ಬಂಟ್ವಾಳ: ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರ ಪರಿಹಾರ ಒದಗಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.ಇತ್ತೀಚೆಗೆ ದ.ಕ.ಜಿಲ್ಲಾ ಭೇಟಿ ವೇಳೆ ಅವರು ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅವರು ಆಸ್ಪತ್ರೆಯ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಹೆಚ್.ಆರ್. ಮಾತನಾಡಿ, ಆಸ್ಪತ್ರೆ ವ್ಯವಸ್ಥೆಯ ದೃಷ್ಟಿಯಲ್ಲಿ ಅತ್ಯುತ್ತಮವಾಗಿದ್ದರೂ ಕಳೆದ ಐದು ವರ್ಷಗಳಿಂದ ಸ್ತ್ರೀರೋಗ ತಜ್ಞರು ಇಲ್ಲದಿರುವುದರಿಂದ ಆಸ್ಪತ್ರೆಯಲ್ಲಿ ಬೆರಳೆಣಿಕೆಯಷ್ಟು ಮಾತ್ರ ಹೆರಿಗೆಗಳು ನಡೆಯುತ್ತಿವೆ ಎಂದು ಹೇಳಿದರು.

ಈ ಸಂದರ್ಭ ಉಪಸ್ಥಿತರಿದ್ದ ಹಲವರು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಆಯೋಗದ ಅಧ್ಯಕ್ಷೆಯ ಮುಂದಿಟ್ಟರು. ಎಲ್ಲವನ್ನೂ ಸಮಚಿತ್ತದಿಂದ ಆಲಿಸಿದ ನಾಗಲಕ್ಷ್ಮಿ ಚೌಧರಿ, ಆಸ್ಪತ್ರೆಗೆ ಬಂದ ರೋಗಿಗಳನ್ನು ಎಂದಿಗೂ ನಿರಾಸೆಗೊಳಿಸಬಾರದು ಎಂದು ವೈದ್ಯರಿಗೆ ಸೂಚಿಸಿದರು. ಇದೇ ವೇಳೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳೊಂದಿಗೆ ಆತ್ಮೀಯವಾಗಿ ಮಾತನಾಡಿ, ಚಿಕಿತ್ಸೆ ಹೇಗೆ ಸಿಗುತ್ತಿದೆ, ಯಾವುದೇ ಸಮಸ್ಯೆಗಳಿವೆಯೇ ಎಂದು ವಿಚಾರಿಸಿದರು.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪುಷ್ಪಲತಾ ಅವರಿಂದ ಆಸ್ಪತ್ರೆಯ ನಿರ್ವಹಣೆ ಕುರಿತ ಮಾಹಿತಿ ಪಡೆದ ಅವರು, ದಾದಿಯರ ಯೋಗಕ್ಷೇಮ ಹಾಗೂ ಡಿ-ಗ್ರೂಪ್ ನೌಕರರಿಗೆ ಸಂಬಂಧಿಸಿದ ವೇತನ ಸಿಗುತ್ತಿದೆಯೇ ಎಂದು ವಿಚಾರಿಸಿದರು. ಆಸ್ಪತ್ರೆಯ ಸ್ವಚ್ಛತೆ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


ಸಿಬ್ಬಂದಿ ಬೇಜವಾಬ್ದಾರಿ ಕುರಿತು ತರಾಟೆ: ಈ ವೇಳೆ ಸಮದ್ ಕೈಕಂಬ ಎಂಬವರು, ಆಸ್ಪತ್ರೆಯ ವೈದ್ಯರು ಬರೆದುಕೊಟ್ಟ ಔಷಧಿಗಳನ್ನು ಹೊರಗಿನ ಮೆಡಿಕಲ್ ಅಂಗಡಿಯಿಂದ ತೆಗೆದುಕೊಳ್ಳಲು ಹೇಳುತ್ತಾರೆ ಎಂದು ದೂರಿದರು. ಇದನ್ನು ಜಿಲ್ಲಾ ಆರೋಗ್ಯಾಧಿಕಾರಿ ನಿರಾಕರಿಸಿದರು. ಆದರೆ ಸಮದ್ ಅವರು, ರೋಗಿಯೊಬ್ಬರಿಗೆ ಔಷಧಿ ವಿತರಕರು ಹೊರಗಿನ ಮೆಡಿಕಲ್ ಅಂಗಡಿಯಿಂದ ಖರೀದಿಸಲು ಸೂಚಿಸಿದ್ದ ಔಷಧಿ ವಿವರವನ್ನು ದಾಖಲೆ ಸಹಿತ ಮಹಿಳಾ ಆಯೋಗದ ಅಧ್ಯಕ್ಷರಿಗೆ ನೀಡಿದರು. ರೋಗಿಯ ಸಂಬಂಧಿಕರು ಇದನ್ನು ದೃಢಪಡಿಸಿದರು.ಇದನ್ನು ಪರಿಶೀಲಿಸಿದ ಅಧ್ಯಕ್ಷರು ನೇರವಾಗಿ ಔಷಧಿ ವಿತರಣಾ ಕೌಂಟರ್‌ಗೆ ತೆರಳಿ ಔಷಧಿ ಲಭ್ಯವಿದೆಯೇ ಎಂದು ಪ್ರಶ್ನಿಸಿದಾಗ ಸಿಬ್ಬಂದಿ ಔಷಧಿ ಒದಗಿಸಿದರು. ಈ ವೇಳೆ ಜನಸಾಮಾನ್ಯರಿಗೆ ಇಲ್ಲ ಎಂದು ಹೇಳುವುದೇಕೆ ಎಂದು ಪ್ರಶ್ನಿಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಿಬ್ಬಂದಿ, ಇಂಟರ್‌ಶಿಪ್‌ಗೆ ಬಂದವರು ಈ ರೀತಿ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯಬಾರದು ಎಂದು ಎಚ್ಚರಿಕೆ ನೀಡಿದ ಅವರು, ಹೆಚ್ಚಿನ ನಿಗಾವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಹೆಚ್.ಆರ್. ಅವರಿಗೆ ಸೂಚಿಸಿದರು.

ಆಸ್ಪತ್ರೆ ವ್ಯವಸ್ಥೆಗೆ ಮೆಚ್ಚುಗೆ: ಆಸ್ಪತ್ರೆಯ ಆಡಳಿತ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ರಾಜ್ಯ ಮಟ್ಟದಲ್ಲಿ ಕೆಲಕಾಲ ಔಷಧಿ ಕೊರತೆ ಇದ್ದರೂ ಈಗ ಹಂತಹಂತವಾಗಿ ನಿವಾರಣೆಯಾಗುತ್ತಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ವ್ಯವಸ್ಥೆ ಒದಗಿಸಿದರೆ ಬಡಜನರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದರು.

ಎಜೆ ಮೆಡಿಕಲ್ ಕಾಲೇಜು ಜೊತೆ ಒಡಂಬಡಿಕೆ: ಆಸ್ಪತ್ರೆಯನ್ನು ಪಿಪಿಪಿ ಮಾದರಿಯಲ್ಲಿ ಎಜೆ ಮೆಡಿಕಲ್ ಕಾಲೇಜು ಜೊತೆ ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ಒಡಂಬಡಿಕೆ ಮಾಡಿಕೊಂಡು ಎಲ್ಲ ಸೇವೆಗಳು ದೊರೆಯುವಂತೆ ಮಾಡುವ ಯೋಜನೆ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಹೆಚ್.ಆರ್. ತಿಳಿಸಿದ್ದಾರೆ. ಸರ್ಕಾರದಿಂದ ಅನುಮೋದನೆ ಸಿಗಲು ಬಾಕಿ ಇದ್ದು, ಶೀಘ್ರದಲ್ಲೇ ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಎಂದು ಅವರು ಮಾಧ್ಯಮಗಳಿಗೆ ಹೇಳಿದರು.

ಆರೋಗ್ಯ ರಕ್ಷಾ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ, ಲಾವಣ್ಯ ಬಲ್ಲಾಳ್, ಐಡಾ ಸುರೇಶ್, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಪುಷ್ಪಲತಾ, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ಮತ್ತಿತರರು ಇದ್ದರು.