ಇದ್ದೂರಲ್ಲೆ ನರೇಗಾದಡಿ ಕೆಲಸ ಮಾಡಿ

| Published : Apr 05 2025, 12:49 AM IST

ಸಾರಾಂಶ

ನರೇಗಾ ಕೂಲಿಕಾರರಿಗೆ ಬೇಸಿಗೆ ಇರುವ ಕಾರಣ ಸತತ ಮೂರು ತಿಂಗಳು ಗ್ರಾಪಂ ವತಿಯಿಂದ ಕೆಲಸ ನೀಡಲಾಗುತ್ತಿದೆ. ಕೂಲಿಕಾರರು ವಲಸೆ ಹೋಗದೆ ಇದ್ದೂರಲ್ಲೇ ಕೆಲಸ ಮಾಡಬೇಕು.

ಕನಕಗಿರಿ:

ಬೇಸಿಗೆಯಲ್ಲಿ ಕೂಲಿಕಾರರು ಗುಳೆ ಹೋಗದೆ ಇದ್ದೂರಲ್ಲೇ ನರೇಗಾ ಯೋಜನೆಯಡಿ ಕೆಲಸ ಮಾಡಿ ಯೋಜನೆಯ ಸದುಪಯೋಗ ಪಡೆಯಬೇಕೆಂದು ತಾಪಂ ಸಹಾಯಕ ನಿರ್ದೇಶಕಿ ಶರಪುನ್ನಿಸಾ ಬೇಗಂ ಹೇಳಿದರು.

ತಾಲೂಕಿನ ಹಿರೇಖೇಡ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಕೂಲಿಕಾರರಿಗೆ ಕೆರೆ ಹೂಳೆತ್ತುವ ಕೆಲಸ ನೀಡಲಾಗಿದ್ದು, ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು‌. ನರೇಗಾ ಕೂಲಿಕಾರರಿಗೆ ಬೇಸಿಗೆ ಇರುವ ಕಾರಣ ಸತತ ಮೂರು ತಿಂಗಳು ಗ್ರಾಪಂ ವತಿಯಿಂದ ಕೆಲಸ ನೀಡಲಾಗುತ್ತಿದೆ. ಕೂಲಿಕಾರರು ವಲಸೆ ಹೋಗದೆ ಇದ್ದೂರಲ್ಲೇ ಕೆಲಸ ಮಾಡಬೇಕೆಂದು ಕರೆ ನೀಡಿದರು.

ನಿತ್ಯ ತಮಗೆ ನೀಡಿರುವ ಕೆಲಸದ ಅಳತೆಗನುಸಾರವಾಗಿ ಕೆಲಸ ಮಾಡಿದರೇ ಪೂರ್ತಿ ಕೂಲಿ ಹಣ ಸಿಗಲಿದೆ ಎಂದರಲ್ಲದೆ, ನರೇಗಾ ಸಹಾಯವಾಣಿ ಸಂಖ್ಯೆ, PMJJY, PMSBY ಯೋಜನೆಯ ಕುರಿತು ಮಾಹಿತಿ ನೀಡಿದರು.

ತಾಲೂಕು ಐಇಸಿ ಸಂಯೋಜಕ ಶಿವಕುಮಾರ ಮಾತನಾಡಿ, ಏ. 1ರಿಂದ ಪರಿಷ್ಕೃತ ನರೇಗಾ ಕೂಲಿ ಮೊತ್ತ ₹ 349ರಿಂದ ₹ 370ಕ್ಕೆ ಹೆಚ್ಚಳವಾಗಿದೆ. ಕಾಮಗಾರಿ ಸ್ಥಳದಲ್ಲಿ ಹಾಜರಿರುವ ಕೂಲಿಕಾರರಿಗೆ ಮಾತ್ರ NMMS ಹಾಜರಾತಿ ಹಾಕುವುದು ಸೇರಿದಂತೆ ಕೂಲಿಕಾರರು ಸಮುದಾಯ ಕಾಮಗಾರಿಯಲ್ಲದೇ, ವೈಯಕ್ತಿಕ ಕಾಮಗಾರಿಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ನಂತರ ತಾಂತ್ರಿಕ ಸಂಯೋಜಕ ಸಯ್ಯದ್‌ ತನ್ವೀರ್‌ ಮಾತನಾಡಿದರು. ಗ್ರಾಪಂ ಸದಸ್ಯರಾದ ಬಾರಿಮರದಪ್ಪ, ಭೀಮನಗೌಡ ಸೇರಿದಂತೆ ಪ್ರಮುಖರಾದ ಹುಲುಗಪ್ಪ ದೊಡ್ಡಮನಿ, ಬಾರಿಮರದಪ್ಪ ನಡುಲಮನಿ, ಶಾಮಣ್ಣ ಸಿರಿವಾರ, ಶಿವಕುಮಾರ ಬಡಿಗೇರ, ಭೀಮನಗೌಡ ಗುಡದೂರು ಸೇರಿದಂತೆ ಗ್ರಾಪಂ ಸಿಬ್ಬಂದಿ, ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದರು.