ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಕೆ.ಆರ್.ಪುರದಲ್ಲಿ ಕಾಮಗಾರಿ ಪರಿಶೀಲನೆ ವೇಳೆ ಅಭಿವೃದ್ಧಿ ವಿಚಾರವಾಗಿ ಶಾಸಕ ಬೈರತಿ ಬಸವರಾಜ್‌ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸ್ವಾಮಿ ನಡುವೆ ತೀವ್ರ ವಾಗ್ವಾದ, ಕೆಟ್ಟ ಪದಗಳಿಂದ ಪರಸ್ಪರ ನಿಂದನೆಯ ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಕೆ.ಆರ್.ಪುರದಲ್ಲಿ ಕಾಮಗಾರಿ ಪರಿಶೀಲನೆ ವೇಳೆ ಅಭಿವೃದ್ಧಿ ವಿಚಾರವಾಗಿ ಶಾಸಕ ಬೈರತಿ ಬಸವರಾಜ್‌ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸ್ವಾಮಿ ನಡುವೆ ತೀವ್ರ ವಾಗ್ವಾದ, ಕೆಟ್ಟ ಪದಗಳಿಂದ ಪರಸ್ಪರ ನಿಂದನೆಯ ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

ಸ್ಥಳ ಪರಿಶೀಲನೆ ವೇಳೆ ಕೆ.ಆರ್.ಪುರ ಕ್ಷೇತ್ರದಲ್ಲಿ ಸರ್ಕಾರದಿಂದ ಅಭಿವೃದ್ಧಿ ಕೆಲಸಗಳಿಗೆ ಆಗುತ್ತಿಲ್ಲ ಎಂದು ಶಾಸಕ ಬೈರತಿ ಬಸವರಾಜ್‌ ಬೆಂಬಲಿಗರೊಬ್ಬರು ಪದೇ ಪದೇ ಸಚಿವ ಕೃಷ್ಣ ಬೈರೇಗೌಡ ಬಳಿ ಪ್ರಸ್ತಾಪಿಸಿದ್ದಾರೆ.

ಆಗ ಸಚಿವರು ಏರಿದ ಧ್ವನಿಯಲ್ಲಿ ‘ನಾನು ಅದನ್ನು ನೋಡಲೆಂದೇ ಬಂದಿರುವುದು. ಇಲ್ಲಿ ರಾಜಕೀಯ ಮಾಡಬೇಡ ನಡಿಯಯ್ಯ’ ಎಂದು ಸಚಿವರು ಉತ್ತರಿಸಿದ್ದಾರೆ. ಆಗ, ರಾಜಕೀಯವಲ್ಲ ಸರ್, ನಿಮಗಲ್ಲದೇ ಇನ್ಯಾರಿಗೆ ಹೇಳಬೇಕು ಎಂದು ಶಾಸಕರ ಬೆಂಬಲಿಗ ಹೇಳಿದ್ದಾನೆ.

ಈ ಮಧ್ಯೆ ಶಾಸಕರ ಬೆಂಬಲಿಗನ ಕಡೆ ನುಗ್ಗಿದ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸ್ವಾಮಿ, ಏನೋ ನಿಂದು? ನಮ್ಮ ಮಿನಿಸ್ಟರ್ ಮೇಲೆ ರೋಪ್ ಹಾಕಲು ಬರುತ್ತೀಯಾ? ಕೆಲಸಗಳ ಪರಿಶೀಲನೆ ಮಾಡಲೆಂದೆ ಅವರು ಇಲ್ಲಿಗೆ ಬಂದಿದ್ದಾರೆ. ಸಾಕು ನಡಿ ಇಲ್ಲಿಂದ ಎಂದು ಏರಿದ ಧ್ವನಿಯಲ್ಲಿ ಮಾತನಾಡಿದ್ದಾರೆ.

ಆಗ ತಮ್ಮ ಬೆಂಬಲಿಗನ ಪರವಾಗಿ ಬಂದ ಶಾಸಕ ಬೈರತಿ ಬಸವರಾಜ್‌, ಸರ್ಕಾರದ ಸಚಿವರು ಬಂದಾಗ ಅವರನ್ನು ಕೇಳದೇ ಇನ್ಯಾರನ್ನು ಕೇಳಬೇಕು? ಅದಕ್ಕೆ ರೋಪ್ ಹಾಕಿ ಹೊಡೆಯಲು ಹೋಗುತ್ತಿಯಾ, ನಿನ್ನನ್ನು ಎಂಎಲ್‌ಸಿ ಮಾಡಿದ್ದು ನಾನು ತಿಳಿದುಕೊ ಎಂದಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿದ ನಾರಾಯಣಸ್ವಾಮಿ, ನನ್ನನ್ನು ಎಂಎಲ್‌ಸಿ ಮಾಡಿದ್ದು ನೀನಲ್ಲ. ನಿನ್ನನ್ನು ಎಂಎಲ್‌ಎ ಮಾಡಿದ್ದು ನಾವು ಈ ಕ್ಷೇತ್ರದ ಜನ. ಇಷ್ಟು ವರ್ಷಗಳಿಂದ ಶಾಸಕನಾಗಿ ಏನು ಕೆಲಸ ಮಾಡಿದ್ದಿಯಾ ಎಂಬುದು ಎಲ್ಲರಿಗೂ ಗೊತ್ತಿದೆ. ಏನಾದರೂ ಜವಾಬ್ದಾರಿ ಇದೆಯಾ ನಿನಗೆ? ನಿನ್ನ ಎಲ್ಲಾ ಕತೆ ನನಗೆ ಗೊತ್ತಿದೆ ನಡಿಯಲೇ ಎಂದು ಏಕವಚನದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಆಗ ಶಾಸಕ ಬೈರತಿ ಬಸವರಾಜ, ನಮಗೇ ರೋಪ್ ಹಾಕುತ್ತಿಯಾ? ಹುಷಾರಾಗಿರು. ನಮ್ಮ ಹತ್ತಿರ ಇದೆಲ್ಲ ಇಟ್ಟುಕೊಳ್ಳಬೇಡ. ನೀನೇನು ದೊಡ್ಡ ಡಾನಾ? ಬಾರೋ ನೋಡೋಣಾ ತಾಕತ್ತಿದ್ದರೆ ಎಂದು ಹೇಳಿದ್ದಾರೆ. ಈ ವೇಳೆ ಎರಡೂ ಕಡೆಯಿಂದ ಕೆಟ್ಟ ಪದಗಳ ವಿನಿಮಯವಾಗಿದೆ. ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ. ಇದೇ ವೇಳೆ ಶಾಸಕರು, ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ನಡುವೆ ವಾಗ್ವಾದ ಕೆಲ ಕಾಲ ಮುಂದುವರೆಯಿತು.

-ಬಾಕ್ಸ್‌-

ಡಿಸೆಂಬರ್‌ನಲ್ಲಿ ಜಿಬಿಎ ಚುನಾವಣೆ

ಆಗಬೇಕು: ಸಚಿವ ಕೃಷ್ಣ ಬೈರೇಗೌಡ

ಜಿಬಿಎ ಚುನಾವಣೆ ಬಗ್ಗೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ಕೋರ್ಟ್ ಆದೇಶದಂತೆ ಡಿಸೆಂಬರ್‌ನಲ್ಲಿ ಜಿಬಿಎಗೆ ಚುನಾವಣೆ ಘೋಷಣೆ ಮಾಡಲೇಬೇಕಿದೆ. ರಾಜ್ಯ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ಸಿದ್ಧವಾಗಬೇಕಿದೆ. ಈ ಕುರಿತು ಆಯೋಗದಿಂದ ಅಧಿಕೃತ ಮಾಹಿತಿ ಪಡೆಯಬೇಕು. ಈ ಬಗ್ಗೆ ಸೂಚನೆ ನೀಡಿದ್ದೇವೆ. ಪಟ್ಟಿ ಸಿದ್ದಪಡಿಸಿದ ತಕ್ಷಣ ಚುನಾವಣೆಯಾಗಲಿದೆ ಎಂದರು.