ಮಹಿಳೆಯರು, ವಿದ್ಯಾರ್ಥಿನಿಯರಿಗಾಗಿ ಆರ್ಥಿಕ ಸಾಕ್ಷರತಾ ಮಾರ್ಗದರ್ಶಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕುಮಟಾ

ಆರ್ಥಿಕ ಸಾಕ್ಷರತೆಯಿಂದ ಮಾತ್ರ ಮಹಿಳೆಯರ ಅಭಿವೃದ್ಧಿ ಸಾಧ್ಯ. ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆಗೈಯ್ಯುತ್ತಿದ್ದಾಳೆ ಎಂದು ಶಿರಸಿಯ ಸ್ಕೊಡ್‌ವೇಸ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಮಾರುತಿ ನಾಯ್ಕ ಹೇಳಿದರು.

ಇಲ್ಲಿನ ಡಾ. ಎ.ವಿ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಾಲೇಜಿನ ಸ್ಫೂರ್ಥಿ ವುಮೆನ್ಸ್‌ ಸೆಲ್ ಹಾಗೂ ಶಿರಸಿಯ ಸ್ಕೊಡವೇಸ್ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗಾಗಿ ಆರ್ಥಿಕ ಸಾಕ್ಷರತಾ ಮಾರ್ಗದರ್ಶಿ ಕಾರ್ಯಕ್ರಮದಲ್ಲಿ ಉಪನ್ಯಾಸಕ ನೀಡಿದರು.

ವಿದ್ಯಾರ್ಥಿಗಳು ಬದುಕಿನ ಆರ್ಥಿಕ ನಿರ್ವಹಣೆ ಬಗ್ಗೆ ಗಂಭೀರವಾಗಿ ಆಲೋಚಿಸುವ ಅಗತ್ಯವಿದ್ದು, ವಿದ್ಯಾರ್ಥಿ ದೆಸೆಯಿಂದಲೇ ತಮ್ಮ ತಮ್ಮ ಮನೆಯ ಖರ್ಚು ವೆಚ್ಚ ಹಾಗೂ ಆಯವ್ಯಯದ ಕುರಿತು ಅರಿತುಕೊಳ್ಳಬೇಕು. ಚಿಕ್ಕ ಹಾಗೂ ಚೊಕ್ಕ ಉಳಿತಾಯ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವುದರ ಮೂಲಕ ಆರ್ಥಿಕವಾಗಿ ಸಾಕ್ಷರರಾಗಬೇಕು ಎಂದರು.


ಇಂದಿನ ವೇಗದ ಯುಗದಲ್ಲಿ ಆರ್ಥಿಕ ಕ್ಷೇತ್ರ ಹಲವಾರು ಬದಲಾವಣೆಗೆ ಒಳಗಾಗಿದ್ದು ಪ್ರತಿನಿತ್ಯವೂ ವಿವಿಧ ಆಯಾಮಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ನಮ್ಮ ಆರ್ಥಿಕ ಕ್ಷೇತ್ರದ ಹೊಸ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಬೇಕು ಹಾಗೂ ವಿವಿಧ ಉಳಿತಾಯ ಯೋಜನೆಗಳ ಕುರಿತು ಅಭ್ಯಸಿಸುತ್ತ ಹೊಸ ಜಗತ್ತಿಗೆ ತೆರೆದುಕೊಳ್ಳಬೇಕು ಎಂದರು.

ಪ್ರಾಚಾರ್ಯ ಡಾ. ಅರವಿಂದ ನಾಯಕ ಮಾತನಾಡಿ, ನಮ್ಮ ವಿದ್ಯಾರ್ಥಿಗಳು ಪಠ್ಯದ ಜತೆಗೆ ಅಂತರ್ಜಾಲದ ಮೂಲಕ ಜಾಗತಿಕ ಆರ್ಥಿಕ ವಿದ್ಯಮಾನಗಳನ್ನು ಅರಿತುಕೊಳ್ಳುತ್ತ ತಮ್ಮ ಗುರಿಯನ್ನು ತಲುಪಲು ಪ್ರಯತ್ನಿಸುತ್ತಿರಬೇಕು. ನಮ್ಮ ಕಾಲೇಜಿನಲ್ಲಿ ಕಾಲಕಾಲಕ್ಕೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿಗೊಳಿಸುವುದರ ಜತೆಗೆ ಅವರ ಸರ್ವತೋಮುಖ ಬೆಳವಣಿಗೆ ಶ್ರಮಿಸುತ್ತಾ ಬಂದಿದ್ದೇವೆ ಎಂದರು. ಸ್ಕೊಡವೇಸ್ ಸಂಸ್ಥೆಯ ಸಂಯೋಜಕ ಶರತ ನಾಯ್ಕ, ಲೇಡೀಸ್ ಸೆಲ್ ಸಂಯೋಜಕಿಯರಾದ ಪ್ರೊ. ಸುಷ್ಮಾ ನಾಯ್ಕ ಹಾಗೂ ಪ್ರೊ. ಸುಮಾ ವೇದಿಕೆಯಲ್ಲಿದ್ದರು.