ಸಾರಾಂಶ
ಕನ್ನಡಪ್ರಭ ವಾರ್ತೆ ಗುಬ್ಬಿ
ಹೇಮಾವತಿ ಕೆನಾಲ್ ಮೂಲಕ ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗುವುದು ಡಿ.ಕೆ.ಶಿವಕುಮಾರ್ ಹಠವಾಗಿದ್ದು, ಈ ಕಾಮಗಾರಿ ಹೆಸರಿನಲ್ಲಿ ಈಗಾಗಲೇ ರು.300 ಕೋಟಿ ಹಣವನ್ನು ಡ್ರಾ ಮಾಡಿಕೊಂಡು ಚುನಾವಣೆಗೆ ಬಳಸಿಕೊಂಡಿದ್ದು, ಅದನ್ನು ಸರಿದೂಗಿಸಲು ಈ ಕಾಮಗಾರಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಎಸ್.ಡಿ. ದಿಲೀಪ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಡಿ.ರಾಂಪುರ ಗ್ರಾಮದಲ್ಲಿ ಸ್ಥಗಿತಗೊಂಡಿದ್ದ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಲ್ ಕಾಮಗಾರಿಯನ್ನು ಪ್ರಾರಂಭ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸುವ ಸಲುವಾಗಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸರ್ಕಾರವು ತಾಲೂಕಿನ ರೈತರ ಹಿತ ಕಾಪಾಡಬೇಕು. ಎಲ್ಲಾ ಶಾಸಕರು ಪಕ್ಷಾತೀತವಾಗಿ ಬಂದು ಈ ಕಾಮಗಾರಿಯನ್ನು ತಡೆಯಬೇಕು. ಈಗ ಕಡಿಮೆ ಸಂಖ್ಯೆಯ ರೈತರು ಆಗಮಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಮುಂದಿನ ದಿನದಲ್ಲಿ ಸಾವಿರಾರು ರೈತರು ಹಾಗೂ ಸಾರ್ವಜನಿಕರೊಂದಿಗೆ ಮುಖ್ಯ ರಸ್ತೆಗಳನ್ನು ತಡೆದು ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ಅವೈಜ್ಞಾನಿಕ ಕಾಮಗಾರಿ ಮಾಡುತ್ತಿರುವ ಸರ್ಕಾರಕ್ಕೆ ನಾಚಿಕೆ ಮಾನ ಮರ್ಯಾದೆ ಇಲ್ಲ. ಈಗಾಗಲೇ ಹೋರಾಟ ಮಾಡಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದೆವು ಆದರೆ ರಾಜ್ಯ ಸರ್ಕಾರ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಜಿಲ್ಲೆ ಹಾಗೂ ತಾಲೂಕು ಆಡಳಿತಕ್ಕೆ ಒತ್ತಡ ತರುವ ಮೂಲಕ ಅವೈಜ್ಞಾನಿಕ ಕಾಮಗಾರಿ ಮಾಡಲು ಅಧಿಕಾರಿಗಳನ್ನು ಹಾಗೂ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ರೈತರ ಮೇಲೆ ದರ್ಪ ದೌರ್ಜನ್ಯ ತೋರುವುದು ಉತ್ತಮ ನಡೆಯಲ್ಲ. ಅಧಿಕಾರಿಗಳು ಜಲಸಂಪನ್ಮೂಲ ಸಚಿವರ ನೀರಾವರಿ ಇಲಾಖೆ ಅಧಿಕಾರ ಸೂಚನೆ ಮೇರೆಗೆ ರೈತರ ಜಮೀನುಗಳನ್ನು ವಶಪಡಿಸಿಕೊಂಡು ತರಾತುರಿಯಲ್ಲಿ ಕಾಮಗಾರಿಗೆ ಮುಂದಾಗುತ್ತಿರುವುದು ಸರಿಯಲ್ಲ ಯಾವುದೇ ಕಾರಣಕ್ಕೂ ಕಾಮಗಾರಿ ಮಾಡಲು ನಾವು ಬಿಡುವುದಿಲ್ಲ ಈ ಕಾಮಗಾರಿ ಸ್ಥಗಿತಗೊಳಿಸುವ ಸಲುವಾಗಿ ಜೈಲಿಗೆ ಹೋಗಲು ನಾವು ಸಿದ್ಧರಿದ್ದೇವೆ. ಈ ಕಾಮಗಾರಿಯನ್ನು ಸ್ಥಗಿತಗೊಳಿಸಲು ಮುಂದಾಗದಿದ್ದರೆ ಜಿಲ್ಲೆಯ ರೈತರು ಮುಖಂಡರುಗಳು ಉಗ್ರವಾದ ಹೋರಾಟಕ್ಕೆ ಹಾಗೂ ಸತ್ಯಾಗ್ರಹಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಮಾತನಾಡಿ , ಯಾವುದೇ ಭೂಮಿಯಲ್ಲಿ ಕಾಮಗಾರಿ ಮಾಡಬೇಕೆಂದರೆ ಆ ಭೂಮಿ ಭೂಸ್ವಾಧೀನ ಪಡಿಸಿಕೊಂಡ ರೈತರಿಗೆ ಪರಿಹಾರ ನೀಡಿ ಕಾಮಗಾರಿಯನ್ನು ಮಾಡಬೇಕು. ಯಾವುದನ್ನು ಸಹ ಗಮನಕ್ಕೆ ತೆಗೆದುಕೊಳ್ಳದ ಸರ್ಕಾರ ಮತ್ತು ಜಿಲ್ಲಾಡಳಿತ ಅನುಭವದಲ್ಲಿ ಇರುವಂತಹ ಹಾಗೂ ಅಡಿಕೆ ತೆಂಗು ಬೆಳೆದಿರುವಂತಹ ಜಮೀನುಗಳನ್ನು ವಶಪಡಿಸಿಕೊಂಡು ರೈತರಿಗೆ ಯಾವುದೇ ಪರಿಹಾರವನ್ನು ನೀಡದೆ ಕಾಮಗಾರಿಯನ್ನು ಮಾಡಲು ಮುಂದಾಗಿರುವುದು ಎಷ್ಟುಸರಿ? ಎಂದರು. ಕುಣಿಗಲ್ ಗೆ ನೀರು ತೆಗೆದುಕೊಂಡು ಹೋಗಲು ನಮ್ಮ ಅಭ್ಯಂತರವಿಲ್ಲ ಆದರೆ ಮಾಗಡಿ ಮತ್ತು ರಾಮನಗರಕ್ಕೆ ತೆಗೆದುಕೊಂಡು ಹೋಗಲು ನಮ್ಮ ತಕರಾರಿದೆ. ಈ ಅವೈಜ್ಞಾನಿಕ ಕಾಮಗಾರಿ ಮಾಡುತ್ತಿರುವುದು ಮತ್ತು ಈ ಕಾಮಗಾರಿಗೆ ನೂರಾರು ಕೋಟಿಯ ಹಣ ವಹಿಸುತ್ತಿರುವುದು ಮಾತ್ರ ಸರ್ಕಾರದ ಯಾವ ಧೋರಣೆ ತೋರುತ್ತಿದೆ ಎಂಬುದನ್ನು ರೈತರೇ ಅರ್ಥ ಮಾಡಿಕೊಳ್ಳಬೇಕು ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ನಾವುಗಳು ಮತ ಹಾಕಿ ಗೆಲ್ಲಿಸಿರುವ ಜನಪ್ರತಿನಿಧಿಗಳು ಕೇವಲ ರಸ್ತೆ ಸಿಸಿ ಕಾಮಗಾರಿಗೆ ಮಾತ್ರ ಸೀಮಿತವಾಗಿದ್ದಾರೆ. ರೈತರಿಗೆ ಮರಣ ಶಾಸನವಾಗುತ್ತಿರುವ ಹೇಮಾವತಿ ಎಕ್ಸಪ್ರೆಸ್ ಲಿಂಕ್ ಕಾಮಗಾರಿ ಸ್ಥಗಿತಗೊಳಿಸುವ ಸಲುವಾಗಿ ಹಲವು ಬಾರಿ ಹೋರಾಟ ಮಾಡಿದರು ಜಿಲ್ಲೆಯ ಸಂಸದರು ಹಾಗೂ ಸಚಿವರು ಶಾಸಕರು ಮಾತ್ರ ಕಾಮಗಾರಿ ಸ್ಥಗಿತ ಮಾಡುವ ಬಗ್ಗೆ ಯಾವುದೇ ಕ್ರಮವಹಿಸದಿರುವುದು ಬೇಸರದ ಸಂಗತಿ ಎಂದರು.ಇದೇ ಸಂದರ್ಭದಲ್ಲಿ ಪ್ರತಿಭಟನ ನಿರತರನ್ನು ಕಡಬ ಹೋಬಳಿ ಅತ್ತಿಕಟ್ಟೆ ಗ್ರಾಮದಲ್ಲಿ ತಡದ ಪೊಲೀಸರು ಪ್ರತಿಭಟನೆ ನೆಡೆಸುತ್ತಿದ್ದ ರೈತರು. ಮುಖಂಡರನ್ನು ವಶಕ್ಕೆ ಪಡೆದು ಬಂಧಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಹೆಚ್. ಟಿ. ಭೈರಪ್ಪ. ಪಂಚಾಕ್ಷರಿ, ರೈತ ಸಂಘದ ಸಿ.ಜಿ .ಲೋಕೇಶ್, ಕಾಡಶೆಟ್ಟಿಹಳ್ಳಿ ಸತೀಶ್, ಇತರ ಮುಖಂಡರು ನೂರಾರು ಸಂಖ್ಯೆಯ ರೈತರು ಇದ್ದರು.ಕೋಟ್... 1 ಈ ಕಾಮಗಾರಿ ಅವೈಜ್ಞಾನಿಕವಾಗಿದ್ದು ತುಮಕೂರು ಜಿಲ್ಲೆಗೆ ಹಂಚಿಕೆಯಾಗಿರುವ 24.5 ಟಿಎಂಸಿ ನೀರನ್ನು ಕಳ್ಳ ಮಾರ್ಗದಲ್ಲಿ ರಾಮನಗರ, ಮಾಗಡಿ ಇತರೇ ನಗರಗಳಿಗೆ ತೆಗೆದುಕೊಂಡು ಹೋಗಲು ನೀರಾವರಿ ಸಚಿವ ಡಿ. ಕೆ. ಶಿವಕುಮಾರ್ ಮುಂದಾಗಿದ್ದಾರೆ. ನಮ್ಮ ಜಿಲ್ಲೆಗೆ ನೀರು ಸಿಗದಂತೆ ಮಾಡಲು ಪೊಲೀಸ್ ಇಲಾಖೆ ಬಳಸಿಕೊಂಡು ಸುಮಾರು 400ಕ್ಕೂ ಪೊಲೀಸ್ ಸಿಬ್ಬಂದಿಗಳ ಭದ್ರತೆಯಲ್ಲಿ ಹೇಮಾವತಿ ಲಿಂಕ್ ಕೆನಲ್ ಕಾಮಾಗಾರಿ ಮಾಡಿಸಲು ಸಚಿವರು ಮುಂದಾಗಿರುವುದು ಸರ್ಕಾರದ ದೌರ್ಜನ್ಯ ತೋರುತ್ತದೆ. - ಎ. ಗೋವಿಂದರಾಜು, ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ