ಸಾರಾಂಶ
ಕನ್ನಡಪ್ರಭ ವಾರ್ತೆ ಬಾದಾಮಿ
ಮಕ್ಕಳ ರಕ್ಷಣೆ, ಬಾಲ್ಯ ವಿವಾಹ ತಡೆ ಈ ರೀತಿಯ ಕೆಲಸಗಳಾಗಬೇಕಾದರೆ ಸಮಿತಿಗಳು ಕ್ರಿಯಾಶೀಲವಾಗಿರಬೇಕು. ಆದ್ದರಿಂದ ಇಲ್ಲಿ ಸೇರಿದ ಎಲ್ಲಾ ಸದಸ್ಯರು ಭಾಗವಹಿಸಿ ವಿಷಯ ತಿಳಿದುಕೊಂಡು ತಮ್ಮ ಗ್ರಾಮ ಪಂಚಾಯತಿಗಳಲ್ಲಿ ಸಮಿತಿಗಳನ್ನು ಸರಿಯಾಗಿ ರಚನೆ ಮಾಡಿ ಕಾರ್ಯರೂಪಕ್ಕೆ ತರುವಲ್ಲಿ ಕೈಜೋಡಿಸಬೇಕೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ ಹೇಳಿದರು.ತಾಪಂ ಸಭಾಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಕರ್ನಾಟಕ ಬಾಲ್ಯವಿವಾಹ ವಿರೋಧಿ ವೇದಿಕೆ, ರೀಚ್ ಸಂಸ್ಥೆ ಹಾಗೂ ವಿದ್ಯಾನಿಕೇತನ ಸಂಸ್ಥೆಗಳ ಸಹಯೋಗದೊಂದಿಗೆ ಮಹಿಳೆಯರು ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಸದಸ್ಯರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಸಿಡಿಪಿಒ ಶಿಲ್ಪಾ ಹಿರೇಮಠ, ಬಾಲ್ಯವಿವಾಹಗಳು ನಿಲ್ಲಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಸಮಿತಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು ಎಂದ ಅವರು, ಕೆಲವು ಪ್ರಕರಣಗಳ ಸಮೇತ ವಿವರವಾಗಿ ಮಕ್ಕಳ ರಕ್ಷಣೆ ಕುರಿತು ವಿವರಿಸಿದರು.ಕರ್ನಾಟಕ ಬಾಲ್ಯ ವಿವಾಹ ವಿರೋಧಿ ವೇದಿಕೆ, ಆಂದೋಲನ ನಾಯಕಿ ಸುಧಾ ಜಗ (ಬಾಲ್ಯವಿವಾಹ ಒಳಗಾದ ಮಹಿಳೆ) ತಮ್ಮ ಜೀವನದಲ್ಲಿ ನಡೆದ ಬಾಲ್ಯ ವಿವಾಹದ ಘಟನೆಯನ್ನು ವಿವರಿಸಿ ಆಟ ಆಡುವ ವಯಸ್ಸಲ್ಲಿ ಸಂಸಾರ ನೊಗ ಹೊತ್ತು ಸಾಕಷ್ಟು ಕಷ್ಟ ಅನುಭವಿಸಿ ಇಂದು ನಾನು ಈ ವೇದಿಕೆ ಮೂಲಕ ಮಕ್ಕಳ ರಕ್ಷಣೆ ಹಾಗೂ ಬಾಲ್ಯ ವಿವಾಹ ಬಾಲ ಕಾರ್ಮಿಕ ಮುಕ್ತ ಪಂಚಾಯತಿ ಮಾಡಲು ಮುಂದಾಗಿದ್ದೇನೆ. ಬಾಲ್ಯವಿವಾಹ, ಬಾಲ ಕಾರ್ಮಿಕ ಮುಕ್ತ ಜಿಲ್ಲೆ ಮಾಡೋಣ ತಾವೆಲ್ಲರೂ ಕೈ ಜೋಡಿಸಿ ಎಂದು ಮನವಿ ಮಾಡಿದರು.
ಜಿ.ಎನ್. ಸಿಂಹ ಅವರು ಸಮಿತಿಗಳು ಹೇಗೆ ರಚನೆ ಆದವು, ಪಂಚಾಯತ್ ರಾಜ್ 73ನೇ ತಿದ್ದುಪಡಿ ಕುರಿತು ಉಪನ್ಯಾಸ ನೀಡಿದರು. ಶೈಲಜಾ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿಯ ಸದಸ್ಯರ ಕಾರ್ಯಗಳ ಕುರಿತು ವಿವರಿಸಿದರು. ರೀಚ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಕುಮಾರ, ಮಕ್ಕಳ ಕಾಯ್ದೆ, ಮಕ್ಕಳ ಹಕ್ಕುಗಳು ಮತ್ತು ಸುಸ್ತಿರ ಅಭಿವೃದ್ಧಿ ಗುರಿಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.ಉದ್ಯೋಗ ಖಾತ್ರಿ ಸತೀಶ್, ಎಂ. ವೇದ ನಾಯಕ್, ಮಕ್ಕಳ ಸಹಾಯವಾಣಿ 1098, ಸಂಯೋಜಕರು, ಶೈಲಜಾ ಬಿ, ವಲಯ ಅಧಿಕಾರಿ, 10 ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಮುಖ್ಯ ಗುರುಗಳು, ಪೊಲೀಸರು, ಶಾಲಾ ಮಕ್ಕಳು (ಸಮಿತಿ ಸದಸ್ಯರು) 130 ಕ್ಕೂ ಹೆಚ್ಚು ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ರೀಚ್ ಸಂಸ್ಥೆಯ ನಿರ್ದೇಶಕ ಜಿ.ಎನ್. ಸಿಂಹ ಸಂವಿಧಾನ ಪೀಠಿಕೆ ಬೋಧಿಸಿದರು. ಕುಮಾರ್.ಜಿ.ಎನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರ ಸ್ವಾಗತಿಸಿದರು, ಶ್ರೀದೇವಿ ಮಠ ನಿರೂಪಿಸಿದರು, ಸುಧಾ ವಂದಿಸಿದರು.ಎಚ್ಚರ - ಬಾಲ್ಯವಿವಾಹ ನಿಷೇಧಿಸಿದೆ ಎನ್ನುವ ಪೋಸ್ಟರ್ ಮತ್ತು ಮಹಿಳೆಯರು ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಕುರಿತಾದ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.