ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಲು ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಡಿ.ಎಸ್. ಅರುಣ ಹೇಳಿದರು.ನಗರದ ಎಸ್‌ಡಿಎನ್ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಉದ್ಘಾಟಿಸಿ, ಪಕ್ಷದ ಹಾಗೂ ಸಂಘಟನೆಯ ಹಿರಿಯ ನಾಯಕರ ಎಷ್ಟೋ ವರ್ಷಗಳ ತಪಸ್ಸು, ಕನಸು ನನಸಾಗುತ್ತಿದೆ. ಅಡ್ವಾಣಿಯವರ ರಾಮ ರಾಜ್ಯದ ಮತ್ತು ರಾಮ ಮಂದಿರ ನಿರ್ಮಾಣದ ಕನಸು ಮತ್ತು ಶ್ಯಾಮ ಪ್ರಸಾದ ಮುಖರ್ಜಿಯವರ ಆರ್ಟಿಕಲ್ 370 ರದ್ದು ಇದೆಲ್ಲವುದನ್ನು ನೋಡುವ ಸೌಭಾಗ್ಯ ನಮಗೆ ದೊರೆತಿದೆ ಎಂದರು.
ರಾಜಕೀಯ ಕ್ಷೇತ್ರದಲ್ಲಿ ಕಾರ್ಯಕರ್ತರ ನಡೆ-ನುಡಿ, ನಡವಳಿಕೆಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರಾಜಕಾರಣ ಉತ್ತಮ ದಿಕ್ಕಿನಲ್ಲಿ ಸಾಗುತ್ತಿದೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಕುಟುಂಬಕ್ಕೂ ಸಮಯ ನೀಡಿ, ಹೆಚ್ಚಿನ ಸಮಯವನ್ನು 2-3 ತಿಂಗಳು ಪಕ್ಷದ ಚಟುವಟಿಕೆಗೆ ನೀಡಬೇಕು. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಶ್ರಮಿಸಬೇಕು ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ ಮಾತನಾಡಿ, ಬರುವ ಲೋಕಸಭಾ ಚುನಾವಣೆ ಒಳ್ಳೆ ಕೆಲಸ ಮಾಡುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡೋಣ ಎಂದರು.
ಕೇಂದ್ರದಲ್ಲಿ ನಮ್ಮ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪರ ಯೋಜನೆಗಳಿಗೆ ದೇಶದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಮ್ಮ ಪ್ರಧಾನಿ ಇಂದು ಜಾಗತಿಕ ಮಟ್ಟದಲ್ಲೂ ಸಹ ಮನ್ನಣೆ ಗಳಿಸುತ್ತಿರುವುದು ನಾವೆಲ್ಲ ಹೆಮ್ಮೆ ಪಡುವ ವಿಷಯ ಎಂದರು.ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ, ಮಾಜಿ ಶಾಸಕ ಡಾ. ವೀರಬಸವಂತರಡ್ಡಿ ಮುದ್ನಾಳ, ಜಿಲ್ಲಾ ಪ್ರಭಾರಿ ಅಮರನಾಥ ಪಾಟೀಲ್, ವಿಭಾಗ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್, ವಿಭಾಗೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಅರುಣ್ ಬಿನ್ನಾಡಿ, ಸಹ ಕಾರ್ಯದರ್ಶಿ ಸೂರ್ಯಕಾಂತ ದೋನಿ, ಹುಸೇನಬಾಷಾ ಕುರಕುಂದಿ, ಶೋಭಾ ಬಾಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೆವಿಂದ್ರನಾಥ ನಾದ ಇತರರಿದ್ದರು. ವೆಂಕಟರಡ್ಡಿ ಅಬ್ಬೆತುಮಕೂರು ನಿರೂಪಿಸಿದರು. ಗುರು ಕಾಮಾ ಸ್ವಾಗತಿಸಿದರು.