ಕನಕಗಿರಿ: ಅಧಿಕಾರಿಗಳು ಹಾಗೂ ಸಿಬ್ಬಂದಿ ಸರಿಯಾಗಿ ಕೆಲಸ ಮಾಡಿ ತಾಲೂಕು, ಜಿಲ್ಲೆಗೆ ಹೆಸರು ತರಬೇಕು ಎಂದು ತಾಪಂ ಕಾರ್ಯನಿವರ್ಹಹಕಾಧಿಕಾರಿ ರಾಜಶೇಖರ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು.ಪಂಚಾಯತ್ ರಾಜ್ ಇಲಾಖೆ ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಉತ್ತಮ ವೇದಿಕೆಯಾಗಿದ್ದು, ಎಲ್ಲರೂ ಅದರ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮೀಣ ಜನರ ವಿಕಾಸಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ರೂಪಿಸಿವೆ. ಈ ಯೋಜನೆಗಳನ್ನು ಬಳಸಿಕೊಂಡು ಸದೃಢರಾಗಬೇಕು ಎಂದರು.

ಇದಕ್ಕೂ ಮೊದಲು ತಹಸೀಲ್ದಾರ್ ವಿಶ್ವನಾಥ ಮುರುಡಿ ಮಾತನಾಡಿ, ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾದರೆ ಕೂಡಲೇ ಪಿಡಿಒ, ಪಂಚಾಯಿತಿ ಸಿಬ್ಬಂದಿರು ಸೇರಿ ಪರಿಹರಿಸಬೇಕು. ತೀರಾ ಸಮಸ್ಯೆಯಾದಲ್ಲಿ ಬೋರ್‌ವೆಲ್ ಕೊರೆಸಿ ನೀರು ಸರಬರಾಜುಗೊಳಿಸಲು ಮುಂದಾಗಬೇಕು. ನೀರು ಪೋಲಾಗದಂತೆ ನೋಡಿಕೊಳ್ಳಬೇಕು. ಜತೆಗೆ ಸಾರ್ವಜನಿಕರಿಗೆ ನೀರು ಮಿತವಾಗಿ ಬಳಸಲು ಜಾಗೃತಿ ಮೂಡಿಸಬೇಕು. ಇನ್ನೂ ಟ್ಯಾಂಕ್‌ಗಳು ದುರಸ್ಥಿಯಲ್ಲಿದ್ದರೆ ಅಥವಾ ಕುಸಿದು ಬೀಳುವ ಹಂತದಲ್ಲಿದ್ದರೆ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಲ್ಲರೂ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಪಂಚಾಯತ್ ರಾಜ್ ದಿನಾಚರಣೆಗೆ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿಗಳಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಪಿಡಿಒ, ಕಾರ್ಯದರ್ಶಿ, ಕರವಸೂಲಿ, ನೀರಗಂಟಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ವೇಳೆ ತಾಲೂಕು ಪಂಚಾಯಿತಿ ಸಿಬ್ಬಂದಿ, ಪಿಡಿಒಗಳು, ಕಾರ್ಯದರ್ಶಿಗಳು, ಕರವಸೂಲಿಗಾರರು ಹಾಗೂ ನೀರಗಂಟಿಗಳು ಉಪಸ್ಥಿತರಿದ್ದರು.