಪಾಟೀಲ, ದೇವಕ್ಕ ಮನ್ನಂಗಿ ಪ್ರಾತಃಸ್ಮರಣೀಯರು ಎಂದರು.ಅತ್ಯುತ್ತಮ ಸುರಕ್ಷತಾ ಚಾಲನೆಗೆ ಗೌರವ ಪಡೆದ ಬಿ.ಎಚ್. ದ್ವಾಸಿ ಹಾಗೂ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಘಟಕದ ವ್ಯವಸ್ಥಾಪಕ ಟಿ.ಎಸ್. ಮುನ್ನಾಸಾಬ ಅಧ್ಯಕ್ಷತೆ ವಹಿಸಿದ್ದರು. ಸಾರಿಗೆ ಇಲಾಖೆಯ ಎಲ್.ಆರ್. ದಾಸರ, ರಂಗನಾಥ, ಶಿವಮೂರ್ತಿ ಬಂಡಿವಡ್ಡರ, ಮೇಘಾ ಕುರಿಯವರ, ಎಚ್.ಡಿ. ವಡ್ಡರ್, ಗೌರಮ್ಮ ಟಿ., ಅನ್ನಪೂರ್ಣಾ ಗೊಡಚಿ, ನೀಲಮ್ಮ ನೆಲೋಗಲ್ಲ, ಎಸ್.ಎಫ್. ಸುಂಕದ, ಶೋಭಾ ಮಡ್ಡಿ, ಈರಮ್ಮ ಕೊರ್ಲಹಳ್ಳಿ, ಗಂಗೋತ್ರಿ ಪಿ. ಉಪಸ್ಥಿತರಿದ್ದರು. ಚಂದ್ರು ದುಂಡಪ್ಪನವರ ನಿರೂಪಿಸಿದರು. ಹಾಲಪ್ಪಗೌಡ ಅರೆಹುಣಸಿ ಸ್ವಾಗತಿಸಿದರು. ಗಂಗಾಧರ ಪಶುಪತಿಹಾಳ ವಂದಿಸಿದರು.
23ಎಚ್‌ವಿಆರ್2ಸವಣೂರಿನ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಘಟಕದಲ್ಲಿ ಜರುಗಿದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.