ಕಲ್ಲು ಬಂಡೆ ಉರುಳಿ ಕಾರ್ಮಿಕ ಸಾವು

| Published : Sep 04 2025, 01:00 AM IST

ಸಾರಾಂಶ

ಟೇಕಲ್‌ನ ಹುಣಸಿಕೋಟೆಯಲ್ಲಿ ಮಂಗಳವಾರ ಸಂಜೆ ಬಂಡೆಯನ್ನು ಸಿಡಿಸಲು ಬಂಡೆ ಕೇಪು ಹಾಕಿ ಅದರ ಕೆಳ ಭಾಗದಲ್ಲಿ ಮಣ್ಣು ತೆಗೆಯುತ್ತಿದ್ದ ವೇಳೆ ಹಿಂದೆ ಇದ್ದ ಬಂಡೆ ಆಕಸ್ಮಿಕವಾಗಿ ಉರುಳಿದೆ. ಈ ಸಂದರ್ಭದಲ್ಲಿ ಮಂಜುನಾಥ ಬಂಡೆ ಕೆಳಗೆ ಸಿಲುಕಿ ಸತ್ತಿದ್ದಾರೆ. ಮತ್ತೊಬ್ಬ ಕಾರ್ಮಿಕ ಸುನಿಲ್ ಅದೃಷ್ಟವಶಾತ್ ಸ್ಥಳದಿಂದ ಜಿಗಿದು ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ

ಕನ್ನಡಪ್ರಭ ವಾರ್ತೆ ಟೇಕಲ್

ಟೇಕಲ್‌ನ ಹುಣಸಿಕೋಟೆಯ ಪಟಾಲಮ್ಮ ದೇವಾಲಯದ ಹಿಂಭಾಗದ ಕಲ್ಲು ಕ್ವಾರಿಯಲ್ಲಿ ಮಂಗಳವಾರ ಸಂಜೆ ಕಾರ್ಯನಿರ್ವಹಿಸುವ ವೇಳೆ ಬಂಡೆ ಉರುಳಿ ಬಿದ್ದು ಪರಿಣಾಮ ಸ್ಥಳದಲ್ಲಿ ಒಬ್ಬ ಕಾರ್ಮಿಕ ಮೃತಪಟ್ಟಿದ್ದು, ಮತ್ತೊಬ್ಬನ ಕೈ ಕಾಲುಗಳಿಗೆ ತೀವ್ರ ಗಾಯವಾಗಿದೆ.

ಮೃತಪಟ್ಟ ವ್ಯಕ್ತಿಯನ್ನು ಹುಣಸಿಕೋಟೆ ಮಂಜುನಾಥ(೪೫) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಆಂಧ್ರಪ್ರದೇಶದ ಕುಪ್ಪಂನ ಲಕ್ಷ್ಮೀಪುರಂನ ನಿವಾಸಿ ಸುನಿಲ್‌ನನ್ನು ಕೋಲಾರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಕಸ್ಮಿಕವಾಗಿ ಉರುಳಿದ ಬಂಡೆ

ಮಂಗಳವಾರ ಸಂಜೆ ಬಂಡೆಯನ್ನು ಸಿಡಿಸಲು ಬಂಡೆ ಕೇಪು ಹಾಕಿ ಅದರ ಕೆಳ ಭಾಗದಲ್ಲಿ ಮಣ್ಣು ತೆಗೆಯುತ್ತಿದ್ದ ವೇಳೆ ಹಿಂದೆ ಇದ್ದ ಬಂಡೆ ಆಕಸ್ಮಿಕವಾಗಿ ಉರುಳಿದೆ. ಈ ಸಂದರ್ಭದಲ್ಲಿ ಮಂಜುನಾಥ ಬಂಡೆ ಕೆಳಗೆ ಸಿಲುಕಿ ಸತ್ತಿದ್ದಾರೆ. ಮತ್ತೊಬ್ಬ ಕಾರ್ಮಿಕ ಸುನಿಲ್ ಅದೃಷ್ಟವಶಾತ್ ಸ್ಥಳದಿಂದ ಜಿಗಿದು ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ. ರಾತ್ರಿಯಿಡಿ ಗ್ರಾಮಸ್ಥರು ಹಾಗೂ ಸಾರ್ವಜನಿಕರ ಕಾರ್ಯಾಚರಣೆ ನಡೆಸಿ ಶವವನ್ನು ಹೊರ ತೆಗೆದಿದ್ದಾರೆ. ನಂತರ ಶವವನ್ನು ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.

ಸ್ಥಳಕ್ಕೆ ಎಸ್‌ಪಿ ಭೇಟಿ, ಪರಿಶೀಲನೆ

ಘಟನೆ ನಡೆದ ಸ್ಥಳಕ್ಕೆ ಕೋಲಾರದ ಜಿಲ್ಲಾ ಎಸ್‌ಪಿ ನಿಖಿಲ್.ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುಡ್ಡ ಹತ್ತಿದ ಎಸ್‌ಪಿ ರವರು ಮಂದ ಬೆಳಕಿನಲ್ಲಿ ಟಾರ್ಚ್ ಹಾಕಿಕೊಂಡು ಘಟನೆ ನಡೆದ ಸ್ಥಳ ಪರಿಶೀಲನೆ ನಡೆಸಿದರು. ನಂತರ ಮಾಹಿತಿ ಪಡೆದರು.

ತಹಸೀಲ್ದಾರ್ ರೂಪಾ, ಅಡಿಷನಲ್ ಎಸ್.ಪಿ.ರವಿಶಂಕರ್, ಡಿವೈಎಸ್‌ಪಿ, ಎಚ್.ಎಂ.ನಾಗದೆ, ಮಾಸ್ತಿ ಠಾಣೆ ಇನ್ಸ್‌ಪೆಕ್ಟರ್‌ ಬಿ.ಓಂಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿದರು. ಕ್ವಾರಿಯಲ್ಲಿ ಹುಣಸಿಕೋಟೆ ಮಂಜುನಾಥ ಜೆಸಿಬಿ ಚಾಲಕನಾಗಿ ಕಾರ್ಮಿಕನಾಗಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮೃತನ ಪತ್ನಿ ಅರುಣ ನೀಡಿದ ದೂರಿನ ಅನ್ವಯ ಮಾಸ್ತಿ ಪೋಲಿಸರು ಕೇಸು ದಾಖಲಿಸಿಕೊಂಡಿದ್ದಾರೆ. ಕ್ವಾರಿ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.