ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ ದೊಡ್ಡಿ
ಲೋಕಸರ ವಿಸಿ ನಾಲಾ ಭಾಗದಲ್ಲಿ ಕಾಮಗಾರಿ ಕೈಗೆತ್ತಿಕೊಂಡು ಹೊಸ ಸ್ಪರ್ಶ ನೀಡಿ ಆಧುನೀಕರಣಗೊಳಿಸಲಾಗುತ್ತಿದೆ. ರೈತರು ಒಂದು ತಿಂಗಳ ನಂತರ ಕೃಷಿ ಚಟುವಟಿಕೆ ಆರಂಭಿಸಿ. ನೀರು ಕೊನೇ ಭಾಗದವರೆಗೂ ಸುಗಮವಾಗಿ ಹರಿಯಲು ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಕೆ.ಎಂ.ಉದಯ್ ಮನವಿ ಮಾಡಿದರು.ಚಿಕ್ಕರಸಿಕೆರೆ ಹೋಬಳಿಯ ಸಬ್ಬನಹಳ್ಳಿ ಮತ್ತು ಯಡಗನಹಳ್ಳಿ ಗ್ರಾಮಗಳ ಹತ್ತಿರದ ನಾಲೆ ಅಭಿವೃದ್ಧಿ ಕಾವೇರಿ ನೀರಾವರಿ ನಿಗಮ ನಿಯಮಿತದ ಲೋಕಸರ ಶಾಖಾ ನಾಲೆ ಅಡಿಯಲ್ಲಿ ಬರುವ 6.15 ಕಿ.ಮೀ ರಿಂದ 10.60 ಕಿ.ಮೀ. ವರೆಗೆ (ಸುಮಾರು 4.5 ಕಿ.ಮೀ.) ಕಾಮಗಾರಿ ನಡೆಯುವ ಸ್ಥಳಕ್ಕೆ ಇಲಾಖೆ ಅಧಿಕಾರಿಗಳ ಜತೆಗೂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯ ಲೋಕಸರ ಭಾಗದ ನಾಲೆಗಳ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ. ಕೃಷಿ ಚಟುವಟಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರದಿಂದ ಸುಮಾರು 22 ಕೋಟಿ ರು. ವೆಚ್ಚದ ಯೋಜನೆಯಡಿ ನಾಲೆ ಕಾಮಗಾರಿ ನಡೆಯುತ್ತಿದೆ ಎಂದರು.ಕಾಮಗಾರಿಯಲ್ಲಿ ಕಟ್ ಅಂಡ್ ಕವರ್ ಪದ್ಧತಿಯ ಕಾಲುವೆ ನಿರ್ಮಾಣ, ಆರ್‌ಸಿಸಿ ಟ್ರಫ್, ಮತ್ತು ಅಡ್ಡಮೋರಿ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ರೈತರಿಗೆ ಸಮಸ್ಯೆಗಳು ಆಗದಂತೆ ತ್ವರಿತವಾಗಿ ಸುಮಾರು ಎರಡು ತಿಂಗಳ ಅವಧಿಯಲ್ಲಿ ನಾಲಾ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು.
ಅಧಿಕಾರಿಗಳು ಹಾಗೂ ಗುತ್ತಿಗೆದಾರನ ಜೊತೆಗೂಡಿ ನಾಲಾ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಶಾಸಕರು ಗುಣಮಟ್ಟ ಹಾಗೂ ತಾಂತ್ರಿಕ ಅಡಚಣೆಗಳ ಕುರಿತು ಚರ್ಚೆ ನಡೆಸಿದ್ದೇನೆ. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವ ಭರವಸೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನೀಡಿದ್ದಾರೆ ಎಂದರು.ಈ ಹಿಂದೆ ನಾಲೆ ಕೊನೇ ಭಾಗದ ರೈತರಿಗೆ ನೀರು ಸರಿಯಾಗಿ ಹರಿಯದೆ ಬಹಳಷ್ಟು ತೊಂದರೆಯಾಗಿತ್ತು. ಈ ಬಗ್ಗೆ ರೈತರು ಹಾಗೂ ಕೊನೇ ಭಾಗದ ಗ್ರಾಮಸ್ಥರು ನನಗೆ ಸಾಕಷ್ಟು ಮನವಿ ಸಲ್ಲಿಸಿದ್ದರು. ಈ ಸಂಕಷ್ಟವನ್ನು ಹೋಗಲಾಡಿಸಲು ನಾಲಾ ಅಧುನೀಕರಣ ಮಾಡಲಾಗುತ್ತಿದೆ ಎಂದರು.
ಕಾಮಗಾರಿ ಪೂರ್ಣಗೊಂಡ ನಂತರ ಈ ಭಾಗದಿಂದ ಕೊನೇ ಭಾಗದವರೆಗೂ ರೈತರ ಜಮೀನುಗಳಿಗೆ ಸರಾಗವಾಗಿ ನೀರು ಹರಿಸಿ ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲ ಮಾಡಲಾಗುವುದು. ಗ್ರಾಮಸ್ಥರಿಗೆ ಮುಕ್ತ ಜಲವಿತರಣೆಯಿಂದ ಕೃಷಿಗೆ ಸುಧಾರಿತ ಬೆಂಬಲ ಲಭಿಸಲಿದೆ. ಜಲಾನಯನ ವ್ಯವಸ್ಥೆ ಸುಧಾರಿತವಾಗುವ ಮೂಲಕ, ಉತ್ಪಾದಕತೆ ಹೆಚ್ಚಳ ಮತ್ತು ನೀರಿನ ಸಮರ್ಪಕ ಬಳಕೆ ಸಾಧ್ಯವಾಗಲಿದೆ ಎಂದರು.ಇದೇ ವೇಳೆ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ರಾಘುರಾಮನ್, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಣ್ಣೂರು ರಾಜೀವ್, ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚೆಲುವರಾಜು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಸವರಾಜು, ಕಾವೇರಿ ನೀರಾವರಿ ನಿಗಮದ ಎಇಇ ರಾಜೇಶ್, ಎಇ ನವೀನ್, ಗುತ್ತಿಗೆದಾರ ಹರೀಶ್, ಮುಖಂಡರಾದ ಕರಡಕೆರೆ ಮನು, ಯಡಗನಹಳ್ಳಿ ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.