ತಾನು ಕೆಲಸ ಮಾಡುತ್ತಿದ್ದ ಚಿನ್ನಾಭರಣ ತಯಾರಿಕ ಸಂಸ್ಥೆಯಲ್ಲಿ ಬಂಗಾರ ಕದ್ದು ಪರಾರಿಯಾಗಿದ್ದ ಕೆಲಸಗಾರನನ್ನು ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಾನು ಕೆಲಸ ಮಾಡುತ್ತಿದ್ದ ಚಿನ್ನಾಭರಣ ತಯಾರಿಕ ಸಂಸ್ಥೆಯಲ್ಲಿ ಬಂಗಾರ ಕದ್ದು ಪರಾರಿಯಾಗಿದ್ದ ಕೆಲಸಗಾರನನ್ನು ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್‌ ನಗರದ ನಿವಾಸಿ ನೂರ್ ಇಸ್ಲಾಂ ಮಲ್ಲಿಕ್ ಬಂಧಿತ. ಆರೋಪಿಯಿಂದ 679 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ರಾಜಾಜಿನಗರದ 1ನೇ ಹಂತದಲ್ಲಿರುವ ಆಭರಣ ಅಂಗಡಿಯಲ್ಲಿ ಕಳ್ಳತನ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆಗಿಳಿದ ಇನ್ಸ್‌ಪೆಕ್ಟರ್ ಗುರುಪ್ರಸಾದ್ ನೇತೃತ್ವದ ತಂಡ, ಕಳವು ಬಳಿಕ ಕುಟುಂಬ ಸಮೇತ ಊರಿಗೆ ಪರಾರಿಯಾಗಿದ್ದ ನೂರ್‌ನನ್ನು ತಾಂತ್ರಿಕ ಮಾಹಿತಿ ಆಧರಿಸಿ ಬಂಧಿಸಿದೆ.

ನಂಬಿಕೆ ದ್ರೋಹ ಎಸಗಿದ ನೂರ್

ಹಲವು ವರ್ಷಗಳಿಂದ ‘ಗುರುಪ್ರಸಾದ್ ಜ್ಯುವೆಲರ್ಸ್‌ ಪ್ರೈ.ಲಿಮಿಟೆಡ್‌’ ಹೆಸರಿನ ಚಿನ್ನಾಭರಣ ತಯಾರಿಕೆ ಸಂಸ್ಥೆಯನ್ನು ರಾಜೇಶ್ ಸದಾನಂದ ರೇವಣಕರ್‌ ನಡೆಸುತ್ತಿದ್ದಾರೆ. ವ್ಯಾಪಾರಿಗಳಿಂದ ಗಟ್ಟಿ ರೂಪದಲ್ಲಿ ಬಂಗಾರ ಪಡೆದು ಬಳಿಕ ಅವರ ಬೇಡಿಕೆ ಅನುಗುಣವಾಗಿ ವಿವಿಧ ವಿನ್ಯಾಸದಲ್ಲಿ ಆಭರಣ ತಯಾರಿಸಿ ರಾಜೇಶ್ ಕೊಡುತ್ತಿದ್ದರು. ಅಲ್ಲದೆ ಸಗಟು ದರದಲ್ಲಿ ಅವರು ಚಿನ್ನಾಭರಣ ಸಹ ಮಾರಾಟ ಮಾಡುತ್ತಾರೆ. ಹಾಗಾಗಿ ಕೆಳ ಮಹಡಿಯಲ್ಲಿ ಆಭರಣ ಮಾರಾಟ ಮಳಿಗೆ ಇದ್ದರೆ, ಮೊದಲ ಮಹಡಿಯಲ್ಲಿ ಆಭರಣ ತಯಾರಿಕೆ ಘಟಕವನ್ನು ರಾಜೇಶ್ ನಡೆಸುತ್ತಿದ್ದಾರೆ.

ಆರೋಪಿ ನೂರ್‌ 5 ವರ್ಷಗಳಿಂದ ರಾಜೇಶ್ ಅವರ ಕೆಲಸ ಮಾಡುತ್ತಿದ್ದ. ಮಾಲಿಕರ ವಿಶ್ವಾಸಕ್ಕೆ ಪಾತ್ರನಾಗಿದ್ದ. ಕಳೆದ ತಿಂಗಳು ಬಳೆಗಳನ್ನು ತಯಾರಿಸಲು ನೂರ್‌ಗೆ 679 ಗ್ರಾಂ ಚಿನ್ನವನ್ನು ರಾಜೇಶ್ ಕೊಟ್ಟಿದ್ದರು. ಆದರೆ ಈ ಬಂಗಾರವನ್ನು ಮಾಲೀಕರಿಗೆ ಗೊತ್ತಾಗದಂತೆ ಅಂಗಡಿಯಿಂದ ಆತ ಕಳವು ಮಾಡಿದ್ದ.

ಬಳಿಕ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಮರುದಿನವೇ ತನ್ನೂರಿಗೆ ಪರಿವಾರ ಸಮೇತ ಆರೋಪಿ ಪರಾರಿಯಾಗಿದ್ದ. ಇತ್ತ ಅಂಗಡಿಯಲ್ಲಿ ಚಿನ್ನ ಕಾಣದೆ ಹೋದಾಗ ನೂರ್ ಮೇಲೆ ಶಂಕೆ ಬಂದಿದೆ. ಅಷ್ಟರಲ್ಲಿ ಆತ ಸಹ ಕೆಲಸಕ್ಕೆ ಬಾರದೆ ನಾಪತ್ತೆಯಾಗಿದ್ದ. ಕೊನೆಗೆ ಪೊಲೀಸರಿಗೆ ರಾಜೇಶ್ ದೂರು ನೀಡಿದ್ದಾರೆ. ತಾಂತ್ರಿಕ ಮಾಹಿತಿ ಆಧರಿಸಿ ಪಶ್ಚಿಮ ಬಂಗಾಳದ ಬರ್ದಮಾನ್ ಜಿಲ್ಲೆಯಲ್ಲಿ ಆರೋಪಿಯನ್ನು ಬಂಧಿಸಿ ಪೊಲೀಸರು ಕರೆತಂದಿದ್ದಾರೆ.

ಮನೇಲಿ ಚಿನ್ನ ಕದ್ದ 3 ಫುಡ್‌

ಡೆಲಿವರಿ ಬಾಯ್‌ಗಳ ಸೆರೆ

ಬೆಂಗಳೂರು: ಹಗಲು ಹೊತ್ತಿನಲ್ಲಿ ಮನೆಗಳ್ಳತನ ಮಾಡುತ್ತಿದ್ದ ಮೂವರು ಫುಡ್‌ ಡೆಲಿವರಿ ಬಾಯ್‌ನನ್ನು ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಮಲಾನಗರದ ಎಂ.ಶ್ರೀನಿಧಿ ಅಲಿಯಾಸ್ ಸುನಾಮಿ, ಭುವನೇಶ್ ಅಲಿಯಾಸ್ ಮಿಕ್ಕಿ, ಎಚ್.ಚೇತನ್ ಅಲಿಯಾಸ್ ಕರಿಯ ಬಂಧಿತರಾಗಿದ್ದು, ಆರೋಪಿಗಳಿಂದ 3 ಲಕ್ಷ ರು. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಸುಬ್ರಹ್ಮಣ್ಯನಗರದ 13ನೇ ಮುಖ್ಯರಸ್ತೆಯಲ್ಲಿ ಮನೆಗಳ್ಳತನ ನಡೆದಿತ್ತು. ಈ ಕೃತ್ಯದ ತನಿಖೆ ನಡೆಸಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸೇರಿ ಇತರೆ ಬಾತ್ಮಿ ಮೇರೆಗೆ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮೂವರ ಪೈಕಿ ಶ್ರೀನಿಧಿ ಕ್ರಿಮಿನಲ್ ಹಿನ್ನೆಲೆಯುವಳ್ಳನಾಗಿದ್ದು, ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಆತನ ಮೇಲೆ ಮನೆಗಳ್ಳತನ ಪ್ರಕರಣ ಇದೆ. ಉಳಿದ ಇಬ್ಬರು ಆಹಾರ ಹಾಗೂ ದಿನಸಿಗಳನ್ನು ಗ್ರಾಹಕರಿಗೆ ಪೂರೈಸುವ ಡೆಲವರಿ ಕೆಲಸ ಬಾಯ್‌ ಕೆಲಸ ಮಾಡುತ್ತಿದ್ದರು.