ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಸರ್ಕಾರಿ ಅಧಿಕಾರಿಗಳಿಗೆ ತಮ್ಮದೇ ಆದ ಜವಾಬ್ದಾರಿಯಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳು ಹಾಗೂ ಅಭಿವೃದ್ಧಿ ಬಗ್ಗೆ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆ ಹೊರತು ವಿನಾಕಾರಣ ಸಾರ್ವಜನಿಕರನ್ನು ಅಲೆದಾಡಿಸಬಾರದು ಎಂದು ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎ.ವಿ. ಲಕ್ಷ್ಮೀನಾರಾಯಣ್ ಅಧಿಕಾರಿಗಳನ್ನು ಎಚ್ಚರಿಸಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ತುಮಕೂರು ಲೋಕಾಯುಕ್ತ ಪೊಲೀಸ್ ಅಧೀಕ್ಷರ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆ ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದ ಅವರು, ಜನತೆಗೆ ಉತ್ತಮ ಆಡಳಿತ ಕೊಡುವುದು ಎಲ್ಲ ಸರ್ಕಾರಿ ಅಧಿಕಾರಿಗಳ ಕರ್ತವ್ಯ. ಆದರೂ ಕೆಲ ಅಧಿಕಾರಿಗಳು ತಮ್ಮ ಇಲಾಖೆ ಕಚೇರಿಗೆ ಬಂದ ಸಾರ್ವಜನಿಕರನ್ನು ಸೌಜನ್ಯಕ್ಕೂ ಬಂದ ಕಾರಣ ಕೇಳದೆ, ನಾಳೆ ಬಾ ಎಂದು ಸಬೂಬು ಹೇಳುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಈ ನಡವಳಿಕೆ ಸರ್ಕಾರಿ ಅಧಿಕಾರಿಗಳಿಗೆ ಗೌರವ ತರುವುದಿಲ್ಲ. ಕಚೇರಿಗೆ ಬಂದ ಸಾರ್ವಜನಿಕರಿಗೆ ಸ್ಪಂದಿಸಿ, ಅವರ ಕಷ್ಟಗಳನ್ನು ಸಮಾಧಾನದಿಂದ ಆಲಿಸಿದರೆ ಅವರ ಅರ್ಧ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಸರ್ಕಾರ ಸಾರ್ವಜನಿಕರ ಒಳಿತಿಗಾಗಿ ಸಕಾಲ ಯೋಜನೆ ತಂದಿದ್ದರೂ ಸಾರ್ವಜನಿಕರು ವಿನಾಕಾರಣ ಅಲೆದಾಡುವಂತಾಗಿದೆ. ಸರ್ಕಾರಿ ಸೇವೆಯಲ್ಲಿರುವ ನೀವು ಮೊದಲು ಮಾನವೀಯತೆ ಬೆಳೆಸಿಕೊಳ್ಳಬೇಕು ಎಂದರು.ಸಭೆಯಲ್ಲಿ ಹಾಜರಿದ್ದ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಶಿವಕುಮಾರ್ ಉದ್ದೇಶಿಸಿ ಮಾತನಾಡಿದ ಲೋಕಾಯುಕ್ತರು, ನಿಮ್ಮ ಆಸ್ಪತ್ರೆಯ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ವೈದ್ಯರ ನಿರ್ಲಕ್ಷ್ಯ ಮತ್ತು ದುಪ್ಪಟ್ಟು ಹಣ ಕೇಳುತ್ತಿದ್ದಾರೆ, ಸ್ವಚ್ಚತೆ ಇಲ್ಲ ಎಂಬ ಬಗ್ಗೆ ದೂರುಗಳಿವೆ. ಕೂಡಲೆ ಇವೆಲ್ಲ ಸರಿಪಡಿಸಿಕೊಳ್ಳದಿದ್ದರೆ ಕಠಿಣ ಕ್ರಮ ಗ್ಯಾರಂಟಿ ಎಂದರು. ನಗರದಲ್ಲಿ ಕುಡಿಯುವ ನೀರು ಸಂಬಂಧಪಟ್ಟಂತೆ ಮಾಹಿತಿ ನೀಡಿ ಎಂದು ಲೋಕಾಯುಕ್ತರು ಪೌರಾಯುಕ್ತರನ್ನು ಕೇಳಿದ ತಕ್ಷಣ ಸಭೆಯಲ್ಲಿದ್ದ ಸಾರ್ವಜನಿಕರು ಕಳೆದ ೮-೯ ತಿಂಗಳಿಂದ ನಗರಕ್ಕೆ ನೀರು ಪೂರೈಸುವ ಈಚನೂರು ಕೆರೆಗೆ ಯುಜಿಡಿ ಕೊಳಚೆ ನೀರು ಮಿಶ್ರಣವಾಗುತ್ತಿದ್ದು ಇದಕ್ಕೆ ಯಾವುದೇ ಕ್ರಮ ವಹಿಸಿಲ್ಲ ಎಂದು ದೂರಿದರು. ಲೋಕಾಯುಕ್ತರು ಇದಕ್ಕೆ ಉತ್ತರ ಹೇಳಿ ಎಂದು ಪೌರಾಯುಕ್ತರನ್ನು ಕೇಳಿದಾಗ ಈಚನೂರು ಕೆರೆ ನೀರನ್ನು ಈಗ ಬಳಸುತ್ತಿಲ್ಲ. ನಗರದ ಜನರಿಗೆ ಟ್ಯಾಂಕರ್ ಮೂಲಕ ಮತ್ತು ಹೊಸ ಬೋರ್‌ವೆಲ್ ಕೊರೆಯಿಸಿ ನೀರು ನೀಡಲಾಗುತ್ತಿದೆ. ಮುಂದೆ ನೀರಿನ ಸಮಸ್ಯೆಯಾಗದಂತೆ ಪರ್ಯಾಯ ಕ್ರಮ ವಹಿಸಲಿದ್ದೇವೆಂದು ತಿಳಿಸಿದರು. ಸಭೆಯಲ್ಲಿ ಚಿಕ್ಕಲಕ್ಕಿಪಾಳ್ಯದಲ್ಲಿ ರಸ್ತೆ ಒತ್ತುವರಿ ಮಾಡಿಕೊಂಡು ಮನೆ ಕಟ್ಟುತ್ತಿದ್ದರೂ ನಗರಸಭೆ ಯಾವುದೇ ಕ್ರಮವಹಿಸಿಲ್ಲ ಎಂದು ನಗರಸಭೆ ವಿರುದ್ದ ತಿಮ್ಮರಾಜು ಎಂಬುವವರು ದೂರು ನೀಡಿದರು. ಭದ್ರಾಪುರದ ರೇಣುಕಾಮೂರ್ತಿ ಎಂಬುವವರು ಪಲ್ಲಾಗಟ್ಟಿ ಅಡವಪ್ಪ ಟ್ರಸ್ಟ್ ಜಮೀನು ವಿವಾದ ಸಂಬಂದ ದೂರು ನೀಡಿದರು. ಗಾಂಧಿನಗರ ರಾಮಚಂದ್ರ ಎಂಬುವವರು ಹರಿಜನ ಕಾಲೋನಿಯ ಮೂರು ಮನೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಈ ಬಗ್ಗೆ ಅಬಕಾರಿ ಇಲಾಖೆ ಗಮನಕ್ಕೂ ತಂದರೂ ಕ್ರಮ ಕೈಗೊಂಡಿಲ್ಲ ಎಂದು ದೂರು ನೀಡಿದರು. ಕಂದಾಯ ಇಲಾಖೆ, ಬೆಸ್ಕಾಂ, ಸಬ್‌ರಿಜಿಸ್ಟ್ರಾರ್ ಕಚೇರಿ, ಪೊಲೀಸ್ ಇಲಾಖೆಗಳಿಗೆ ಸಂಬಂದಪಟ್ಟ ದೂರುಗಳನ್ನು ನೀಡಿದರು. ಲೋಕಾಯುಕ್ತರು ದೂರುಗಳನ್ನು ಸ್ವೀಕರಿಸಿ ಸಂಬಂದಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಿ ಮೂರು ದಿನಗಳೊಳಗೆ ಈ ಎಲ್ಲ್ಲಾ ಸಮಸ್ಯೆಗಳನ್ನು ಪರಿಹಾರವಾಗಬೇಕು. ಒಟ್ಟಾರೆ 13ಕ್ಕೂ ಹೆಚ್ಚು ದೂರುಗಳನ್ನು ಸಾರ್ವಜನಿಕರು ನೀಡಿದರು. ಸಭೆಯಲ್ಲಿ ಪೊಲೀಸ್ ಉಪಾಧೀಕ್ಷಕ ಕೆ.ಜಿ. ರಾಮಕೃಷ್ಣ, ಪೊಲೀಸ್ ನಿರೀಕ್ಷಕರಾದ ಕೆ. ಸುರೇಶ್, ಟಿ. ರಾಜು, ಶಿವರುದ್ರಪ್ಪ ಮೇಟಿ, ತಹಸೀಲ್ದಾರ್ ಪವನ್‌ಕುಮಾರ್, ತಾ.ಪಂ ಇಒ ಸುದರ್ಶನ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಡಿವೈಎಸ್‌ಪಿ ವಿನಾಯಕ ಶೆಟಗೇರಿ, ನಗರಠಾಣೆ ಇನ್ಸ್‌ಪೆಕ್ಟರ್ ವೆಂಕಟೇಶ್, ಕೃಷ್ಣಪ್ಪ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು. ಫೋಟೋ 6-ಟಿಪಿಟಿ1ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ಸಭೆಯಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕ್ಷಕರಾದ ಎ.ವಿ. ಲಕ್ಷ್ಮೀನಾರಾಯಣ್ ಸಾರ್ವಜನಿಕರಿಂದ ದೂರು ಸ್ವೀಕರಿಸುತ್ತಿರುವುದು.