ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಧರ್ಮದ ತಳಹದಿ ಮೇಲೆ ಒಳಪಂಗಡಗಳನ್ನು ಸಂಘಟಿಸುವ ಕೆಲಸವಾಗಬೇಕು ಎಂದು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಸ್ಥಳೀಯ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ರಾಚೋಟಿವೀರ ಶಿವಾಚಾರ್ಯ ಮಂಗಳ ಭವನವನ್ನು ಭಾನುವಾರ ಲೋಕಾರ್ಪಣೆ ಮಾಡಿ ಆಶೀವರ್ಚನ ನೀಡಿದರು,
ವೀರಶೈವ ಧರ್ಮದ ಒಳಪಂಗಡಗಳು ಬೆಳೆಯಬೇಕು ಎನ್ನುವ ಅಪೇಕ್ಷೆ ತಪ್ಪಲ್ಲ. ಆದರೆ ಮೂಲ ಧರ್ಮಕ್ಕೆ ಕೊಡಲಿ ಪೆಟ್ಟು ಕೊಡುವ ಕೆಲಸವನ್ನು ಯಾರೂ ಮಾಡಬಾರದು. ಜನರಲ್ಲಿ ಅರಿವು, ಆಚಾರ ಇಲ್ಲದ ಕಾರಣ ಸಮಾಜ ಕವಲು ದಾರಿಯಲ್ಲಿ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಜಗದ್ಗುರು ರೇಣುಕಾಚಾರ್ಯರ ಹೇಳಿದ ತತ್ವ, ಸಿದ್ಧಾಂತಗಳು ಹಾಗೂ 12ನೇ ಶತಮಾನದ ಶರಣರು ಹೇಳಿದ ವಿಚಾರಧಾರೆಗಳು ಬೇರೆಯಲ್ಲ. ಆದರೆ ಸಮಾಜದಲ್ಲಿ ಬಸವಣ್ಣನ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದು ಅದನ್ನು ಎಲ್ಲರೂ ಅರಿಯಬೇಕು. ವೀರಶೈವ ಧರ್ಮಕ್ಕೆ ಯುಗ ಯುಗಗಳ ಚಾರಿತ್ರಿಕ ಇತಿಹಾಸವಿದೆ. ರೇಣುಕಾಚಾರ್ಯರು ಧರ್ಮಕ್ಕೆ ದಿಕ್ಸೂಚಿಯಾಗಿದ್ದರೆ, 12ನೇ ಕಾಲದ ಶರಣರು ಜನ ಸಮುದಾಯಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಯಾವುದೇ ಧರ್ಮವನ್ನು ನಾಶ ಮಾಡುತ್ತೇನೆ ಎಂದು ಹೋಗುವವರೆ ನಾಶವಾಗುತ್ತಾರೆ ಎಂದರು.
ಇಂದು ಜನರು ಜಾತಿಗೆ ಕೊಡುವಷ್ಟು ಪ್ರಾಮುಖ್ಯತೆ ಧರ್ಮಕ್ಕೆ ಕೊಡುತ್ತಿಲ್ಲ. ಮೂಲ ಧರ್ಮಕ್ಕೆ ಧಕ್ಕೆಯಾಗದಂತೆ ಜಾತಿ ಸಂಘಟಿಸುವ ಕೆಲಸವಾಗಬೇಕು. ನಾವು ಇಂದು ವಿಜ್ಞಾನ ಯುಗದಲ್ಲಿದ್ದೇವೆ. ವಿಜ್ಞಾನದಿಂದ ಜನರಿಗೆ ಒಳಿತಾಗಬೇಕೆ ಹೊರತು ಹಾನಿಯಾಗಬಾರದು. ವಿಜ್ಞಾನ, ಧರ್ಮದ ಸಹಯೋಗದಲ್ಲಿ ಕೆಲಸ ಮಾಡಿದರೆ ಜಗತ್ತಿಗೆ ಒಳ್ಳೆಯದಾಗಲಿದೆ. ದೇಶದಲ್ಲಿ ಹಲವಾರು ಧರ್ಮ, ಪರಂಪರೆಗಳು ಇದ್ದರೂ ಎಲ್ಲ ಧರ್ಮಗಳ ಆಶಯ ಮಾತ್ರ ಮನುಷ್ಯನಿಗೆ ಒಳ್ಳೆಯದಾಗಬೇಕು ಎನ್ನುವುದಾಗಿದೆ. ಹೀಗಾಗಿ ಮಕ್ಕಳಿಗೆ ಧರ್ಮ ಪಾಲನೆ ಮಾಡುವ ಸಂಸ್ಕಾರವನ್ನು ನೀಡಬೇಕು ಎಂದು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.ಸಚಿವ ಎನ್.ಎಸ್.ಬೋಸರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರ ಮೂಡಲು ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದು ಹೇಳಿದರು.
ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.ಬಿಚ್ಚಾಲಿಯ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಜಯಶಾಂತಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಬೂದಿಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇದಕ್ಕೂ ಮೊದಲು ಸೋಮವಾರಪೇಟೆ ಮಠದಿಂದ ಮಂಗಳ ಭವನದವರೆಗೆ ಜಗದ್ಗುರುಗಳ ಶೋಭಾ ಯಾತ್ರೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಡಾ.ಶಿವರಾಜ ಪಾಟೀಲ್, ಹಂಪನಗೌಡ ಬಾದರ್ಲಿ, ಮಾಜಿ ಶಾಸಕರಾದ ವೆಂಕಟರಾವ್ ನಾಡಗೌಡ, ಬಸನಗೌಡ ಬ್ಯಾಗವಾಟ, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ ಉಪಸ್ಥಿತರಿದ್ದರು.