ಸಿಎಂ ಸೂಚಿಸಿದರೂ ನಿಲ್ಲದ ಕಾಮಗಾರಿ

| Published : Mar 06 2025, 12:32 AM IST

ಸಾರಾಂಶ

ಕೊಪ್ಪಳ ಬಳಿ ಬಿಎಸ್‌ಪಿಎಲ್ ಕಂಪನಿ ₹ 54 ಸಾವಿರ ಕೋಟಿ ವೆಚ್ಚದಲ್ಲಿ ಉಕ್ಕು ಕಾರ್ಖಾನೆ ಸ್ಥಾಪಿಸಲು ಉದ್ದೇಶಿಸಿ ನಿರ್ಮಾಣಕ್ಕೆ ಚಾಲನೆ ನೀಡಿರುವುದನ್ನು ತಕ್ಷಣ ನಿಲ್ಲಿಸುವಂತೆ ಜಿಲ್ಲೆಯ ಸರ್ವಪಕ್ಷದ ನಿಯೋಗವು ಮಂಗಳವಾರ ಬೆಂಗಳೂರಿನ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತ್ತು.

ಕೊಪ್ಪಳ:

ಕೊಪ್ಪಳ ಬಲ್ದೋಟ್‌ ಕಾರ್ಖಾನೆ ಕೆಲಸವನ್ನು ತಕ್ಷಣ ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಅವರಿಗೆ ದೂರವಾಣಿ ಕರೆ ಮಾಡಿ ಸೂಚಿಸಿದ್ದರೂ ಜಿಲ್ಲಾಧಿಕಾರಿ ಕಾರ್ಯಪ್ರವೃತ್ತವಾಗಿಲ್ಲ. ಹೀಗಾಗಿ ಕಾರ್ಖಾನೆ ಕೆಲಸ ಸಾಂಗವಾಗಿ ನಡೆಯುತ್ತಿದೆ. ಈ ಕುರಿತು ಮಾಧ್ಯಮಗಳಿಗೂ ಜಿಲ್ಲಾಧಿಕಾರಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಕೊಪ್ಪಳ ಬಳಿ ಬಿಎಸ್‌ಪಿಎಲ್ ಕಂಪನಿ ₹ 54 ಸಾವಿರ ಕೋಟಿ ವೆಚ್ಚದಲ್ಲಿ ಉಕ್ಕು ಕಾರ್ಖಾನೆ ಸ್ಥಾಪಿಸಲು ಉದ್ದೇಶಿಸಿ ನಿರ್ಮಾಣಕ್ಕೆ ಚಾಲನೆ ನೀಡಿರುವುದನ್ನು ತಕ್ಷಣ ನಿಲ್ಲಿಸುವಂತೆ ಜಿಲ್ಲೆಯ ಸರ್ವಪಕ್ಷದ ನಿಯೋಗವು ಮಂಗಳವಾರ ಬೆಂಗಳೂರಿನ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತ್ತು. ಆಗ ಸಿಎಂ, ಜಿಲ್ಲಾಧಿಕಾರಿಗೆ ಕರೆ ಮಾಡಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಲಿ ಕಾರ್ಖಾನೆ ಕೆಲಸ ಸ್ಥಗಿತಗೊಳಿಸುವಂತೆ ಸೂಚಿಸಿದ್ದರು. ಆದರೆ, ಜಿಲ್ಲಾಧಿಕಾರಿ ಮಾತ್ರ ಮುಖ್ಯಮಂತ್ರಿ ಆದೇಶ ಪಾಲಿಸಿಲ್ಲ.

ಸಿಎಂ ಆದೇಶ ಪಾಲಿಸಲಾಗಿದೆಯೇ ಎಂದು ಬುಧವಾರ ಬೆಳಗ್ಗೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಕಾರ್ಖಾನೆಯ ಕೆಲಸ ನಿರಾತಂಕವಾಗಿ ನಡೆದಿರುವುದು ಬೆಳಕಿಗೆ ಬಂದಿದೆ.ಭದ್ರತಾ ಸಿಬ್ಬಂದಿ ದಾದಾಗಿರಿ:

ಸಿಎಂ ಆದೇಶ ಪಾಲನೆಯಾಗಿದೆ ಎಂದು ಪರಿಶೀಲಿಸಲು ಹೋದ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಹಾಗೂ ಮಾಧ್ಯಮದವರು ಸ್ಥಳಕ್ಕೆ ಭೇಟಿ ನೀಡಿದಾಗ ಅನುಚಿತವಾಗಿ ವರ್ತಿಸಿದ್ದಾರೆ. ಕಾರ್ಖಾನೆ ಸ್ಥಾಪನೆ ಸ್ಥಳಕ್ಕೂ ಬಿಟ್ಟುಕೊಳ್ಳದೆ ಅಡ್ಡಿಪಡಿಸಿದ್ದಾರೆ. ಈ ವೇಳೆ ವಾಗ್ದಾದ ನಡೆದು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪಟ್ಟು ಬಿಡದ ಹೋರಾಟಗಾರರು ಕಾರ್ಖಾನೆ ಸ್ವಾಧೀನ ಪಡಿಸಿಕೊಂಡಿರುವ ಕೆರೆ ಅಂಗಳಕ್ಕೆ ಹೋಗಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಹೈಕೋರ್ಟ್‌ ಆದೇಶದಂತೆ ಕೆರೆಯನ್ನು ಸಾರ್ವಜನಿಕ ಬಳಕೆಗೆ ಬಿಡುವಂತೆ ಆಗ್ರಹಿಸಿ ಘೋಷಣೆ ಕೂಗಿದರು. ಸಿಎಂ ಆದೇಶ ಪಾಲಿಸದ ಜಿಲ್ಲಾಡಳಿತ ವಿರುದ್ಧವೂ ಆಕ್ರೋಶ ವ್ಯಕ್ತವಾಯಿತು. ಪ್ರತಿಭಟನೆಯ ಬಿಸಿ ತೀವ್ರವಾಗುತ್ತಿದ್ದಂತೆ ಭದ್ರತಾ ಸಿಬ್ಬಂದಿ ಮೆತ್ತಗಾದರು. ನಾವೇನು ಮಾಡುವುದ ಸರ್‌, ನಮ್ಮ ಕರ್ತವ್ಯ ಮಾಡುತ್ತಿದ್ದೇವೆ ಎಂದು ಹೇಳಿದರು.

ಡಿವೈಎಸ್ಪಿ ಭೇಟಿ:

ಪ್ರತಿಭಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ಮುತ್ತಣ್ಣ ಸರ್ವಗೊಳ ಹಾಗೂ ಕೊಪ್ಪಳ ನಗರಠಾಣೆಯ ಪಿಐ ಜಯಪ್ರಕಾಶ, ಗ್ರಾಮೀಣ ಠಾಣೆಯ ಪಿಐ ಅಶೋಕ ಪರಿಸ್ಥಿತಿ ತಿಳಿಗೊಳಿಸಿದರು. ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತವಾಗಿರಬೇಕು ಎಂದು ಧಾರವಾಡ ಹೈಕೋರ್ಟ್‌ ಆದೇಶಿಸಿದ್ದು ಅದರಂತೆ ಅವಕಾಶ ನೀಡುವಂತೆ ಸೂಚಿಸಲಾಯಿತು. ಕೆರೆಯಲ್ಲಿ ದನ, ಕುರಿಗಳು ಸಹ ನೀರು ಕುಡಿಯುವುದಕ್ಕೆ ಅವಕಾಶ ನೀಡಬೇಕು ಎಂದು ಹೇಳಲಾಯಿತು

ಕೊಪ್ಪಳದ ಒಬ್ಬರೂ ಇಲ್ಲ

ಬಲ್ದೋಟ ಕಂಪನಿಯ ಕಾರ್ಖಾನೆ ಸ್ಥಾಪಿಸಲು ಈಗಷ್ಟೇ ಆರಂಭಿಸಿದ್ದು, ಅಲ್ಲಿ ಕಾರ್ಯನಿರ್ವಹಿಸುವ ಭದ್ರತಾ ಸಿಬ್ಬಂದಿಗಳಲ್ಲಿ ಒಬ್ಬರೂ ಕೊಪ್ಪಳದವರು ಇರಲಿಲ್ಲ. ಅನ್ಯ ಜಿಲ್ಲೆ ಹಾಗೂ ರಾಜ್ಯದವರು. ಇದನ್ನು ಪ್ರಶ್ನಿಸಿದ ಪ್ರತಿಭಟಕಾರರು, ಸ್ಥಳೀಯರನ್ನು ಏಕೆ ನೇಮಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕೊಪ್ಪಳ ಬಚಾವೋ ಆಂದೋಲನ ಸಮಿತಿಯ ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ. ಗೋನಾಳ, ನಜೀರಸಾಬ ಮೂಲಿಮನಿ, ಜ್ಯೋತಿ ಗೊಂಡಬಾಳ, ಮಂಜುನಾಥ ಗೊಂಡಬಾಳ, ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ರಮೇಶ ತುಪ್ಪದ, ಮುತ್ತಣ್ಣ ಬಸಾಪುರ ಸೇರಿದಂತೆ ಮೊದಲಾದವರು ಇದ್ದರು.