ಹಿರಿಯೂರು ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಪಿಎಸ್‌ಐ ಮೇಘನಾ ಉದ್ಘಾಟನೆ ಮಾಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಮಹಿಳೆಯರು ಆತ್ಮ ಸ್ಥೈರ್ಯದಿಂದ ತಮ್ಮ ವೃತ್ತಿಯಲ್ಲಿ ಸಾಗುತ್ತಾ ಹೋದರೆ ಯಶಸ್ಸು ಸಾಧ್ಯ ಎಂದು ಇಂಟಲಿಜೆನ್ಸ್ ಪಿಎಸ್ಐ ಟಿ.ಎನ್.ಮೇಘಾ ಹೇಳಿದರು.

ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಐಕ್ಯೂಎಸಿ ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ರೆಡ್‍ಕ್ರಾಸ್ ಸಂಯುಕ್ತಾಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಪ್ರಾಚೀನ ಕಾಲದಿಂದ ಒಂದಲ್ಲ ಒಂದು ಕಾರಣಕ್ಕೆ ಶೋಷಣೆ, ದಬ್ಬಾಳಿಕೆ, ದೌರ್ಜನ್ಯಕ್ಕೆ ಒಳಗಾಗುತ್ತ ಬಂದಿದ್ದಾರೆ. ಆದರೆ ಕೆಲವು ದಿಟ್ಟ ಮಹಿಳೆಯರು ಎಲ್ಲಾ ದೌರ್ಜನ್ಯಗಳನ್ನು ಬದಿಗೊತ್ತಿ ಸಾಧನೆಯ ಹಾದಿಯಲ್ಲಿ ಸಾಗಿ ಬಂದು ಇಂದು ನಮಗೆಲ್ಲಾ ಆದರ್ಶವಾಗಿದ್ದಾರೆ. ವಿದ್ಯಾರ್ಥಿಗಳು ಗುರುಗಳಿಗೆ, ಪೋಷಕರಿಗೆ, ವಯೋವೃದ್ಧರಿಗೆ ಗೌರವ ಕೊಡುವುದನ್ನು ಕಲಿಯಬೇಕು. ವಿದ್ಯೆಗಿಂತ ಮಿಗಿಲಾದದ್ದು ಬೇರೊಂದಿಲ್ಲ. ಹಾಗಾಗಿ ವಿದ್ಯೆಯತ್ತ ಎಲ್ಲರೂ ಗಮನಹರಿಸಬೇಕು ಎಂದರು.

ಪ್ರಾಂಶುಪಾಲ ಡಾ.ಡಿ.ಧರಣೇಂದ್ರಯ್ಯ ಮಾತನಾಡಿ, ಸದರಿ ಕಾಲೇಜಿನ ವಿದ್ಯಾರ್ಥಿಗಳಾದ ಮೇಘನಾ ಪೊಲೀಸ್ ಸಬ್‍ ಇನ್ಸ್‌ಪೆಕ್ಟರ್, ಶಬೀನಾ ಬಾನು ತಾಲೂಕು ಖಜಾನೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿರುವುದು ಹೆಮ್ಮೆಯ ವಿಷಯ. ಇಂತಹ ದಿನಾಚರಣೆಗಳ ಫಲವಾಗಿ ಹೆಣ್ಣುಮಕ್ಕಳು ತಮ್ಮ ಹಕ್ಕುಗಳು, ಸ್ವಾತಂತ್ರ್ಯ, ಸಮಾನತೆ ಪಡೆಯುವುದರ ಮೂಲಕ ಸಬಲೀಕರಣಗೊಂಡಿರುವುದು ಸಂತೋಷದ ಸಂಗತಿ. ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಪೂಜನೀಯ ಸ್ಥಾನಮಾನ ಇದೆ ಎಂದರು.

ಪ್ರಾಸ್ತಾವಿಕವಾಗಿ ಪ್ರೊ.ಹೇಮಲತ ಬಿ.ಆರ್ ಮಾತನಾಡಿ, ಜ್ಯೋತಿ ಬಾಪುಲೆ, ಸಾವಿತ್ರಿಬಾಯಿ ಬಾಪುಲೆ, ಕಿತ್ತೂರು ರಾಣಿ ಚೆನ್ನಮ್ಮ, ಸರೋಜಿನಿ ನಾಯ್ಡು, ಪ್ರತಿಭಾ ಪಾಟೀಲ್, ಇಂದಿರಾಗಾಂಧಿ ಮುಂತಾದ ಸಾಧಕ ಮಹಿಳೆಯರ ಬದುಕು ಹಾಗೂ ಅವರು ಸಾಧಿಸಿದ ಸಾಧನೆಗಳನ್ನು ಅರಿತು ನಮ್ಮ ಬದುಕುಗಳನ್ನು ರೂಪಿಸಿಕೊಳ್ಳಬೇಕು ಎಂದರು.

ಡಾ.ದೇವಿಕಾ ಮಾತನಾಡಿ, ಮಹಿಳೆಯರು ಎಲ್ಲಾ ರಂಗಗಳಲ್ಲಿ ಸಾಧನೆ ಮಾಡುತ್ತಾ ಬರುತ್ತಿದ್ದಾರೆ. ನಾವು ಮಹಿಳೆಯರಿಗೆ ಗೌರವ ಕೊಡಬೇಕು. ಮಹಿಳೆಯರನ್ನು ಮಹಿಳೆಯರು ಗೌರವಿಸಬೇಕು. ವಿಶ್ವ ಮಹಿಳಾ ದಿನಾಚರಣೆಯನ್ನು ಕೇವಲ ಆಚರಣೆಗೆ ಅಷ್ಟೆ ಸೀಮಿತಗೊಳಿಸಬಾರದು. ಅದು ನಿತ್ಯ ಆಚರಣೆಯಲ್ಲಿರಬೇಕು ಎಂದರು.

ಡಾ. ಆರ್.ಗಂಗಾಧರ್ ಮಾತನಾಡಿ, ಎಲ್ಲರೂ ತಮ್ಮ ತಾಯಿ, ತಂಗಿ, ಅಕ್ಕ, ಮಗಳು, ಪತ್ನಿ ಇವರನ್ನು ಸಮಾನವಾಗಿ ನೋಡಬೇಕು. ಯಾರನ್ನೂ ಮೇಲಾಗಿ, ಕೀಳಾಗಿ ನೋಡಬಾರದು. ಅತ್ಯಾಚಾರ, ಶೋಷಣೆ, ದೌರ್ಜನ್ಯಗಳು ನಿಲ್ಲಬೇಕು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದರು.

ಈ ವೇಳೆ ಬಸವರಾಜ ಟಿ.ಬೆಳಗಟ್ಟ, ಅಧೀಕ್ಷಕ ನರಸಿಂಹಮೂರ್ತಿ ಪಿ.ಎನ್.ಶಬೀನಾ ಬಾನು ಸೇರಿದಂತೆ ಬೋಧಕ ಮತ್ತು ಬೋಧಕೇತರ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.