ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸೋಣ: ಬಂಗಾರು ಹನುಮಂತು

| Published : Oct 09 2025, 02:01 AM IST

ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸೋಣ: ಬಂಗಾರು ಹನುಮಂತು
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರೋಣ

ಸಂಡೂರು: ಪಕ್ಷದ ಕಾರ್ಯಕರ್ತರು ಪಕ್ಷದ ಆಧಾರ ಮತ್ತು ಶಕ್ತಿ. ಎಲ್ಲರೂ ಒಟ್ಟಾಗಿ ಕ್ಷೇತ್ರದಲ್ಲಿ ಬಿಜೆಪಿ ಬಲಪಡಿಸೋಣ. ಗ್ರಾಮಗಳಿಗೆ ತೆರಳಿ, ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಹಾಗೂ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದು ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಹೇಳಿದರು.

ಪಟ್ಟಣದಲ್ಲಿ ಬಿಜೆಪಿ ಸಂಡೂರು ಮಂಡಲದಿಂದ ಬುಧವಾರ ಹಮ್ಮಿಕೊಂಡಿದ್ದ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪಕ್ಷದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.

ನರೇಂದ್ರ ಮೋದಿ ಅವರನ್ನು ಟೀಕಿಸುವ ಸಚಿವ ಸಂತೋಷ್ ಲಾಡ್, ಸಂಸದ ಈ.ತುಕಾರಾಂ ಅವರಿಗೆ ಸಂಡೂರಿನಲ್ಲಿ ಒಂದು ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸಲು ಆಗಿಲ್ಲ. ಲಾಡ್, ತುಕಾರಾಂ ವಿರುದ್ಧ ಮಾತಾಡಲು ಹಲವು ವಿಷಯಗಳಿವೆ. ಸೂಕ್ತ ಸಮಯದಲ್ಲಿ ಉತ್ತರಿಸುವೆ. ಕಲಘಟಗಿ ಕ್ಷೇತ್ರದಲ್ಲಿ ಸಂತೋಷ್ ಲಾಡ್ ಅವರನ್ನು ಸೋಲಿಸಲು ಸದ್ಯದಲ್ಲೇ ಕಾರ್ಯ ಪ್ರವೃತ್ತನಾಗುವೆ ಎಂದು ತಿಳಿಸಿದರು.

ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಕುಡುತಿನಿ ಭಾಗದ ಸಂತ್ರಸ್ತ ರೈತರು ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹಮದ್ ಖಾನ್ ಅವರಿಗೆ ತಮ್ಮ ಅಹವಾಲು ಸಲ್ಲಿಸಲು ಹೋದಾಗ, ಮನವಿ ಸಲ್ಲಿಸಲು ಹೋದ ರೈತರು ಬಂಗಾರು ಹನುಮಂತು ಕಡೆಯವರು ಎಂದು ಪೊಲೀಸ್‌ವೊಬ್ಬರು ಹೇಳಿದ್ದಾರೆ. ಲಾಡ್, ತುಕಾರಾಂ ಅವರ ಮನಸ್ಸು ಗೆಲ್ಲಲು, ಬಿಜೆಪಿಯ ಅಮಾಯಕ ಜನರ ಮೇಲೆ ಸುಳ್ಳು ಕೇಸ್‌ಗಳನ್ನು ದಾಖಲಿಸುತ್ತಿದ್ದೀರಿ. ದಲಿತರನ್ನೇ ದಲಿತರ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದೀರಿ. ನೀವು ರಾಜಕೀಯ ಮಾಡುವುದಿದ್ದರೆ ಕೆಲಸಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ನಿಲ್ಲಿ ಎಂದು ಕುಟುಕಿದರು.

ಬಿಜೆಪಿ ಮುಖಂಡ ವಸಂತಕುಮಾರ್ ಮಾತನಾಡಿ, ತುಕಾರಾಂ ಅಸಾಂವಿಧಾನಿಕ ಪದಗಳನ್ನು ಬಳಸಬಾರದು ಎಂಬುದಾಗಿ ನೀತಿ ಪಾಠ ಹೇಳುತ್ತಾರೆ. ಆದರೆ, ಇತ್ತೀಚೆಗೆ ಕುಡುತಿನಿಯಲ್ಲಿ ನಡೆದ ರೈತರ ಸಭೆಯಲ್ಲಿ ಬಿಜೆಪಿ ಮುಖಂಡರಾದ ಜನಾರ್ಧನ ರೆಡ್ಡಿ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರ ಬಗ್ಗೆ ನೀವು ಬಳಸಿರುವ ಪದ ನಿಮಗೆ ತಿರುಗುಬಾಣವಾಗಲಿದೆ. ನಿಮಗೆ ಪಾಠ ಕಲಿಸುವ ದಿನಗಳು ಹತ್ತಿರದಲ್ಲಿವೆ ಎಂದರು.

ಬಿಜೆಪಿ ಸಂಡೂರು ಮಂಡಲದ ಅಧ್ಯಕ್ಷ ಬಿ.ಅಶೋಕ್‌ಕುಮಾರ್, ಮುಖಂಡರಾದ ನಾಗರಾಜ ಗುಡೆಕೋಟೆ ಪಕ್ಷ ಸಂಘಟನೆಯ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಡೂರು ಮಂಡಲದ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರನ್ನು ಆಯ್ಕೆ ಮಾಡಿ, ಆದೇಶಪತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ಕಾರ್ಯದರ್ಶಿ ಉಡೇದ ಸುರೇಶ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ರಾಮಕೃಷ್ಣ, ರೈತ ಮೋರ್ಚಾ ಕಾರ್ಯದರ್ಶಿ ಶಂಕ್ರಣ್ಣ, ಮುಖಂಡರಾದ ಟಿ.ಎನ್. ನಾಗರಾಜ, ನರೇಂದ್ರ ಪಾಟೀಲ್, ಗಂಡಿ ಮಾರೆಪ್ಪ, ರ‍್ರೆಮ್ಮ, ಎಂ.ಹೆಚ್. ರಮೇಶ್, ಹುಲಿರಾಜ್ ಬೊಮ್ಮಾಘಟ್ಟ ಮುಂತಾದವರು ಭಾಗವಹಿಸಿದ್ದರು.