ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಿಳಾ ದೌರ್ಜನ್ಯಗಳ ಜೊತೆಗೆ ಪುರುಷರಿಗೆ ತೊಂದರೆ ನೀಡುವಂತಹ ಪ್ರಕರಣಗಳೇ ಹೆಚ್ಚಾಗಿ ನ್ಯಾಯಾಲಯಕ್ಕೆ ಬರುತ್ತಿವೆ. ಹೀಗಾಗಿ ಇಂತಹ ಪ್ರಕರಣಕ್ಕೆ ಮಹಿಳೆಯರು ಕಡಿವಾಣ ಹಾಕಬೇಕು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಮಹಿಳೆಯರ ರಕ್ಷಣೆಗಾಗಿ ದೇಶದಲ್ಲಿ ಹಲವು ಕಾನೂನಗಳಿವೆ. ಆದರೆ, ಅದನ್ನು ಮಹಿಳೆಯರು ಯಾವುದೇ ಕಾರಣಕ್ಕೂ ದುರುಪಯೋಗ ಪಡಿಸಿಕೊಳ್ಳದೇ ಸದುಪಯೋಗ ಮಾಡಿಕೊಳ್ಳಬೇಕು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್ ಹೇಳಿದರು.ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಿಳಾ ದೌರ್ಜನ್ಯಗಳ ಜೊತೆಗೆ ಪುರುಷರಿಗೆ ತೊಂದರೆ ನೀಡುವಂತಹ ಪ್ರಕರಣಗಳೇ ಹೆಚ್ಚಾಗಿ ನ್ಯಾಯಾಲಯಕ್ಕೆ ಬರುತ್ತಿವೆ. ಹೀಗಾಗಿ ಇಂತಹ ಪ್ರಕರಣಕ್ಕೆ ಮಹಿಳೆಯರು ಕಡಿವಾಣ ಹಾಕಬೇಕು ಎಂದು ಸಲಹೆ ನೀಡಿದರು.ಇಂದಿನ ಸಮಾಜದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ಸೇರಿದಂತೆ ಅತ್ತೆ, ನಾದಿನಿಯರಿಂದ ವರದಕ್ಷಿಣೆಯ ಕಿರುಕುಳ ಹಾಗೂ ಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ವೈಶ್ಯೆವಾಟಿಕೆ, ಭ್ರೂಣ ಹತ್ಯೆ ಪ್ರಕರಣಗಳು ನಡೆಯುತ್ತಿವೆ. ಸಮಾಜದಲ್ಲಿ ಹೆಣ್ಣಿಗೆ ಹೆಣ್ಣೆ ಶತೃವಾಗಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಗೌರವ ಇಲ್ಲದಂತಹ ಪುರುಷರಿಂದ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಹಾಗೂ ಪೋಕ್ಸೋ ಪ್ರಕರಣಗಳು ಹೆಚ್ಚುತ್ತಲಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಬಿ.ಪಾರ್ವತಮ್ಮ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರ ಪಾತ್ರ ಅತ್ಯಮೂಲ್ಯವಾಗಿದೆ. ಶಿಕ್ಷಣ, ರಾಜಕೀಯ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡಿದ್ದಾರೆ. ಜತೆಗೆ ಕುಟುಂಬದ ನಿರ್ವಹಣೆಯಲ್ಲೂ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಆದರೆ, ಹೆಣ್ಣು ಹಠಮಾರಿ ಧೋರಣೆ ಕೈಬಿಡಬೇಕು. ತಮಗಿರುವ ಕಾನೂನಿನ ಅರಿವು ಪಡೆದು ಸುಸ್ಥಿರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.ಇದೇ ವೇಳೆ ಕನ್ನಿಕ ಶಿಲ್ಪ ನವೋದಯ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಎಚ್.ಆರ್.ಕನ್ನಿಕ ಹಾಗೂ ನ್ಯಾಯಾಧೀಶೆ ಬಿ.ಪಾರ್ವತಮ್ಮ ಅವರನ್ನು ಮಹಿಳಾ ದಿನಾಚರಣೆ ಪ್ರಯುಕ್ತ ಸನ್ಮಾನಿಸಿ ಗೌರವಿಸಲಾಯಿತು.
ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಬಾಬು ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಗಂಗರಾಜು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೆ.ಎಸ್.ಮೋಹನ್ ಕುಮಾರ್, ಉಪಾಧ್ಯಕ್ಷ ಎಸ್.ಜೆ.ಜಯರಾಂ, ಖಜಾಂಚಿ ಪುಷ್ಪಾ ಸೇರಿದಂತೆ ಇತರರಿದ್ದರು.