ವನ್ಯಜೀವಿಗಳ ಹಾವಳಿ ತಡೆಗೆ ಶ್ರಮಿಸಿ: ಶಾಸಕ ಯೋಗೇಶ್ವರ್‌

| Published : Dec 15 2024, 02:03 AM IST

ವನ್ಯಜೀವಿಗಳ ಹಾವಳಿ ತಡೆಗೆ ಶ್ರಮಿಸಿ: ಶಾಸಕ ಯೋಗೇಶ್ವರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಆರೇಳು ವರ್ಷಗಳಿಂದಲೂ ಆನೆಗಳ ಹಾವಳಿ ತೀವ್ರವಾಗಿದ್ದು, ಆನೆ-ಮಾನವ ನಡುವಿನ ಸಂಘರ್ಷದ ಪರಿಣಾಮ ಜೀವನ ಮತ್ತು ಬದುಕು ಎರಡು ದುಸ್ತರವಾಗಿದ್ದು ಇದನ್ನು ಸುಧಾರಿಸಲು ಅಧಿಕಾರಿ ವರ್ಗ ಶಕ್ತಿ ಮೀರಿ ಶ್ರಮಿಸಲೇಬೇಕು ಎಂದು ಶಾಸಕ ಯೋಗೇಶ್ವರ್ ಸೂಚನೆ ನೀಡಿದರು. ರಾಮನಗರದಲ್ಲಿ ಅಧಿಕಾರಿಗಳು ಮತ್ತು ರೈತರ ಸಭೆಯಲ್ಲಿ ಮಾತನಾಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳು-ರೈತರ ಸಭೆಕನ್ನಡಪ್ರಭ ವಾರ್ತೆ ರಾಮನಗರ

ಕಳೆದ ಆರೇಳು ವರ್ಷಗಳಿಂದಲೂ ಆನೆಗಳ ಹಾವಳಿ ತೀವ್ರವಾಗಿದ್ದು, ಆನೆ-ಮಾನವ ನಡುವಿನ ಸಂಘರ್ಷದ ಪರಿಣಾಮ ಜೀವನ ಮತ್ತು ಬದುಕು ಎರಡು ದುಸ್ತರವಾಗಿದ್ದು ಇದನ್ನು ಸುಧಾರಿಸಲು ಅಧಿಕಾರಿ ವರ್ಗ ಶಕ್ತಿ ಮೀರಿ ಶ್ರಮಿಸಲೇಬೇಕು ಎಂದು ಶಾಸಕ ಯೋಗೇಶ್ವರ್ ಸೂಚನೆ ನೀಡಿದರು.

ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಅಧಿಕಾರಿಗಳು ಮತ್ತು ರೈತರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ನೀರಾವರಿ ಯೋಜನೆ ಜಾರಿಯಾದ ಬಳಿಕ ಕೆರೆಗಳೆಲ್ಲಾ ತುಂಬಿ ಹಚ್ಚ ಹಸಿರು ಕಂಗೊಳಿಸುತ್ತಿರುವ ಪರಿಣಾಮ ಆನೆಗಳು ಇಲ್ಲೆ ನೆಲೆ ನಿಂತಿದ್ದು, ಅವುಗಳನ್ನು ಎಷ್ಟು ಬಾರಿ ಓಡಿಸಿದರೂ ಮತ್ತೆ ಮತ್ತೆ ಇಲ್ಲಿಗೆ ಓಡಿ ಬರುತ್ತಿವೆ. ಇದಕ್ಕೆಲ್ಲಾ ಆನೆ ಸೆರೆ ಕಾರ್ಯಾಚರಣೆಯೆ ಅಂತಿಮ ಪ್ರಯತ್ನವಾಗಿದ್ದು ಈ ಬಗ್ಗೆ ಅರಣ್ಯ ಸಚಿವರ ಜೊತೆ ಚರ್ಚಿಸುವುದಾಗಿ ತಿಳಿಸಿದರು.

ಆನೆ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಕೈ ಗೊಂಡಿರುವ ಕ್ರಮಗಳಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಪೂರ್ಣಗೊಳ್ಳದಿರುವುದು, ಆನೆ ಟಾಸ್ಕ್‌ಪೋರ್ಸ್‌ಗೆ ಅಗತ್ಯ ಸಿಬ್ಬಂದಿ ಇಲ್ಲದಿರುವುದು, ವಾಹನಗಳ ಸಮಸ್ಯೆ, ಅತ್ಯಾಧುನಿಕ ತಂತ್ರಜ್ಞಾನಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಶಾಸಕರ ಗಮನ ಸೆಳೆದಾಗ ಈ ಬಗ್ಗೆ ಅರಣ್ಯ ಸಚಿವರ ಜೊತೆ ಚರ್ಚಿಸಿ ಅಗತ್ಯ ಸವಲತ್ತುಗಳನ್ನು ದೊರಕಿಸಿ ಕೊಡುತ್ತೇವೆ. ಇದೆಲ್ಲವನ್ನು ಒದಗಿಸಿದ ಬಳಿಕ ಆನೆ ಹಾವಳಿಗೆ ಮುಕ್ತಿ ನೀಡಲೇಬೇಕು. ಇಲ್ಲವಾದರೆ ಅಧಿಕಾರಿಗಳ ತಲೆದಂಡ ನಿಶ್ಚಿತವೆಂದು ಎಚ್ಚರಿಕೆ ನೀಡಿದರು.

ಹಿರಿಯ ರೈತ ಮುಖಂಡ ಸಿ.ಪುಟ್ಟಸ್ವಾಮಿ ಶಾಸಕರಿಗೆ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿ ಮಾತನಾಡಿ, ಇದಕ್ಕೆಲ್ಲಾ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು. ಆನೆಗಳ ಹಾವಳಿ ಈ ಭಾಗದ ರೈತರಿಗೆ ಒಂದು ಶಾಪವಾಗಿ ಪರಿಣಮಿಸಿದ್ದು, ಆನೆದಾಳಿಯಿಂದ ನಷ್ಟಕ್ಕೆ ಒಳಗಾದ ರೈತರಿಗೆ ಸರ್ಕಾರ ಕೊಡುವ ಮೂರುಕಾಸಿನ ಪರಿಹಾರದ ಬದಲು ಆನೆಗಳನ್ನು ಸೆರೆ ಹಿಡಿಯುವುದಾಗಲಿ, ಸ್ಥಳಾಂತರ ಮಾಡುವುದಾಗಲಿ ಮಾಡುವಂತೆ ಮನವಿ ಮಾಡಿಕೊಂಡರು.

ಸಭೆಯಲ್ಲಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ಜಿಲ್ಲೆಯಲ್ಲಿನ ಆನೆ ಹಾವಳಿ ಬಗೆಗಿನ ಸಂಪೂರ್ಣ ಚಿತ್ರಣವನ್ನು ಶಾಸಕರಿಗೆ ತಿಳಿಸುತ್ತಾ, ಪ್ರಸ್ತುತ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಆನೆಗಳು ಬಿಡುಬಿಟ್ಟಿದ್ದು, ಇವುಗಳನ್ನು ಎಷ್ಟು ಬಾರಿ ಓಡಿಸಿದರು ಮತ್ತೆ ಸ್ವಸ್ಥಾನಕ್ಕೆ ಮರಳುತ್ತಿವೆ. ಮಕ್ನಾ, ಟಸ್ಕರ್ ಸೇರಿ ನಾಲ್ಕು ಗಂಡಾನೆಗಳು ಸಾಕಷ್ಟು ಸಮಸ್ಯೆ ಉಂಟು ಮಾಡುತ್ತಿದ್ದು ಇವುಗಳನ್ನು ಹಿಡಿಯಲು ಅನುಮತಿ ಕೊಡಿಸಬೇಕು ಎಂದು ಹೇಳಿದರು.

ಅರಣ್ಯ ಇಲಾಖೆಯ ಮೇಲಧಿಕಾರಿಗಳ ಜೊತೆ ಮಾತನಾಡಿದ ಯೋಗೇಶ್ವರ್ ಸಮಸ್ಯೆ ಮನವರಿಕೆ ಮಾಡಿಸಿ ಆನೆ ಸೆರೆ ಕಾರ್ಯಾಚರಣೆಗೆ ಅನುಮತಿ ನೀಡುವಂತೆ ಕೇಳಿಕೊಂಡು, ಅಧಿವೇಶನ ಮುಗಿದ ಬಳಿಕ ಸೆರೆ ಕಾರ್ಯಾಚರಣೆ ಪ್ರಾರಂಭ ಮಾಡೋಣವೆಂದರು.

ಸಭೆಯಲ್ಲಿ ಅಪಾರ ಜಿಲ್ಲಾಧಿಕಾರಿ ಚಂದ್ರಯ್ಯ, ಎಸಿಎಪ್ ನಾಗೇಂದ್ರ, ವೈಲ್ಡ್‌ಲೈಪ್ ಎಸಿಎಪ್ ಸುರೇಂದ್ರ, ಪುಟ್ಟಮ್ಮ, ವಲಯ ಅರಣ್ಯಾಧಿಕಾರಿ ಮಲ್ಲೇಶ್, ಅನಿಲ್, ರೈತ ಮುಖಂಡರಾದ ಬಸವೇಶ್, ಅರಳಾಳಸಂದ್ರ ಶಿವಪ್ಪ, ಶಿವಣ್ಣ, ಬೈರಶೆಟ್ಟಿಹಳ್ಳಿ ಮಲ್ಲಿಕಾರ್ಜುನ್, ಲೋಕೇಶ್. ಸತೀಶ್, ಮೆಣಸಿಗನಹಳ್ಳಿ ಪುನೀತ್ ಸೇರಿದಂತೆ ಅನೇಕರು ಹಾಜರಿದ್ದರು.

ಇನ್ನು ಮುಂದೆ ಪ್ರತಿ ತಿಂಗಳು ಈ ಸಂಬಂಧ ಸಭೆ ಮಾಡೋಣ. ಆನೆ ಹಾವಳಿ ಕೇವಲ ಒಂದೆರಡು ದಿನದಲ್ಲಿ ಬಗೆಹರಿಯುವುದಿಲ್ಲ. ಈ ಬಗ್ಗೆ ಎಲ್ಲವನ್ನು ಪರಿಶೀಲಿಸೋಣ. ಅಧಿಕಾರಿಗಳು ಅವರ ಸಮಸ್ಯೆ ಹೇಳಿಕೊಂಡಿದ್ದಾರೆ. ಅವರಿಗೆ ಅಗತ್ಯ ಸೌಲಭ್ಯ ನೀಡಿ ಕಾಯೋಣ. ನಂತರವೂ ಸಮಸ್ಯೆ ಬಗೆಹರಿಯದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳೋಣ.

ಸಿ.ಪಿ.ಯೋಗೇಶ್ವರ್, ಶಾಸಕರು, ಚನ್ನಪಟ್ಟಣ ಕ್ಷೇತ್ರ