ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಜಿಲ್ಲೆಗೆ ಮಂಜೂರಾದ ಅನುದಾನದ ಕಾಮಗಾರಿಗಳನ್ನೆಲ್ಲ ನಿರ್ಮಿತಿ ಕೇಂದ್ರವೇ ಮಾಡುತ್ತಿದ್ದು ಇದರಿಂದ ಕಾಮಗಾರಿಯಲ್ಲಿ ಅಕ್ರಮದ ಅನುಮಾನ ಆರಂಭವಾಗಿದೆ. ಅನುದಾನವನ್ನು ಇತರೆ ಇಲಾಖೆಗಳಿಗೂ ವಿಂಗಡಿಸಿ ಸೂಕ್ತ, ಪಾರದರ್ಶಕ ಕಾಮಗಾರಿ ಅನುಷ್ಠಾನಗೊಳಿಸಲು ಆದೇಶಿಸಬೇಕೆಂದು ಆಗ್ರಹಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತು.ನಗರದ ಡಾ. ಅಂಬೇಡ್ಕರ್ ವೃತ್ತದಿಂದ ವೇದಿಕೆ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳಕರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಯ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ತೆರಳಿ, ಈ ಕುರಿತು ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯಸಿಂಗ್ ಅವರಿಗೆ ಬರೆದ ಮನವಿಯನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಲಾಯಿತು.
ಹಿಂದುಳಿದ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಕಲ್ಯಾಣ ಕರ್ನಾಟಕ ಭಾಗದ ಆಯಾ ವಿಧಾನಸಭಾ ಕ್ಷೇತ್ರಗಳಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಕೋಟ್ಯಂತರ ರುಪಾಯಿ ಬರುತ್ತಿದೆ. ಆದರೆ, ಇಲ್ಲಿನ ಕೆಲ ಜನಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕಾಗಿ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಆರೋಪಿಸಿದ್ದಾರೆ.ಡಾ. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಯ ಪ್ರಕಾರ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಪ್ರತಿ ವರ್ಷ ಸಮುದಾಯ ಆರೋಗ್ಯ ಕೇಂದ್ರಗಳ ನಿರ್ಮಾಣ, ವೈದ್ಯರ ವಸತಿ ನಿಲಯಗಳ ನಿರ್ಮಾಣ, ಶಾಲಾ ಕೊಠಡಿಗಳ ನಿರ್ಮಾಣ, ಶಾಲೆಗಳಲ್ಲಿ ಪೀಠೋಪಕರಣ ಅಳವಡಿಸುವುದು, ಸರ್ಕಾರಿ ಆಸ್ಪತ್ರೆಗಳಲ್ಲಿ ಇಸಿಜಿ, ಯಂತ್ರಗಳು, ಎಕ್ಸ್‌ರೇ ಯಂತ್ರಗಳು, ಅಂಗನವಾಡಿ ಕಟ್ಟಡಗಳು, ಗ್ರಂಥಾಲಯ ಕಟ್ಟಡಗಳು, ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣ, ಶಾಲೆಗಳಿಗೆ ಸುತ್ತು ಗೋಡೆಗಳ ನಿರ್ಮಾಣ, ಗ್ರಾಮಗಳಲ್ಲಿ ಸಿ.ಸಿ. ರಸ್ತೆಗಳ ನಿರ್ಮಾಣ, ಸಿ.ಸಿ. ಚರಂಡಿಗಳ ನಿರ್ಮಾಣ, ಹಿಂದುಳಿದ ಗ್ರಾಮಗಳ ಸಂಪರ್ಕ ಕಲ್ಪಿಸುವ ಡಾಂಬರೀಕರಣ ರಸ್ತೆಗಳ ನಿರ್ಮಾಣ ಮಾಡುವುದು ಮತ್ತು ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಪಟ್ಟಿ ಮಾಡಿದ್ದಾರೆ.
ತಮ್ಮ ಕೆಕೆಆರ್‌ಡಿಬಿಯಿಂದ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಕಾಮಗಾರಿಗಳನ್ನು ಕೇವಲ ನಿರ್ಮಿತಿ ಕೇಂದ್ರದಿಂದ ಅನುಷ್ಠಾನಗೊಳಿಸಲು ಮುಂದಾಗಿರುವುದು ಸಂಪೂರ್ಣವಾಗಿ ಕಾನೂನಿನ ಉಲ್ಲಂಘನೆಯಾಗಿದೆ. ಅದಲ್ಲದೆ ಕೇವಲ ಒಂದೇ ಇಲಾಖೆಯಿಂದ ಆರ್ಥಿಕ ವರ್ಷಾಂತ್ಯದ ಒಳಗಾಗಿ ಇಷ್ಟೊಂದು ದೊಡ್ಡ ಮೊತ್ತದ ಅನುದಾನ ಬಳಸಿಕೊಳ್ಳುವುದು ಅಸಾಧ್ಯದ ಮಾತು ಎಂದಿದ್ದಾರೆ.ಅದಲ್ಲದೇ ನಿರ್ಮಿತಿ ಕೇಂದ್ರ ಬೀದರ್ ಈ ಇಲಾಖೆ ಮೇಲೆ ಸಾಕಷ್ಟು ಭ್ರಷ್ಟಾಚಾರದ ಆರೋಪಗಳಿದ್ದು, ಈ ಇಲಾಖೆಯನ್ನು ಕಪ್ಪು ಪಟ್ಟಿಗೆ ಸೇರಿಸಲು ಸಾಕಷ್ಟು ಚರ್ಚೆಗಳು ಜಿಲ್ಲಾಡಳಿತದ ಹಂತದಲ್ಲಿ ನಡೆದಿದ್ದವು. ಅದಲ್ಲದೇ ಬೀದರ್ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ಮತ್ತು ಇನ್ನಿತರ ತಾಂತ್ರಿಕ ಇಲಾಖೆಗಳಿದ್ದು, ಅವುಗಳಿಂದ ಸಹ ಕಾಮಗಾರಿಗಳು ಅನುಷ್ಠಾನಗೊಳಿಸಬಹುದು. ಆದರೆ ಜಿಲ್ಲೆಯ ನೂರಾರು ಕೋಟಿ ರು. ಅನುದಾನವನ್ನು ಒಂದೇ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವುದು ಖಂಡನೀಯವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕವು ಪ್ರತಿಭಟನೆ ಮೂಲಕ ಮನವಿ ಮಾಡಿದೆ.
ರ‍್ಯಾಲಿಯಲ್ಲಿ ಸಚಿನ್ ಜಟಗೊಂಡ, ವೀರಶೆಟ್ಟಿ ಗೌಸಪೂರೆ, ವಿಶ್ವನಾಥ ಗೌಡ, ಸುಭಾಷ ಗಾಯಕವಾಡ, ಅನೀಲ ಹೇಡೆ, ನವೀನ ಬುಧೇರಾ, ವಿಶ್ವನಾಥ ಆಲೂರೆ, ಸಚಿನ್ ತಿಪಶೆಟ್ಟಿ, ಮಲ್ಲಿಕಾರ್ಜುನ ಸಿಕನಪೂರೆ, ಉದಯಕುಮಾರ ಅಷ್ಟೂರೆ, ಸೋಮಶೇಖರ ಸಜ್ಜನ, ಮಾಳಸಕಾಂತ ವಾಗೆ, ರಾಜಕುಮಾರ ಎಡವೆ, ಸಂತೋಷ ಚೆಟ್ಟಿ, ವಿವೇಕ ನಿರ್ಮಳೆ, ಸುಧಾಕರ ರಾಠೋಡ, ಅಮಿತ ಶಿವಪೂಜೆ, ರಾಕೇಶ ಶಾವುಜಿ, ಜಮೀರ್ ಪಟೇಲ್ ಬಗದಲ್ ಮತ್ತಿತರರು ಇದ್ದರು.