ಉತ್ತಮ ಶಾಲಾ ವಾತಾವರಣ ನಿರ್ಮಾಣಕ್ಕೆ ಸಮನ್ವಯದಿಂದ ಕಾರ್ಯನಿರ್ವಹಿಸಿ-ಲಮಾಣಿ

| Published : Dec 31 2024, 01:00 AM IST

ಉತ್ತಮ ಶಾಲಾ ವಾತಾವರಣ ನಿರ್ಮಾಣಕ್ಕೆ ಸಮನ್ವಯದಿಂದ ಕಾರ್ಯನಿರ್ವಹಿಸಿ-ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ತಾಲೂಕಿನಲ್ಲಿ ಉತ್ತಮ ಶಾಲಾ ವಾತಾವರಣ ನಿರ್ಮಾಣಕ್ಕೆ ಎಲ್ಲರೂ ಸಮನ್ವಯದಿಂದ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಎಲ್ಲ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲು ಚಿಂತನೆ ಮಾಡಲಾಗಿದೆ. ಈ ಕುರಿತು ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸೂಚನೆ ನೀಡಿದರು.

ಹಾವೇರಿ: ತಾಲೂಕಿನಲ್ಲಿ ಉತ್ತಮ ಶಾಲಾ ವಾತಾವರಣ ನಿರ್ಮಾಣಕ್ಕೆ ಎಲ್ಲರೂ ಸಮನ್ವಯದಿಂದ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಎಲ್ಲ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲು ಚಿಂತನೆ ಮಾಡಲಾಗಿದೆ. ಈ ಕುರಿತು ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸೂಚನೆ ನೀಡಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ದೇವಸ್ಥಾನಕ್ಕಿಂತ ಶಾಲೆಗಳಿಗೆ ಆದ್ಯತೆ ನೀಡಬೇಕಾಗಿದೆ. ಹಾಗಾಗಿ ಶಾಲಾ ಕೊಠಡಿ, ಕಂಪೌಂಡ್‌, ಶೌಚಾಲಯ, ಭೋಜನಾಲಯ ಸೇರಿದಂತೆ ಶಾಲೆಗಳಿಗೆ ಮೂಲಭೂತ ಸೌಲಭ್ಯ ಅವಶ್ಯಕತೆ ಕುರಿತು ಸಂಪೂರ್ಣ ಮಾಹಿತಿ ನೀಡಿದರೆ ಆದ್ಯತೆ ಮೇರೆಗೆ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಮಾತನಾಡಿ, ಈಗಾಗಲೇ ವಿದ್ಯಾರ್ಥಿಗಳಿಗೆ ಸಮವಸ್ತ್ರ , ಪಠ್ಯಪುಸ್ತಕ ವಿತರಣೆ ಮಾಡಲಾಗಿದೆ. ಮಕ್ಕಳ ಕಲಿಕೆ ಹಿತದೃಷ್ಟಿಯಿಂದ ಪ್ರಾಥಮಿಕ ಶಾಲೆಗಳಿಗೆ ೧೨೨ ಹಾಗೂ ಪ್ರೌಢಶಾಲೆಗಳಿಗೆ ೨೫ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಬರುವ ಬಡ ರೋಗಿಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ನಾಯಿಕ ಕಡಿತ ಸೇರಿದಂತೆ ವಿವಿಧ ಲಸಿಕೆಗಳನ್ನು ಸಾಕಷ್ಟು ದಾಸ್ತಾನು ಮಾಡಿಕೊಂಡಿರಬೇಕು. ಯಾವುದೇ ಕಾರಣಕ್ಕೂ ರೋಗಿಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಜೊತೆಗೆ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವು ಸಂಭವಿಸದಂತೆ ತೀವ್ರ ನಿಗಾವಹಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಮಂಜೂರಾದ ಹಾಗೂ ಖಾಲಿ ಇರುವ ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆ ಮಾಹಿತಿ ನೀಡಿದರೆ ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅಗತ್ಯ ವೈದ್ಯರು ಹಾಗೂ ಸಿಬ್ಬಂದಿಗಳ ಭರ್ತಿಗೆ ಕ್ರಮವಹಿಸಲು ಅನುಕೂಲವಾಗುತ್ತದೆ. ಕೂಡಲೇ ಖಾಲಿ ಇರುವ ವೈದ್ಯರ ಹಾಗೂ ಸಿಬ್ಬಂದಿಗಳ ಪಟ್ಟಿ ನೀಡಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.ವಿದ್ಯಾರ್ಥಿ ನಿಲಯಗಳಿಗೆ ತಾಲೂಕು ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡುವ ಮೂಲಕ ವಿದ್ಯಾರ್ಥಿ ನಿಲಯಗಳ ಸ್ವಚ್ಛತೆ, ಆಹಾರ ವಿತರಣೆ ಪರಿಶೀಲಿಸಬೇಕು. ಸಮಸ್ಯೆಗಳು ಕಂಡುಬಂದಲ್ಲಿ ಕೂಡಲೇ ಬಗೆಹರಿಸಬೇಕು. ಹೊಸ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಜಾಗ ಇದ್ದರೆ ಕೂಡಲೇ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.ಆಯ್ಕೆ ಸಮಿತಿ ಬದಲಾವಣೆ: ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧಿಕಾರಿಗಳಿಂದ ಕುರಿ ಘಟಕ ಸ್ಥಾಪನೆ ಕುರಿತು ಫಲಾನುಭವಿಗಳ ಆಯ್ಕೆ ಕುರಿತು ಮಾಹಿತಿ ಪಡೆದ ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷರು, ಆಯ್ಕೆ ಸಮಿತಿಯಲ್ಲಿ ಸ್ಥಳೀಯ ಶಾಸಕರನ್ನು ಕೈಬಿಡಲಾಗಿದೆ. ಈ ಸಮಿತಿ ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಿ, ಈ ಕುರಿತು ಪಶು ಸಂಗೋಪನೆ ಸಚಿವರ ಗಮನಕ್ಕೆ ತರಲಾಗುವುದು ಎಂದರು.

ಗುತ್ತಲ ಸಮೀಪ ಇರುವ ಕುರಿ ಸಂವರ್ಧನಾ ಕೇಂದ್ರದ ೨೯೬ ಎಕರೆ ಪ್ರದೇಶದ ಸದುಪಯೋಗವಾಗಬೇಕು. ಈ ಕುರಿತು ಅಧಿಕಾರಿಗಳಿಗೆ ಇಚ್ಚಾಶಕ್ತಿ ಇರಬೇಕು. ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ವಿದ್ಯುತ್ ಕಂಬಗಳ ಸ್ಥಳಾಂತರ:ತಾಜನಗರದ ಶಿಥಿಲಗೊಂಡ ವಿದ್ಯುತ್ ಕಂಬಗಳನ್ನು ಕೂಡಲೇ ಸ್ಥಳಾಂತರಿಸಬೇಕು. ಕೆರೆಕೊಪ್ಪ- ಕರ್ಜಗಿ ರಸ್ತೆಯಲ್ಲಿ ವಿದ್ಯುತ್ ಕಂಬಗಳು ರಸ್ತೆ ಮೇಲೆ ವಾಲಿದ್ದು, ಯಾವುದೇ ಅವಘಡಗಳು ಸಂಭವಿಸುವ ಮೊದಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸೂರ್ಯ ಘರ್ ಯೋಜನೆಯಡಿ ಸೋಲಾರ್ ಅಳವಡಿಕೆಗೆ ರೈತರ ಮನವೊಲಿಸಬೇಕು. ಪ್ರಾಯೋಗಿಕವಾಗಿ ಆರಂಭಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸವಾಗಬೇಕು. ಟ್ರಾನ್ಸಫಾರ್ಮರ್ ಬೇಡಿಕೆಗೆ ತುರ್ತಾಗಿ ಸ್ಪಂದಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.ಹಾಲಗಿ ಗ್ರಾಮದಲ್ಲಿ ಪಾಳು ಬಿದ್ದ ಮನೆಯಲ್ಲಿ ಬೃಹದಾಕಾರವಾಗಿ ಆಲದ ಮರ ಬಳೆದಿದ್ದು, ವಿದ್ಯುತ್ ತಂತಿಗೆ ತಗುಲಿದರೆ ಅಕ್ಕಪಕ್ಕದವರಿಗೆ ತೊಂದರೆಯಾಗುತ್ತದೆ ಎಂದು ನಾನು ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಹೋದಾಗ, ಅಲ್ಲಿಯ ಸ್ಥಳೀಯರು ನನ್ನ ಬಳಿಗೆ ಬಂದು ತಮ್ಮ ಸಮಸ್ಯೆ ಹೇಳಿಕೊಂಡರು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗಮನಹರಿಸಬೇಕು. ಗ್ರಾಮಗಳ ಅಭಿವೃದ್ಧಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಕೂಡಲೇ ಆಲದಮರ ತೆರವುಗೊಳಿಸಲು ಸಂಬಂಧಿಸಿವರಿಗೆ ನೋಟಿಸ್ ನೀಡಿ, ಅವರು ತೆರವುಗೊಳಿಸದಿದ್ದರೆ ಪಂಚಾಯಿತಿಯಿಂದ ತೆರವುಗೊಳಿಸಿ, ಆ ವೆಚ್ಚವನ್ನು ಸಂಬಂಧಿಸಿದವರ ಕರ ಶುಲ್ಕಕ್ಕೆ ಜಮೆ ಮಾಡಬೇಕು. ಈ ಕೆಲಸ ೧೫ ದಿನಗಳಲ್ಲಿ ಆಗಬೇಕು. ತಪ್ಪಿದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಅಮಾನತ್ ಮಾಡಲು ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಕಾಲುವೆ ದುರಸ್ತಿಮಾಡಿ: ತೋಟದ ಯಲ್ಲಾಪುರ ಹತ್ತಿರ ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ಒಡೆದು ರೈತರ ಜಮೀನು ಹಾಳಾಗಿದೆ. ರೈತರಿಗೆ ತೊಂದರೆಯಾಗದಂತೆ ಕೂಡಲೇ ಕಾಲುವೆಗಳ ದುರಸ್ತಿ ಮಾಡಿಸಬೇಕು ಎಂದು ತುಂಗಾ ಮೇಲ್ದಂಡೆ ಯೋಜನೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರರಿಗೆ ಸೂಚನೆ ನೀಡಿದರು. ಸಮಾಜ ಕಲ್ಯಾಣ ಇಲಾಖೆ, ಮೀನುಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಪರಿಶೀಲನೆ ನಡೆಸಿದರು. ತಾ.ಪಂ.ಆಡಳಿತಾಧಿಕಾರಿ ಸುರೇಶ ಹುಗ್ಗಿ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನಪ್ರಸಾದ ಕಟ್ಟಿಮನಿ, ತಹಸೀಲ್ದಾರ್ ಶರಣಮ್ಮ ಇದ್ದರು.