ಬಳ್ಳಾರಿ: ನಗರದ ಹೊರವಲಯದ ಬಿಸಿಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೀವವಿಮಾ ನಿಗಮ ನೌಕರರ ಸಂಘದಿಂದ (ಎಲ್‌ಐಸಿ ಶಾಖೆ-2) ಭಾನುವಾರ ಅಂತರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಘದ ಕಾರ್ಯದರ್ಶಿ ಡಿ.ವಿ. ಸೂರ್ಯನಾರಾಯಣ ಮಹಿಳಾ ದಿನಾಚರಣೆಯ ಮಹತ್ವ ಕುರಿತು ವಿವರಿಸಿದರು. ವಿಶ್ವದಾದ್ಯಂತ ಮಹಿಳೆಯರ ಸಾಧನೆಗಳನ್ನು ಗೌರವಿಸುವುದು ಹಾಗೂ ಅವರ ಹಕ್ಕುಗಳನ್ನು ಕಾಪಾಡುವುದರ ಜೊತೆಗೆ ಸಮಾನತೆಯ ಜಾಗೃತಿ ಮೂಡಿಸುವುದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಮಹಿಳಾ ಸಬಲೀಕರಣದ ಪ್ರೇರಣೆಯ ಕಾರ್ಯಗಳು ನಿರಂತರವಾಗಿ ನಡೆಯಬೇಕಾಗಿದೆ ಎಂದು ಹೇಳಿದರು.

ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಅಖಿಲ ಭಾರತ ವಿಮಾ ನೌಕರರ ಸಂಘ (ಎಐಐಇಎ) ದುಡಿವ ಜನರ ಕಾಳಜಿ ಹೊತ್ತು ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಆಶಯ ಹೊಂದಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಜೀವನದ ಗುರಿಗಳನ್ನು ಸಾಧಿಸಬೇಕಾಗಿದೆ ಎಂದರು. ಪ್ರಾಸ್ತಾವಿಕ ಮಾತನಾಡಿದ ಶಾಲೆಯ ಮುಖ್ಯಗುರು ಸಿರಾಜ್ ಪಾಷಾ ಸಂಘಟನೆಯ ಕಾಳಜಿಯ ಕಾರ್ಯವನ್ನು ಶ್ಲಾಘಿಸಿದರು. ಜೀವವಿಮಾ ನಿಗಮದ ಸಹಾಯಕ ವ್ಯವಸ್ಥಾಪಕ ಐ.ಕೆ.ಗೋಪಾಲ್ ಅವರು ಭಾರತೀಯ ಜೀವವಿಮಾ ನಿಗಮದ ಕಾಳಜಿಯ ಕಾರ್ಯಗಳು ಹಾಗೂ ವಿಮಾ ಕ್ಷೇತ್ರದಲ್ಲಾಗಿರುವ ಮಹತ್ವದ ಮೈಲುಗಲ್ಲು ಕುರಿತು ವಿವರಿಸಿದರು.

ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಶಾಲೆಗೆ 32 ಇಂಚಿನ ಸ್ಯಾಮ್ ಸಂಗ್ ಕಂಪನಿಯ ಟಿವಿಯನ್ನು ನೀಡಲಾಗುತ್ತಿದ್ದು, ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಪಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು. ವಿಮಾ ನೌಕರರ ಸಂಘದ ಕುಸುಮಾ ಮಾತನಾಡಿದರು. ಶಾಲೆಗೆ ಜೀವಿವಿಮಾ ನಿಗಮ ನೌಕರರ ಸಂಘದಿಂದ ಟಿವಿ ವಿತರಿಸಲಾಯಿತು. ಶಾಲೆಯಿಂದ ಜೀವವಿಮಾ ನಿಗಮದ ಮಹಿಳಾ ಸಿಬ್ಬಂದಿ ಸನ್ಮಾನಿಸಲಾಯಿತು. ವಿಮಾ ನೌಕರರ ಸಂಘದ ಅಧ್ಯಕ್ಷ ಆರ್.ದತ್ತಾತ್ರೇಯ, ಖಜಾಂಚಿ ವಿಘ್ನೇಶ್, ಸೈಯದ್, ನೀಲುಫಾ ಮತ್ತಿತರರಿದ್ದರು.