ಭದ್ರಾ ಬಲದಂಡೆ ಕಾಲುವೆ ಸೀಳಿ ವಿವಿಧ ತಾಲೂಕುಗಳಿಗೆ ನೀರು ನೀಡುವ ಕ್ರಮ ಅವೈಜ್ಞಾನಿಕವಾಗಿದೆ. ಕೂಡಲೇ ಕಾಮಗಾರಿ ನಿಲ್ಲಿಸಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಹಾಳೂರು ನಾಗರಾಜ್ ಒತ್ತಾಯಿಸಿದ್ದಾರೆ.
- ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ
- - -ಕನ್ನಡಪ್ರಭ ವಾರ್ತೆ ಹರಿಹರ ಭದ್ರಾ ಬಲದಂಡೆ ಕಾಲುವೆ ಸೀಳಿ ವಿವಿಧ ತಾಲೂಕುಗಳಿಗೆ ನೀರು ನೀಡುವ ಕ್ರಮ ಅವೈಜ್ಞಾನಿಕವಾಗಿದೆ. ಕೂಡಲೇ ಕಾಮಗಾರಿ ನಿಲ್ಲಿಸಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಹಾಳೂರು ನಾಗರಾಜ್ ಒತ್ತಾಯಿಸಿದರು.
ತಾಲೂಕಿನ ಮಲೇಬೆನ್ನೂರಿನಿಂದ ಬುಧವಾರ ಬೈಕ್ ರ್ಯಾಲಿ ಮೂಲಕ ಕಾರ್ಯಕರ್ತರು ಹಾಗೂ ರೈತರೊಂದಿಗೆ ಹರಿಹರ ನಗರ ಹಾಗೂ ದಾವಣಗೆರೆ ಆಗಮಿಸಿ ತಾಲೂಕು ಕಚೇರಿಗಳಲ್ಲಿ ಮನವಿ ಸಲ್ಲಿಸಿ ಅವರು ಮಾತನಾಡಿದರು.ಬೇಸಿಗೆ ಸೇರಿದಂತೆ ವಿವಿಧ ಅನಿವಾರ್ಯ ಸಂದರ್ಭ ಭದ್ರಾ ಬಲದಂಡೆ ಕಾಲುವೆಯಿಂದ ಬಿಡುವ ನೀರು ಕಾಲುವೆ ಕೊನೆ ಭಾಗದಲ್ಲಿರುವ ರೈತರಿಗೆ ತಲುಪುವುದೇ ಕಷ್ಟವಾಗಿದೆ. ಇಂಥ ಸಂದರ್ಭದಲ್ಲಿ ಸುಮಾರು 8 ಅಡಿ ಆಳದಲ್ಲಿ ಪೈಪ್ ಲೈನ್ ಆಳವಡಿಸಿದರೆ ನಾಲೆಯಲ್ಲಿ ನೀರಿನ ವೇಗವು ಬುಡದಲ್ಲೆ ಕ್ಷೀಣಿಸುತ್ತದೆ ಎಂದು ಕಿಡಿಕಾರಿದರು.
ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ಚಿತ್ರದುರ್ಗದ ಹೊಸದುರ್ಗ, ಚಿಕ್ಕಮಗಳೂರು, ತರಿಕೇರೆ, ಕಡೂರು ನಗರ-ಪಟ್ಟಣಗಳು ಸೇರಿದಂತೆ ಸುಮಾರು 1660 ಗ್ರಾಮಗಳಿಗೆ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಬೇಕಾದರೆ ಮಾಡಿಕೊಳ್ಳಲಿ. ಆದರೆ ಭದ್ರಾ ಬಲದಂಡೆ ಕಾಲುವೆ ಸೀಳಿ ಪೈಪ್‍ಲೈನ್ ಅಳವಡಿಕೆಗೆ ಮುಂದಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.ಅವೈಜ್ಞಾನಿಕ ಕಾಮಗಾರಿ ನಡೆದಲ್ಲಿ ದಾವಣಗೆರೆ, ಹರಿಹರ ಚನ್ನಗಿರಿ, ಬಸವ ಪಟ್ಟಣಗಳ ರೈತರ ಹೊಲಗಳು ನೀರಿಲ್ಲದೇ ಭೀಕರ ಬರಗಾಲಕ್ಕೆ ತುತ್ತಾಗುವ ಸಾಧ್ಯತೆ ಇದೆ. ಒಂದು ಕಡೆ ಡ್ಯಾಂ ತುಂಬಿದಾಗಲೇ ಕೊನೆ ಭಾಗಕ್ಕೆ ನೀರು ತಲುಪಿಸುವಲ್ಲಿ ತಾಲೂಕು, ಜಿಲ್ಲಾಡಳಿತಗಳು ವಿಫಲವಾಗಿವೆ. ಬೆಳೆ ಪರಿಹಾರ ಕೊಡುವಲ್ಲಿಯೂ ವಿಫಲವಾಗಿವೆ. ಅಲ್ಪಸ್ವಲ್ಪ ನೀರೂ ಸಿಗದಿದ್ದರೆ ರೈತರು ಸಾಮೂಹಿಕ ಆತ್ಮಹತ್ಯೆ ಮಾಡಕೊಳ್ಳುವ ಪರಿಸ್ಥಿತಿ ಬರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹರಿಹರ ತಾಲೂಕು ಕಚೇರಿಯಲ್ಲಿ ಮನವಿ ಅರ್ಪಿಸಿದ ಬಳಿಕ ಕಾರ್ಯಕರ್ತರು ಹಾಗೂ ರೈತರು ಬೈಕ್ ರ್ಯಾಲಿ ಮೂಲಕ ದಾವಣಗೆರೆಯಲ್ಲೂ ಮನವಿ ಸಲ್ಲಿಸಲು ತೆರಳಿದರು.ಪ್ರತಿಭಟನೆಯಲ್ಲಿ ರಾಜ್ಯ ಸಮಿತಿ ಸದಸ್ಯ ಶಂಭುಲಿಂಗಪ್ಪ ಪಿ. ನಂದಿತಾವರೆ, ಸೇನೆಯ ರಾಜ್ಯ ಕಾರ್ಯದರ್ಶಿ ಮುರುಗೇಂದ್ರಯ್ಯ, ತಾಲೂಕು ಖಜಾಂಚಿ ಎಚ್.ಸಿ. ಪಿಪ್ಪೇಸ್ವಾಮಿ, ಭೀಮಪ್ಪ, ನಂದಪ್ಪ ಜಿಗಳಿ, ಕೆ.ಜಿ. ನಾಗಪ್ಪ, ವೈ.ಎಂ. ಚಂದ್ರಶೇಖರ್ ಹಾಗೂ ಇತರರು ಭಾಗವಹಿಸಿದ್ದರು.
- - --25ಎಚ್‍ಆರ್‍ಆರ್01.ಜೆಪಿಜಿ:
ಭದ್ರಾ ಡ್ಯಾಂ ಬಲದಂಡೆ ಕಾಲುವೆ ಸೀಳಿ ವಿವಿಧ ತಾಲೂಕುಗಳಿಗೆ ನೀರು ನೀಡುವ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಹರಿಹರ ತಾಲೂಕು ಕಚೇರಿಯಲ್ಇ ಮನವಿ ಸಲ್ಲಿಸಲಾಯಿತು.