ಸಾರಾಂಶ
ಮಹಿಳೆಯರಿಗೆ ಉನ್ನತ ಶಿಕ್ಷಣ ಉಚಿತ, ಉನ್ನತ ಶಿಕ್ಷಣದಲ್ಲಿ ಚಿನ್ನದ ಪದಕ ಪಡೆದವರಿಗೆ ನೇರ ನೇಮಕಾತಿ ಮೂಲಕ ಸರ್ಕಾರಿ ಹುದ್ದೆ ನೀಡುವುದು, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ತಾಂತ್ರಿಕ-ವೈದ್ಯಕೀಯ ಶಿಕ್ಷಣ ಆರಂಭಿಸುವುದು, ರಾಜ್ಯದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ಭರ್ತಿ ಹೀಗೆ ನಾಲ್ಕು ಮಹತ್ವದ ನಿರ್ಣಯಗಳನ್ನು ಸ್ವೀಕರಿಸಲಾಯಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ಮಹಿಳೆಯರಿಗೆ ಉನ್ನತ ಶಿಕ್ಷಣ ಉಚಿತ ನೀಡುವುದು ಸೇರಿದಂತೆ ವಿವಿಧ ಮಹಿಳೆಯ ಬೇಡಿಕೆ ಈಡೇರಿಕಗೆ ಗುಮ್ಮಟ ನಗರಿಯಲ್ಲಿ ನಡೆದ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಬಲವಾದ ಕೂಗು ಪ್ರತಿಧ್ವನಿಸಿತು. ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಲೇಖಕಿ ಭಾರತಿ ಪಾಟೀಲ ಸರ್ವಾಧ್ಯಕ್ಷತೆಯಲ್ಲಿ ನಡೆದ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಬಹಿರಂಗ ಅಧಿವೇಶನದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಪ್ರಮುಖವಾಗಿ ನಾಲ್ಕು ನಿರ್ಣಯಗಳನ್ನು ಮಂಡಿಸಲಾಯಿತು.ಮಹಿಳೆಯರಿಗೆ ಉನ್ನತ ಶಿಕ್ಷಣ ಉಚಿತ, ಉನ್ನತ ಶಿಕ್ಷಣದಲ್ಲಿ ಚಿನ್ನದ ಪದಕ ಪಡೆದವರಿಗೆ ನೇರ ನೇಮಕಾತಿ ಮೂಲಕ ಸರ್ಕಾರಿ ಹುದ್ದೆ ನೀಡುವುದು, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ತಾಂತ್ರಿಕ-ವೈದ್ಯಕೀಯ ಶಿಕ್ಷಣ ಆರಂಭಿಸುವುದು, ರಾಜ್ಯದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ಭರ್ತಿ ಹೀಗೆ ನಾಲ್ಕು ಮಹತ್ವದ ನಿರ್ಣಯಗಳನ್ನು ಸ್ವೀಕರಿಸಲಾಯಿತು. ಬಹಿರಂಗ ಅಧಿವೇಶನದಲ್ಲಿ ಪ್ರೊ.ಲತಾ ವಾಲೀಕಾರ ಅವರು ಈ ಹಿನ್ನೆಲೆಯಲ್ಲಿ ಸಮ್ಮೇಳನದ ನಿರ್ಣಯದ ಆದ್ಯವಾಗಿ ಈ ವಿಷಯವನ್ನೇ ಮಂಡಿಸಲಾಯಿತು. ಈ ನಾಲ್ಕು ನಿರ್ಣಯಗಳಿಗೆ ಶಕುಂತಲಾ ರೇವಣಸಿದ್ದಪ್ಪ ಕೊಪ್ಪದ ಹಾಗು ಪ್ರಭಾವತಿ ಶಿವಶರಣ ಗುಂದಗಿ ಅನುಮೋದಿಸಿದರು.
ಮಹಿಳಾ ಸಾಹಿತ್ಯದ ಕುರಿತಾದ ಎರಡು ದಿನಗಳ ಸಮ್ಮೇಳನದಲ್ಲಿ ಅನೇಕ ಮಹಿಳಾ ಪರ ಚಿಂತನೆಗಳು ಮೊಳಗಿದವು, ಮಹಿಳಾ ಸಾಹಿತ್ಯದ ಬಗ್ಗೆ ಸುದೀರ್ಘ ಚರ್ಚೆ, ಜಾಗತೀಕರಣದಲ್ಲಿ ಮಹಿಳೆಯ ಸ್ಥಾನಮಾನ ಮೊದಲಾದ ಮಹತ್ವದ ವಿಷಯಗಳು ಚರ್ಚೆಯಾದವು. ಸಾನ್ನಿಧ್ಯ ಗುಣದಾಳ ಕಲ್ಯಾಣಮಠದ ಶ್ರೀ ವಿವೇಕಾನಂದ ಸ್ವಾಮೀಜಿ ವಹಿಸಿದ್ದರು. ಸೀಮಾ ಬಡಾನೂರ, ಗಿರಿಜಾ ಡೋಣುರ, ವಿಜಯಲಕ್ಷ್ಮೀ ಬಿರಾದಾರ, ಅನ್ನಪೂರ್ಣ ಬೆಳ್ಳೆನವರ, ರಂಜನಾ ಕೆಂಬಾವಿ ಶಿವಲೀಲಾ ಮಳಖೇಡ, ವಿಜಯಲಕ್ಷ್ಮಿ ಮಾನೆ, ಕಮಲಾ ಮುರಾಳ, ಸುಖದೇವಿ ಅಲಬಾಳಮಠ ಮುಂತಾದವರು ಇದ್ದರು.ಕೋಟ್..
ಮಹಿಳೆಯರ ಅಂತರಂಗದಲ್ಲಿರುವ ಆಲೋಚನೆಗಳನ್ನು ಮುಕ್ತವಾಗಿ ಹೊರಹಾಕುವ ಕೆಲಸ ನಡೆಯಬೇಕಿದೆ. ಮಹಿಳೆ ಇಂದು ಎಲ್ಲ ರಂಗದಲ್ಲಿಯೂ ಮುನ್ನಡೆಯುತ್ತಿದ್ದಾಳೆ. ಅವರಿಗೆ ಪ್ರೋತ್ಸಾಹ ದೊರಕಬೇಕಿದೆ. ಈ ರೀತಿಯ ಸಮ್ಮೇಳನಗಳು ಮಹಿಳೆ ತನ್ನ ಬಗ್ಗೆ ಆಲೋಚನೆ ಮಾಡಲು ವೇದಿಕೆ ಒದಗಿಸುವ ಕಾರ್ಯ ಮಾಡುತ್ತವೆ.ವಿದ್ಯಾವತಿ ಅಂಕಲಗಿ. ನ್ಯಾಯವಾದಿ