ಕಾರ್ಮಿಕನನ್ನು ತಮಿಳುನಾಡು ಮೂಲದ ಅಶೋಕ್ ಎಂದು ಗುರುತಿಸಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ಕಾರ್ಮಿಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ತುರ್ತುಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೂಲಿ ಹಣ ಕೊಡದೆ ವಂಚನೆ । ಗೌರಿಬಿದನೂರಿನ ಸಿಂಗೇನಹಳ್ಳಿಯ ಮೌನಿಶಾ ಫಾರ್ಮ್‌ನಲ್ಲಿ ಘಟನೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಮಾಡಿದ ಕೆಲಸಕ್ಕೆ ಕೂಲಿ ಹಣ ನೀಡದೆ ವಂಚನೆ ಮಾಡಿರುವುದೇ ಅಲ್ಲದೇ ಕಳ್ಳತನದ ಆರೋಪ ಹೊರಿಸಿದ್ದಾರೆ ಎಂದು ಆರೋಪಿಸಿ ಮನನೊಂದ ಕಾರ್ಮಿಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಸಿಂಗೇನಹಳ್ಳಿಯ ಮೌನಿಶಾ ಫಾರ್ಮ್‌ನಲ್ಲಿ ನಡೆದಿದೆ.
ಕಾರ್ಮಿಕನನ್ನು ತಮಿಳುನಾಡು ಮೂಲದ ಅಶೋಕ್ ಎಂದು ಗುರುತಿಸಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ಕಾರ್ಮಿಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ತುರ್ತುಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಇಲಾಖೆಯ ಶಿರಸ್ತೆದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಜನಿಕಾಂತ್ ರೆಡ್ಡಿಯವರಿಗೆ ಗೌರಿಬಿದನೂರು ತಾಲೂಕಿನ ಸಿಂಗೇನಹಳ್ಳಿಯ ಬಳಿ ಮೌನಿಶಾ ಫಾರ್ಮ್ ಇದ್ದು, ಇಲ್ಲಿ ಕಳೆದ ನಾಲ್ಕು ವರ್ಷಗಳಿಂದ ತಮಿಳುನಾಡಿನಿಂದ ಬಂದು ಅಶೋಕ್ ರಾಜ್ ಮತ್ತು ಅವರ ಪತ್ನಿ ಸತ್ಯಾ ಕೂಲಿ ಕೆಲಸ ಮಾಡುತ್ತಾ ಅಲ್ಲಿಯೇ ವಾಸವಾಗಿದ್ದರು.ತಮ್ಮ ಪತಿಗೆ ಬರಬೇಕಿದ್ದ ಕೂಲಿ ಹಣವನ್ನು ನೀಡದೆ ವಂಚಿಸಲಾಗಿದೆ ಮತ್ತು ಬರಬೇಕಿದ್ದ ಕೂಲಿ ಹಣ ಕೇಳಿದಾಗ ಫಾರಂ ಹೌಸ್ ನಲ್ಲಿ ಸುಮಾರು 15 ಲಕ್ಷ ಮೌಲ್ಯದ ವಸ್ತುಗಳನ್ನು ಕಳುವು ಮಾಡಿ ಮಾರಿಕೊಂಡಿದ್ದೀರಿಎಂದು ರಜನಿಕಾಂತ್ ರೆಡ್ಡಿ ಆರೋಪ ಹೊರಿಸಿದ್ದಾರೆ ಎಂದು ಅಶೋಕ್ ರಾಜ್ ಅವರ ಪತ್ನಿ ಸತ್ಯಾ ಆರೋಪಿಸಿದ್ದಾರೆ. ಈ ವಿಚಾರದಲ್ಲಿ ಮನನೊಂದ ಅಶೋಕ್ ರಾಜ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.ಘಟನೆ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣದ ಮಾಹಿತಿ ದಾಖಲಾಗಿದ್ದು, ಆರೋಪಗಳ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
