ಸಾಂಪ್ರದಾಯಿಕ ಉಡುಗೆಯನ್ನುಟ್ಟು ಮಾರ್ಜಾಲ ಹೆಜ್ಜೆ ಹಾಕಿದ ಮಹಿಳೆಯರು

| Published : Aug 26 2024, 01:37 AM IST

ಸಾರಾಂಶ

ಮತ್ತೊಂದು ವಿಶೇಷ ಎಂದರೆ ಮಂಗಳಮುಖಿಯರು ಸಹ ಸಾಂಪ್ರದಾಯಿಕ ಶೈಲಿಯಲ್ಲಿ ಸೀರೆಯನ್ನುಟ್ಟು ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ಫ್ಯಾಷನ್ ಪ್ರಿಯರ ಮೆಚ್ಚುಗೆಗೆ ಪಾತ್ರರಾದರು.

ಬಳ್ಳಾರಿ: ಫ್ಯಾಷನ್ ಶೋ ಎಂದ ಕೂಡಲೇ ಆಧುನಿಕತೆ ಗುಂಗಿನಲ್ಲಿ ಸಾಂಪ್ರದಾಯಿಕ ಉಡುಗೆ-ತೊಡುಗೆಗಳಿಗೆ ಇತಿಶ್ರೀ ಹಾಡುವುದು ಎಂದೇ ಬಹುತೇಕರ ಅಭಿಪ್ರಾಯ. ಹೀಗಾಗಿಯೇ ಫ್ಯಾಷನ್ ಶೋಗಳ ಬಗ್ಗೆ ಅನೇಕ ಕಡೆಗಳಲ್ಲಿ ಅಪಸ್ವರ, ವಿರೋಧಗಳು ಎದುರಾಗುತ್ತವೆ.

ಆದರೆ, ಬಳ್ಳಾರಿಯ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶನಿವಾರ ರಾತ್ರಿ ಮಾತೃ ಮಹಿಳಾ ಮಂಡಳಿ ಹಮ್ಮಿಕೊಂಡಿದ್ದ "ಬಳ್ಳಾರಿ ಸ್ಟಾರ್ ದುತಿ ಫ್ಯಾಷನ್ ಶೋ " ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆಗಳ ವೈಶಿಷ್ಟ್ಯವನ್ನು ಸಾಕ್ಷೀಕರಿಸಿದಂತಿತ್ತು.

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ ಆಗಮಿಸಿದ್ದ ಮಹಿಳೆಯರು ಆಯಾ ರಾಜ್ಯಗಳ ವೈಶಿಷ್ಟ್ಯ ಬಿಂಬಿಸುವ ಸೀರೆಗಳನ್ನುಟ್ಟು ರ್ಯಾಂಪ್ ಮೇಲೆ ಮಾರ್ಜಾಲ (ಬೆಕ್ಕಿನ ನಡಿಗೆ) ಹೆಜ್ಜೆ ಹಾಕಿ ಗಮನ ಸೆಳೆದರು.

ಈ ಶೋನಲ್ಲಿ ಭಾಗವಹಿಸಲು ಯಾವುದೇ ವಯಸ್ಸಿನ ಮಿತಿ ಇರಲಿಲ್ಲ. ಹೀಗಾಗಿ 18ರಿಂದ ಸೇರಿದಂತೆ 65 ವರ್ಷದವರೆಗಿನ 40ಕ್ಕೂ ಹೆಚ್ಚು ಮಹಿಳೆಯರು ಬಣ್ಣಬಣ್ಣದ ಸೀರೆಗಳನ್ನುಟ್ಟು ಉತ್ಸಾಹದಿಂದ ಪಾಲ್ಗೊಂಡಿದ್ದರು. ಮತ್ತೊಂದು ವಿಶೇಷ ಎಂದರೆ ಮಂಗಳಮುಖಿಯರು ಸಹ ಸಾಂಪ್ರದಾಯಿಕ ಶೈಲಿಯಲ್ಲಿ ಸೀರೆಯನ್ನುಟ್ಟು ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ಫ್ಯಾಷನ್ ಪ್ರಿಯರ ಮೆಚ್ಚುಗೆಗೆ ಪಾತ್ರರಾದರು.

"ಫ್ಯಾಷನ್ ಶೋ ನಲ್ಲಿ ಭಾಗವಹಿಸಬೇಕು. ಮಾರ್ಜಾಲ ಹೆಜ್ಜೆ ಹಾಕಬೇಕು. ಜನ ಮೆಚ್ಚುಗೆಗೆ ಪಾತ್ರರಾಗಬೇಕು ಎಂಬ ಕನಸಿತ್ತು. ಆದರೆ, ಈವರೆಗೆ ಸಾಧ್ಯವಾಗಿರಲಿಲ್ಲ. ಇದೀಗ ನಮ್ಮ ಕನಸು ನನಸಾಗಿಸಿಕೊಂಡಿದ್ದೇವೆ " ಎಂದು ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದ ಮಹಿಳೆಯರು ಅಭಿಪ್ರಾಯ ಹಂಚಿಕೊಂಡರು.

ಶೋ ಶುರು ಮುನ್ನ ಪ್ರಾಸ್ತಾವಿಕ ಮಾತನಾಡಿದ ಮಾತೃ ಮಹಿಳಾ ಮಂಡಳಿಯ ಅಧ್ಯಕ್ಷೆ ಪುಷ್ಪಾ ಚಂದ್ರಶೇಖರ್, ಮಂಡಳಿಯಿಂದ ಅನೇಕ ಜನಸೇವಾ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬರಲಾಗಿದೆ. ಆಧುನಿಕತೆಯ ಭರಾಟೆಯಲ್ಲಿ ಸಂಪ್ರದಾಯ ನಾಶವಾಗಬಾರದು ಎಂಬ ಆಶಯದಿಂದ ದಕ್ಷಿಣ ಭಾರತದ ಸಾಂಪ್ರದಾಯಿಕ ಫ್ಯಾಷನ್ ಶೋ ಹಮ್ಮಿಕೊಳ್ಳಲಾಗಿದ್ದು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಮಹಿಳೆಯರು ಆಸಕ್ತಿಯಿಂದ ಭಾಗವಹಿಸಿದ್ದು ಹೆಚ್ಚು ಸಂತಸ ತಂದಿದೆ ಎಂದು ಹೇಳಿದರು.

ಜೆಟಿ ಫೌಂಡೇಶನ್‌ನ ಮುಖ್ಯಸ್ಥ ತಿಮ್ಮಪ್ಪ ಜೋಳದರಾಶಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಹೈದ್ರಾಬಾದ್‌ನ ಫ್ಯಾಷನ್ ಡಿಸೈನರ್ ದಿನೇಶ್ ಚರಿಪಲ್ಲಿ, ಶಾಂತಿ ಶಂಕರ್, ಫಾರಿದ್ ವಾಸಿನ್, ಲಕ್ಷ್ಮಿ ಪವನಕುಮಾರ್, ಅಜಿತ್ ನಾಯಕ್, ಏಕಲವ್ಯ ಟ್ರಸ್ಟ್ ಅಧ್ಯಕ್ಷ ಟಿ.ಚಂದ್ರಶೇಖರ್, ಮಾತೃ ಮಹಿಳಾ ಮಂಡಳಿಯ ಸದಸ್ಯರಾದ ಜ್ಯೋತಿ, ಮಮತಾ, ಸುನೀತ, ರೂಪಾ, ಶೃತಿ, ರೇಣುಕಾ ಉಪಸ್ಥಿತರಿದ್ದರು.

ಇದೇ ವೇಳೆ ತೆಲುಗು ಸಿನಿಮಾ ಕ್ಷೇತ್ರದ ಫ್ಯಾಷನ್ ಡಿಸೈನರ್ ಬಳ್ಳಾರಿಯ ಪೂಜಾ ಶೇಖರ್ ಅವರನ್ನು ಸನ್ಮಾನಿಸಲಾಯಿತು.

ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ರಾಯಚೂರು, ಬಳ್ಳಾರಿ, ಆಂಧ್ರಪ್ರದೇಶದ ವಿಜಯವಾಡ, ತೆಲಂಗಾಣದ ಕರೀಂನಗರ ಜಿಲ್ಲೆಗಳ ಹೆಚ್ಚು ಮಹಿಳೆಯರು ಫ್ಯಾಷನ್ ಶೋನಲ್ಲಿ ಪಾಲ್ಗೊಂಡಿದ್ದರು.

ಕೆ.ಜ್ಯೋತಿ (ಬಳ್ಳಾರಿ) ಪ್ರಥಮ ಬಹುಮಾನ, ದ್ವಿತೀಯ ಬಹುಮಾನ ರಮ್ಯಾ (ವಿಜಯವಾಡ) ಹಾಗೂ ಮೂರನೇ ಬಹುಮಾನ ಚಾಂದಿನಿ (ಬಳ್ಳಾರಿ) ಅವರಿಗೆ ನೀಡಲಾಯಿತು.

ಫರಿದಾ, ನವೀನಾ ಹಾಗೂ ಲಕ್ಷ್ಮಿ ತೀರ್ಪುಗಾರರಾಗಿದ್ದರು. ಕಾರ್ಯಕ್ರಮ ಆರಂಭ ಮುನ್ನ ಸುಜಾತಾ ನಾಟ್ಯ ಕಲಾ ಟ್ರಸ್ಟ್ ಸೇರಿದಂತೆ ವಿವಿಧ ಕಲಾ ತಂಡಗಳ ಚಿಣ್ಣರು ದೇಶಭಕ್ತಿಗೀತೆಗೆ ನೃತ್ಯ ಪ್ರದರ್ಶನ ನೀಡಿದರು.