ನ್ಯಾಯಾಲಯಗಳಿಗೆ ಬಂದು ಸಲಹೆ ಪಡೆದು ಕಾನೂನು ಸೇವಾ ಪ್ರಾಧಿಕಾರದ ಸಹಕಾರ ಪಡೆಯಬೇಕು.

ಕೊಪ್ಪಳ: ಕಾನೂನು ಸ್ವಯಂ ಸೇವಕರ ಪಡೆ ನಿರ್ಮಾಣವಾಗಿದೆ. ನ್ಯಾಯಾಧೀಶರು ನೇರವಾಗಿ ಮನೆ ಮನೆಗೆ ಹೋಗಲು ಆಗುವುದಿಲ್ಲ. ಉಚಿತವಾಗಿ ಪ್ರಕರಣ ನಡೆಸಲು ಕಾನೂನು ಸೇವಾ ಪ್ರಾಧಿಕಾರದಿಂದ ಸೇವೆ ನೀಡಲಾಗುತ್ತದೆ. ಕಾನೂನು ಸೇವಾ ಪ್ರಾಧಿಕಾರದ ಸವಲತ್ತು ಮುಟ್ಟಿಸುವ ಕೆಲಸ ಅರೆಕಾಲಿಕ ಸೇವಾ ಸ್ವಯಂ ಸೇವಕರು ಮಾಡಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಚಂದ್ರಶೇಖರ್‌ ಹೇಳಿದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಔಟ್ ಲಾವ್ಡ್ ಇಂಡಿಯಾ ಫೌಂಡೇಶನ್ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ 3 ದಿನಗಳ ತರಬೇತಿ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ನ್ಯಾಯಾಲಯಗಳಿಗೆ ಬಂದು ಸಲಹೆ ಪಡೆದು ಕಾನೂನು ಸೇವಾ ಪ್ರಾಧಿಕಾರದ ಸಹಕಾರ ಪಡೆಯಬೇಕು.‌ ನ್ಯಾಯಾಲಯಗಳಲ್ಲಿ ಲಕ್ಷಾಂತರ ಪ್ರಕರಣ ಬಾಕಿ ಉಳಿದಿವೆ. ಲೋಕ್ ಅದಾಲತ್ ರಾಜಿ ಮಾಡಿ ಬಗೆಹರಿಸಿಕೊಳ್ಳಬಹುದಾಗಿದೆ. ಪ್ರಕರಣ ರಾಜಿ ಮಾಡಿಕೊಳ್ಳಲು ಕಕ್ಷಿದಾರರು ಅಹಂ ಬಿಡಬೇಕು. ಸಹೋದರ ಸಂಬಂಧಿಗಳಲ್ಲಿ ಆಸ್ತಿ ವಿಚಾರಕ್ಕಾಗಿ ಪ್ರಕರಣ ನ್ಯಾಯಲಯಕ್ಕೆ ಬರುತ್ತದೆ. ಇಲ್ಲಿ ಮಾತುಕತೆ ಮೂಲಕ ಬಗೆಹರಿಸಿಕೊಂಡರೆ ಚೆನ್ನಾಗಿರುತ್ತದೆ. ಮನಸ್ತಾಪ ಬದಿಗಿಟ್ಟು ಇಂತಹ ಪ್ರಕರಣ ರಾಜಿ ಮಾಡಿಕೊಳ್ಳಬೇಕು. ಈ ಕೆಲಸವೂ ಸಹ ಅರೆಕಾಲಿಕ ಸೇವಾ ಸ್ವಯಂ ಸೇವಕರದು ಆಗಿದೆ ಎಂದರು.

ಕಾನೂನು ಸಾಕ್ಷರತೆ ಜನರಿಗೆ ಬಹಳ ಮುಖ್ಯವಾಗಿದೆ. ದೇಶದ ಕೋಟ್ಯಂತರ ಜನರಿಗೆ ಕಾನೂನು ಅರಿವು ಮೂಡಿಸಬೇಕು. ಜನಸಾಮಾನ್ಯರಿಗೆ ಕಾನೂನಿನ ಕನಿಷ್ಠ ಜ್ಞಾನ ನೀಡಬೇಕು. ಗ್ರಾಮೀಣ ಭಾಗದಲ್ಲಿ ವಿಲ್ ಬಗ್ಗೆ ಮಾಹಿತಿ ಸಾರ್ವಜನಿಕರಿಗೆ ನೀಡಬೇಕು. ಒಂದು ವಿಲ್ ಬರೆದರೆ ಹತ್ತು ಕೇಸ್ ಕಡಿಮೆಯಾದಂತೆ ಎಂದು ಹೇಳಿದರು.

ಪ್ರಸ್ತಾವಿಕವಾಗಿ ಮಾತನಾಡಿದ ನ್ಯಾಯಧೀಶ ಮಹಾಂತೇಶ ದರಗದ, ಅರೇಕಾಲಿಕ ಸ್ವಯಂ ಸೇವಕರಿಗೆ ಕರ್ತವ್ಯ ಹಾಗೂ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ನೇಮಕ‌ ಮಾಡಲಾಗಿದೆ. ಕಾನೂನು ಸೇವಾ ಪ್ರಾಧಿಕಾರ ಹಾಗೂ ಕಕ್ಷಿದಾರರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ವಿ.ಎಂ. ಭೂಸನೂರಮಠ ಮಾತನಾಡಿ, ಉಚಿತ ಕಾನೂನು ಸೇವೆ ಮನೆ ಬಾಗಿಲಿಗೆ ಮುಟ್ಟಿಸಬೇಕು. ಜನರಿಗೆ ಕಾನೂನು ಜ್ಞಾನದ ಅವಶ್ಯವಿದೆ. ಸಾರ್ವಜನಿಕರು ಸಹ ಸಹನೆಯಿಂದ ಕಾನೂನು ಅರಿತುಕೊಂಡು ನ್ಯಾಯ ಪಡೆಯಬೇಕು. ವಕೀಲ ವೃತ್ತಿ ಕೇವಲ ಹಣ ಮಾಡುವಕ್ಕಾಗಿ ಅಲ್ಲ. ವೃತ್ತಿ ಗೌರವದೊಂದಿಗೆ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು. ವಕೀಲರು ಸತ್ಯ ಹಾಳಾಗದಂತೆ ಕೆಲಸ ಮಾಡಬೇಕು ಎಂದರು.

ನ್ಯಾಯವಾದಿ ಎ.ವಿ. ಕಣವಿ ಮಾತನಾಡಿ, ಕಾನೂನು ಅರ್ಥ ಮಾಡಿಕೊಂಡು ಜನಸಾಮಾನ್ಯರಿಗೆ ನ್ಯಾಯ ಸಿಗುವಂತೆ ಮಾಡಬೇಕು. ಒಂದು ಕೋಟಿಗಿಂತ ಅಧಿಕವಾಗಿ ವ್ಯಾಜ್ಯಗಳಿವೆ. ಸರ್ಕಾರ ಕಾನೂನು ಇಲಾಖೆಗೆ ನೀಡಬೇಕಾದ ಸೌಲಭ್ಯ ನೀಡುತ್ತಿಲ್ಲ.‌ ಜನಸಾಮಾನ್ಯರಿಗೆ ಶೀಘ್ರ ನ್ಯಾಯದಾನ ಸಿಗಬೇಕು. ಬಡವರಿಗೆ, ದಲಿತರಿಗೆ ಸಮಾನ ನ್ಯಾಯ ಸಿಗಬೇಕು ಸಮಾಜಿಕ ನ್ಯಾಯ ಸಿಗಬೇಕು ಎಂದು ಹೇಳಿದರು.

ಡಿ.ಕೆ.ಸರಸ್ವತಿದೇವಿ, ಪ್ರಕಾಶ ಹಾದಿಮನಿ, ಸಂಪನ್ಮೂಲ ವ್ಯಕ್ತಿ ವೆಂಕಟೇಶ, ಜೂಮಿ, ಜಾಮ್‌,ಸಿದ್ಧಾರ್ಥ ಪಾಟೀಲ್‌ ಸೇರಿದಂತೆ ಮೊದಲಾದವರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ನಿರ್ಮಲಾ ಪ್ರಾರ್ಥಿಸಿದರು, ಪ್ರದೀಪ ಉಂಕಿ ವಂದಿಸಿದರು.