ಕನ್ನಡ ಭಾಷೆಯ ಅಭಿವೃದ್ಧಿಗೆ ಶ್ರಮಿಸಿ

| Published : Dec 04 2024, 12:32 AM IST

ಸಾರಾಂಶ

ನಾಡಿನ ಹಿರಿಮೆ, ಕನ್ನಡ ಭಾಷೆ ಬಗ್ಗೆ ಗೌರವ ಅಭಿಮಾನವಿರಲಿ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ

ರೋಣ: ಕನ್ನಡ ಭಾಷೆಗೆ ತನ್ನದೆ ಆದ ಪರಂಪರೆಯಿದ್ದು, ಅತ್ಯಂತ ಸ್ವಾರಸ್ಯಕರ ಭಾಷೆಯಾಗಿದೆ. ಇದು ಅಭಿವೃದ್ಧಿ ಹೊಂದುವಲ್ಲಿ ಕನ್ನಡದ ಮನಸ್ಸುಗಳ ಶ್ರಮ ಮುಖ್ಯವಾಗಿದೆ ಎಂದು ಗದಗ ಡಯಟ್ ಉಪನ್ಯಾಸಕ ಕಾಶೀನಾಥ ಸಾಲಿಮಠ ಹೇಳಿದರು.

ತಾಲೂಕಿನ ಕುರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ರೋಣ ತಾಲೂಕು ಘಟಕ ವತಿಯಿಂದ ಜರುಗಿದ ಕರ್ನಾಟಕ ಸುವರ್ಣ ಸಂಭ್ರಮ ರಾಜ್ಯೋತ್ಸವದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡ ನಾಡು, ನುಡಿಯು ಮಕ್ಕಳಿಗೆ ಸ್ಫೂರ್ತಿದಾಯಕವಾಗಲಿ. ನಾಡಿನ ಹಿರಿಮೆ, ಕನ್ನಡ ಭಾಷೆ ಬಗ್ಗೆ ಗೌರವ ಅಭಿಮಾನವಿರಲಿ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದೊಂದು ಸುಂದರ ಸಾಮರಸ್ಯಪೂರ್ಣ ಭಾಷೆಯಾಗಿದೆ. ನಾಡಿಗೆ ತನ್ನದೆ ಆದ ಸಂಸ್ಕೃತಿ ಇದೆ. ವಿದ್ಯಾರ್ಥಿಗಳಿಗೆ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಅಭಿರುಚಿ, ಚಿಂತನಶೀಲ ಮನೋಭಾವ ಬೆಳೆಸಬೇಕು. ಕನ್ನಡ ಭಾಷೆಯ ಅಭಿವೃದ್ಧಿಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದು ಸಾಲಿಮಠ‌ ಹೇಳಿದರು.ಕನ್ನಡ ನುಡಿಯೇ ಚಂದ, ಕನ್ನಡ ಸಂಸ್ಕೃತಿಯ ಪರಂಪರೆಯೇ ಅಂದ. ಕನ್ನಡ ನುಡಿಯನ್ನು ಉಳಿಸುವ ಜವಾಬ್ದಾರಿ ದೊಡ್ಡದಿದೆ. ಅನ್ಯಭಾಷಿಕರ ಒತ್ತಡದ ನಡುವೆ ಕನ್ನಡತನ ಮೆರೆಸಬೇಕಾಗಿದೆ. ಮಾತೃಭಾಷೆಯನ್ನು ಪ್ರೀತಿಸಿ ಗೌರವಿಸುವುದನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕಾಗಿದೆ. ಅದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಹಿರಿಯ ಸಾಹಿತಿ ವಿ.ಕೆ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಸಾಪ ತಾಲೂಕು ಅಧ್ಯಕ್ಷ ರಮಾಕಾಂತ ಕಮತಗಿ ಅಧ್ಯಕ್ಷತೆ ವಹಿಸಿದ್ದರು. ವಿ.ಬಿ. ರಡ್ಡೇರ, ಎಸ್.ಬಿ. ಸುಗ್ಗಿ, ಗೀತಾಂಜಲಿ ಮಡಿವಾಳರ ಉಪಸ್ಥಿತರಿದ್ದರು. ಸಿ.ಎ. ಯಲ್ಲಪ್ಪಗೌಡ್ರ ಸ್ವಾಗತಿಸಿದರು. ಶಿಕ್ಷಕ ಬಿ.ಎಸ್. ಅವಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.