ದೇಶದ ರಕ್ಷಣೆಗೆ ಮೋದಿ ಗೆಲ್ಲಿಸಲು ಶ್ರಮಿಸಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

| Published : Apr 01 2024, 12:48 AM IST

ಸಾರಾಂಶ

ಮೋದಿ ಸರ್ಕಾರ, ಭಾರತದ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಹಲವಾರು ಬದಲಾವಣೆಗಳನ್ನು ತಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಆಗಿರುವ ಕೆಲಸಗಳನ್ನು ಬಿಜೆಪಿ ಕಾರ್ಯಕರ್ತರು ಮತದಾರರಿಗೆ ತಿಳಿಯಪಡಿಸುತ್ತಿದ್ದಾರೆ. ಮತದಾರರು ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ತುದಿಗಾಲಿನ ಮೇಲೆ ನಿಂತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಭಾನುವಾರ ತಾಲೂಕಿನ ನರೇಂದ್ರ ಗ್ರಾಪಂ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಮೋದಿ ಸರ್ಕಾರ ಮಾಡಿದ ಸಾಧನೆಗಳ ಕುರಿತು ಮಾತನಾಡಿದರು.

ಮೋದಿ ಸರ್ಕಾರ, ಭಾರತದ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಹಲವಾರು ಬದಲಾವಣೆಗಳನ್ನು ತಂದಿದೆ. ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಅಭಿವೃದ್ಧಿಯು ಮಂದಗತಿಯಲ್ಲಿ ಸಾಗುತ್ತಿತ್ತು. ಇದನ್ನು ಪಾದರಸದಂತೆ ಚುರುಕಾಗಿಸಿದ ಹೆಗ್ಗಳಿಕೆ ಮೋದಿ ಸರ್ಕಾರದ್ದು. ತಳಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದ ವರೆಗೆ ಮೋದಿ ಸರ್ಕಾರ, ಭಾರತವನ್ನು ಅಭಿವೃದ್ಧಿಗೊಳಿಸಿದ ರೀತಿಯು ಬೆರಗು ಮೂಡಿಸುವಂಥದ್ದು ಎಂದರು.

ಈ ವೇಳೆ ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಶಂಕರ ಮುಗದ, ನಿಂಗಪ್ಪ ಸುತಗಟ್ಟಿ ಸೇರಿದಂತೆ ಹಲವರಿದ್ದರು.

ಕಾಂಗ್ರೆಸ್‌ ಎಂದೂ ತನ್ನ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ: ಜೋಶಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕಾಂಗ್ರೆಸ್‌ ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಕೋಟ್ಯಂತರ ಹಣ ಲೂಟಿ ಮಾಡಿದ್ದಾರೆ. ಇದೀಗ ಐಟಿ ಅಧಿಕಾರಿಗಳು ನೋಟಿಸ್‌ ಕೊಡದೇ ಏನು ಮಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2016ರಿಂದ 2019ರಲ್ಲಿ ದೊಡ್ಡ ಮಟ್ಟದ ಕ್ಯಾಶ್‌ ತೆಗೆದುಕೊಂಡಿದ್ದಾರೆ. ಹೀಗಾಗಿ, ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದು, ಕಾನೂನು ಪ್ರಕಾರ ಐಟಿ ಅಧಿಕಾರಿಗಳು ನೋಟಿಸ್‌ ಕೊಟ್ಟಿದ್ದಾರೆ. ಐಟಿ ನೋಟಿಸ್‌ ಕೊಟ್ಟು ತನಿಖೆಗೆ ಮುಂದಾಗಿದ್ದರೆ ಇದನ್ನು ಕಾಂಗ್ರೆಸ್‌ ಪಕ್ಷ ರಾಜಕೀಯ ದುರುದ್ದೇಶ ಎಂದು ಟೀಕೆ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸ. ಅರವತ್ತು ವರ್ಷಗಳ ರಾಜಕೀಯ ಅನುಭವದಲ್ಲಿ ಏನು ಮಾಡಿದ್ದಾರೆ. ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳದ ಮನಸ್ಥಿತಿಗೆ ಬಂದು ಬಿಟ್ಟಿದ್ದಾರೆ ಎಂದರು. ದಿಂಗಾಲೇಶ್ವರ ಶ್ರೀಗಳ ಹೇಳಿಕೆಗೆ ಕುರಿತು ಕೇಳಿದ ಪ್ರಶ್ನೆಗೆ, ಯಾವದಕ್ಕೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನುಡಿದರು.